ಮೈಸೂರು: ಪ್ರೊಫೆಸರ್ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿದ ಪಿಹೆಚ್‌ಡಿ ವಿದ್ಯಾರ್ಥಿನಿ
1 min readಮೈಸೂರು ವಿವಿ ಪ್ರೊಫೆಸರ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ತನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿರುವುದಾಗಿ ಪಿಹೆಚ್‌ಡಿ ವಿದ್ಯಾರ್ಥಿನಿ ಆರೋಪಿಸಿದ್ದಾರೆ.
ಮೈಸೂರು: ಪ್ರೊಫೆಸರ್ ವಿರುದ್ಧ ದೈಹಿಕ, ಮಾನಸಿಕ ಕಿರುಕುಳ ಹಾಗು ಜಾತಿ ನಿಂದನೆ ಆರೋಪಗಳನ್ನು ಮಾಡಿರುವ ಪಿಹೆಚ್‌ಡಿ ವಿದ್ಯಾರ್ಥಿನಿಯೊಬ್ಬರು ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಕರಣದ ವಿವರ: ಮೈಸೂರು ವಿಶ್ವವಿದ್ಯಾನಿಲಯದ ಮೈಕ್ರೋ ಬಯೋಲಜಿ ವಿಭಾಗದ ಪ್ರೊ.ಶುಭ ಗೋಪಾಲ್ ವಿರುದ್ದ ಪ್ರಕರಣ ದಾಖಲಾಗಿದೆ. ಮೈಸೂರಿನ ನಿವಾಸಿ 29 ವರ್ಷದ ಪಿಹೆಚ್‌ಡಿ ವಿದ್ಯಾರ್ಥಿನಿ ದೂರು ನೀಡಿದ್ದಾರೆ.
ದೂರಿನ ವಿವರ: ಪ್ರೊ.ಶುಭ ಗೋಪಾಲ್ ಮಾರ್ಗದರ್ಶನದಲ್ಲಿ ರಿಸರ್ಚ್ ಸ್ಕಾಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ಪ್ರೊಫೆಸರ್ ನನಗೆ ದೈಹಿಕ, ಮಾನಸಿಕ ಕಿರುಕುಳ ನೀಡಿದ್ದಲ್ಲದೇ ಜಾತಿ ನಿಂದನೆ ಮಾಡಿದ್ದಾರೆ. ಫೆಲೋಶಿಪ್ ಬಿಲ್‌ಗೆ ಸಹಿ ಮಾಡಲು ನನ್ನಿಂದ ಉಡುಗೊರೆಗಳನ್ನು ತರಿಸಿಕೊಳ್ಳುತ್ತಿದ್ದರು. ಪಂಚತಾರಾ ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಿ ನನ್ನ ಹಣದಿಂದಲೇ ಬಿಲ್ ಪಾವತಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಆದರೆ ಅವರು ದೂರನ್ನು ವಾಪಸ್ ತೆಗೆದುಕೊಂಡು ಮಾರ್ಗದರ್ಶಕರನ್ನು ಬದಲಾಯಿಸಿಕೊಳ್ಳುವಂತೆ ನನಗೆ ಒತ್ತಡ ಹೇರಿದ್ದಾರೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾರೆ.