ಮುಸ್ಲಿಂ ಸಮುದಾಯದವರಿಂದ ಕ್ಷೌರಿಕ ವೃತ್ತಿಗೆ ವಿರೋಧ
1 min readಮುಸ್ಲಿಂ ಸಮುದಾಯದವರಿಂದ ಕ್ಷೌರಿಕ ವೃತ್ತಿಗೆ ವಿರೋಧ
ವಿಜಯಪುರದಲ್ಲಿ ಪ್ರತಿಭಟನೆ ನಡೆಸಿದ ಸವಿತಾ ಸಮುದಾಯ
ತಮ್ಮ ಕುಲ ವೃತ್ತಿ ಇತರರು ಮಾಡಲು ಅನುಮತಿ ನೀಡದಂತೆ ಮನವಿ
ಮುಸ್ಲಿಂ ಯುವಕನೊಬ್ಬ ಕ್ಷೌರಿಕ ವೃತ್ತಿ ಮಾಡುತ್ತಿರುವುದನ್ನು ವಿರೋಧಿಸಿ ಸವಿತಾ ಸಮುದಾಯದವರು ಪ್ರತಿಭಟನೆ ನಡೆಸಿದ ಘಟನೆ ಇಂದು ವಿಜಯಪುರದಲ್ಲಿ ನಡೆಯಿತು. ಧಜಂತ್ರಿ ಸಮುದಾಯ ಕುಲಕಸುಬನ್ನಾಗಿ ಕ್ಷೌರಿಕ ವೃತ್ತಿ ನಡೆಸಿಕೊಂಡು ಬಂದಿದ್ದು, ಇದನ್ನು ಮತ್ತೊಂದು ಧರ್ಮೀಯರು ಮಾಡುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ತಲ ತಲಾಂತರಗಳಿ0ದ ಕ್ಷೌರಿಕ ವೃತ್ತಿಯನ್ನೇ ನಂಬಿ ಜೀವನ ನಡೆಸಿಕೊಂಡು ಬರುತ್ತಿದ್ದು, ಇತ್ತಿಚೆಗೆ ವಿಜಯಪುರದಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಕ್ಷೌರಿಕ ವೃತ್ತಿ ಆರಂಭಿಸಲು ಮುಂದಾಗಿದ್ದಾರೆ. ಕುಲ ಕಸುಬನ್ನು ಇತರರಿಗೆ ಬಿಟ್ಟುಕೊಡುವುದಿಲ್ಲ ಎಂದು ಧಜಂತ್ರಿ ಸಮುದಾಯ ಎಚ್ಚರಿಕೆ ನೀಡಿತು. ಹೋಬಳಿಯ ಸವಿತಾ ಸಮಾಜ ಸಂಘದ ಅಧ್ಯಕ್ಷ ನಂಜು0ಡಪ್ಪ ಮಾತನಾಡಿ, ನಮ್ಮ ಪೂರ್ವಿಕರ ಕಾಲದಿಂದಲೂ ನಾವು ಕ್ಷೌರಿಕ ವೃತ್ತಿ ಮಾಡಿಕೊಂಡು ಬಂದಿದ್ದೇವೆ. ನಮ್ಮ ಮಕ್ಕಳು ಮಾಡುತ್ತಿದ್ದಾರೆ. ವಿಜಯಪುದಲ್ಲಿ 90 ಕುಟುಂಬಗಳು ಈ ವೃತ್ತಿಯ ಮೇಲೆ ಅವಲಂಬಿತರಾಗಿದ್ದೇವೆ ಎಂದರು.
ನಮಗೆ ಈ ಕಸುಬು ಬಿಟ್ಟರೆ ಮತ್ತೊಂದು ಗೊತ್ತಿಲ್ಲ. ಆದರೆ, ಬೇರೆ ಕಡೆಯಿಂದ ಬಂದಿರುವ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಕೂಬಾ ಮಸೀದಿ ಸಮೀಪದಲ್ಲಿ ಕ್ಷೌರಿಕ ಅಂಗಡಿ ತೆರೆಯಲು ಮುಂದಾಗಿದ್ದಾರೆ. ಇದನ್ನು ಖಂಡಿಸಿ ಪುರಸಭೆ ಅಧಿಕಾರಿಗಳಿಗೆ ಮನವಿ ನೀಡಿ, ಯಾವುದೇ ಕಾರಣಕ್ಕೂ ಅವರಿಗೆ ಪರವಾನಗಿ ನೀಡಬಾರದು ಎಂದು ಮನವಿ ಮಾಡಿದ್ದೇವೆ. ಒಂದು ವೇಳೆ ಪುರಸಭೆಯಿಂದ ಪರವಾನಗಿ ನೀಡಿದರೆ ತೀವ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಕಾರ್ಯದರ್ಶಿ ಹರೀಶ್ ಮಾತನಾಡಿ, ಸರ್ಕಾರದಿಂದ ಈ ಕಸುಬು ಮಾಡುವುದಕ್ಕಾಗಿ ಸಹಾಯ ಧನ ನೀಡುತ್ತಾರೆ. ನಾವು ಸಾಲ ಮಾಡಿ ಅಂಗಡಿಗಳನ್ನು ಇಟ್ಟುಕೊಂಡು ಜೀವನ ಮಾಡುತ್ತಿದ್ದೇವೆ. ನಾವು ಜೀವನ ನಡೆಸುವುದು ಕಷ್ಟಕರವಾಗಿರುವಾಗ ಬೇರೆ ಸಮುದಾಯಗಳು ನಮ್ಮ ಕಸುಬು ಮಾಡುವುದರಿಂದ ನಮ್ಮ ಜೀವನಕ್ಕೆ ತೊಡಕುಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಜಿ.ಆರ್. ಸಂತೋಷ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಇಂತಹುದೆ ಕೆಲಸ, ಇಂತಹವರೇ ಮಾಡಬೇಕು ಎಂಬ ನಿಯಮವಿಲ್ಲ. ಆದರೂ ಮನವಿ ನೀಡಿದ್ದಾರೆ, ಪರಿಶೀಲನೆ ಮಾಡಲಾಗುತ್ತದೆ ಎಂದರು. ಉಪಾಧ್ಯಕ್ಷ ಮುನಿವೆಂಕಟಪ್ಪ, ಖಜಾಂಚಿ ಗೋವಾ ಮುನಿರಾಜು, ಮುನಿರಾಜು, ಚಂದ್ರು ಇದ್ದರು.