ರಸ್ತೆ ಹಂಪ್‌ಗಳಿಗೆ ಬಣ್ಣ ಬಳಿದು ಅಪಘಾತ ತಪ್ಪಿಸಿ
1 min readರಸ್ತೆ ಹಂಪ್‌ಗಳಿಗೆ ಬಣ್ಣ ಬಳಿದು ಅಪಘಾತ ತಪ್ಪಿಸಿ
ರಸ್ತೆಗಳಲ್ಲಿ ಅಪಾಯಕಾರಿಯಾದ ರಸ್ತೆ ಉಬ್ಬುಗಳು
ಅಪಘಾತ ತಪ್ಪಿಸಬೇಕಾದ ರಸ್ತೆ ಉಬ್ಬುಗಳಿಂದಲೇ ಅಪಘಾತಗಳು
ರಸ್ತೆ ಅಪಘಾತ ತಪ್ಪಿಸಲೆಂದು ನಿರ್ಮಿಸಿರುವ ರಸ್ತೆ ಉಬ್ಬುಗಳಿಂದಲೇ ಅಪಘಾತಗಳು ಹೆಚ್ಚಾಗಿದ್ದು, ಅವೈನಿಕ ರಸ್ತೆ ಉಬ್ಬುಗಳು ಬೈಕ್ ಸವಾರರಿಗೆ ಗೋಚರಿಸದೆ ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಅಪಘಾತಗಳಿಗೆ ಕಾರಣವಾಗುತ್ತಿರೋದು ವಿಪರ್ಯಾಸ. ಇನ್ನು ರಸ್ತೆ ಉಬ್ಬುಗಳಿವೆ ಎಂಬ ಯಾವುದೇ ಸೂಚನೆ ಇಲ್ಲದ ಕಾರಣ ಅಪಘಾತಗಳು ಹೆಚ್ಚಾಗುತ್ತಿದ್ದು, ಇವುಗಳ ಬಗ್ಗೆ ಸೂಚನಾ ಫಲಕಗಳನ್ನಾದರೂ ಹಾಕಬೇಕಾದ ಅಗತ್ಯವಿದೆ.
ವಾಹನಗಳ ವೇಗ ನಿಯಂತ್ರಣಕ್ಕಾಗಿ ಬಾಗೇಪಲ್ಲಿ ಪಟ್ಟಣದ ವಿವಿಧ ರಸ್ತೆಗಳಲ್ಲಿ ರಸ್ತೆ ಉಬ್ಬುಗಳನ್ನು ಅಳವಡಿಸಲಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ, ಗ್ರಾಮೀಣ ಪ್ರದೇಶದಲ್ಲಿಯೂ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಇವು ವಾಹನಗಳ ವೇಗನಿಯಂತ್ರಣಕ್ಕೆ ಅಗತ್ಯವಾಗಿದ್ದರೂ ಅವೇ ಮುಳುವಾಗಿವೆ. ಇದಕ್ಕೆ ಕಾರಣ ರಸ್ತೆ ಉಬ್ಬುಗಳಿರುವ ಬಗ್ಗೆ ಯಾವುದೇ ಸೂಚನಾ ಫಲಕಗಳಾಗಲೀ, ಉಬ್ಬುಗಳಿಗೆ ಬಣ್ಣವಾಗಲೀ ಬಳಿಯದ ಕಾರಣ ಅಪಘಾತಗಳಿಗೆ ಕಾರಣವಾಗುತ್ತಿದೆ.
ಈ ಹಿಂದೆ ಯಾವಾಗಲೋ ನಿರ್ಮಿಸಿರುವ ಹಲವು ರಸ್ತೆ ಉಬ್ಬುಗಳಿಗೆ ಬಣ್ಣ ಬಳಿದಿದ್ದರೂ ಅವು ಕಾಲ ಕ್ರಮೇಣ ಮಾಸಿಹೋಗಿ ಹಲವು ವರ್ಷಗಳೇ ಕಳದಿವೆ. ಅಪಘಾತ ನಿಯಂತ್ರಣಕ್ಕಾಗಿ ಅಳವಡಿಸಿದ್ದ ಹಂಪ್‌ಗಳೇ ಈಗ ಅಪಘಾತಕ್ಕೆ ಕಾರಣವಾಗಿರೋದು ಮಾತ್ರ
ವಿಪರ್ಯಾಸವಾಗಿದೆ. ಪಟ್ಟಣದ ಮುಖ್ಯ ರಸ್ತೆಯಲ್ಲಿ ಹಂಪ್‌ಗಳ ಬಣ್ಣ ಮಾಸಿದ ಪರಿಣಾಮ ಪಟ್ಟಣದ ಬಹುತೇಕ ಭಾಗಗಳಲ್ಲಿ ಅಪಘಾತ ವಲಯ ಸೃಷ್ಟಿಯಾಗಿದೆ. ಬೇರೆ ಊರುಗಳಿಂದ ಬಂದ ಹೊಸ ವಾಹನ ಸವಾರರು ಹಂಪ್‌ಗಳ ಬಗ್ಗೆ ತಿಳಿಯದೆ ವೇಗವಾಗಿ ಬಂದರೆ ಆಪತ್ತು ಕಟ್ಟಿಟ್ಟಬುತ್ತಿ. ಅದರಲ್ಲೂ ರಾತ್ರಿ ಸಂಚರಿಸುವವರು ಹೆಚ್ಚು ಅಪಾಯಕ್ಕೆ ಸಿಲುಕುತ್ತಿದ್ದಾರೆ.
ಪಟ್ಟಣದ ನ್ಯಾಷನಲ್ ಕಾಲೇಜು ರಸ್ತೆ, ಗೂಳೂರು ರಸ್ತೆ, ಮಟನ್ ಮಾರ್ಕೆಟ್ ರಸ್ತೆ, ಭಜನೆ ಮಂದಿರ ರಸ್ತೆ, ನೇತಾಜಿ ಸರ್ಕಲ್ ರಸ್ತೆ, ಗಂಗಮ್ಮ ಗುಡಿ ರಸ್ತೆ, ಮುಖ್ಯವಾಗಿ ಪ್ರವಾಸಿ ಮಂದಿರದ ರಸ್ತೆ ಸೇರಿದಂತೆ ಪಟ್ಟಣದ ವಿವಿಧ ಕಡೆಗಳಲ್ಲಿ ಹಾಕಿರುವ ಹಂಪ್‌ಗಳಲ್ಲಿ ಈಗ ಬಣ್ಣವೇ ಇಲ್ಲ. ಇದರಿಂದ ಇಲ್ಲಿ ಹಂಪ್ ಇದೆ ಎಂದು ದೂರಕ್ಕೆ ಗೊತ್ತಾಗುವುದೇ ಇಲ್ಲ. ಪಟ್ಟಣದ ವಿವಿಧ ಕಡೆಗಳಲ್ಲಿ ಅವೈನಿಕ ಹಂಪ್ ಕಾರಣದಿಂದಾಗಿ ಈ ಹಿಂದೆ ಅಪಘಾತಕ್ಕೆ ಕಾರಣವಾಗುತ್ತಿತ್ತು. ಹೊಸ ಹಂಪ್‌ಗಳನ್ನು ನಿರ್ಮಿಸಿದ ಕೂಡಲೇ ಬಣ್ಣ ಬಳಿದಿದ್ದು, ಅದು ನಿತ್ಯ ವಾಹನ ಸಂಚಾರದಿ0ದ ಮಾಸಿ ಹೋಗಿದೆ. ಮತ್ತೊಮ್ಮೆ ಬಣ್ಣ ಬಳಿಯುವ ಕಾರ್ಯ ನಡೆದೇ ಇಲ್ಲ. ಇನ್ನಾದರೂ ಸಂಬ0ಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಹಂಪ್‌ಗಳಿಗೆ ಬಣ್ಣ ಹಾಕುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.