ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಚಿಕ್ಕಬಳ್ಳಾಪುರದಲ್ಲಿಯೂ ಮುಗಿಲು ಮುಟ್ಟಿದ ನವರಾತ್ರಿ ಸಂಭ್ರಮ

1 min read

ನಾಡಹಬ್ಬ ದಸರ ರಾಜ್ಯಾದ್ಯಂತ ಅದ್ಧೂರಿ ಆಚರಣೆ
ಚಿಕ್ಕಬಳ್ಳಾಪುರದಲ್ಲಿಯೂ ಮುಗಿಲು ಮುಟ್ಟಿದ ನವರಾತ್ರಿ ಸಂಭ್ರಮ
ದೇವಾಲಯಗಳಿಗೆ ವಿಶೇಷ ಅಲಂಕಾರ, ಸತತ ಪೂಜೆಗಳು
ನವರಾತ್ರಿಯ 4 ನೇ ದಿನದ ಸಂಭ್ರಮದಲ್ಲಿ ಮಿಂದೆದ್ದ ನಗರ

ನಾಡಹಬ್ಬ ದಸರಾ, ನವರಾತ್ರಿಗಳ ಸಂಭ್ರಮ ಮೈಸೂರಿನಲ್ಲಿ ಈಗಾಗಲೇ ಅಧಿಕೃತವಾಗಿ ಆರಂಭವಾಗಿ ನಾಲ್ಕು ದಿನಗಳು ಕಳೆದಿದೆ. ಮೈಸೂರು ಮಾತ್ರವಲ್ಲದೆ ಇಡೀ ನಾಡಿನಾದ್ಯಂತ ನವರಾತ್ರಿ ಸಂಭ್ರಮ ಮುಗಿಲು ಮುಟ್ಟಿದ್ದು, ಚಿಕ್ಕಬಳ್ಳಾಪುರದಲ್ಲಿಯೂ ನಾಡಹಬ್ಬದ ಸಡಗರ ಅದ್ಧೂರಿಯಾಗಿ ನಡೆಯುತ್ತಿದೆ.

ಹೌದು, ನವರಾತ್ರಿ ಎಂದರೆ ನಾಡಹಬ್ಬ. ಮೈಸೂರು ಅಂಬಾರಿ ಜಗತ್‌ಪ್ರಸಿದ್ಧಿ ಪಡೆದಿದೆ. ಹಾಗಂತ ದಸರಾ ಸಂಭ್ರಮ ಕೇವಲ ಮೈಸೂರಿಗೆ ಸೀಮಿತವಾಗಿಲ್ಲ. ಇಡೀ ನಾಡಿನಾದ್ಯಂತ ನವರಾತ್ರಿ ಆಚರಣೆ ಸಾಗಿದ್ದು, ಚಿಕ್ಕಬಳ್ಳಾಪುರದಲ್ಲಿಯೂ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಚಿಕ್ಕಬಳ್ಳಾಪುರದಲ್ಲಿರುವ ಶಕ್ತಿ ದೇವತೆಗಳ ಆಲಯಗಳಿಗೆ ವಿಶೇಷ ಅಲಂಕಾರ, ದೀಪಾಲಂಕರಾ ಸೇರಿದಂತೆ ನಾನಾ ಅಲಂಕಾರಗಳನ್ನು ಮಾಡಲಾಗಿದ್ದು, ರಾತ್ರಿ ವೇಳೆ ದೇವಾಲಯಗಳು ಝಗಮಗಿಸುತ್ತಿವೆ.

ನಗರದ ಗಂಗಮ್ಮ ಗುಡಿಯಲ್ಲಿ ದಸರಾ ಬೊಂಬೆಗಳನ್ನು ಕೂರಿಸಲಾಗಿದ್ದು, ಅದ್ಧೂರಿಯಾಗಿ ನವರಾತ್ರಿ ಸಂಭ್ರಮ ನಡೆಯುತ್ತಿದೆ. ಅಲ್ಲದೆ ಬಿಬಿ ರಸ್ತೆಯ ಬೆಸ್ಕಾಂ ಕಚೇರಿ ಆವರಣದಲ್ಲಿರುವ ಚಾಮುಂಡೇಶ್ವರಿ ದೇವಾಲಯದಲ್ಲಿಯೂ ಕಳೆದ ನಾಲ್ಕು ದಿನಗಳಿಂದ ನವರಾತ್ರಿ ಸಂಭ್ರಮ ನಡೆಯುತ್ತಿದ್ದು, ದೇವಾಲಯಕ್ಕೆ ವಿಶೇಷ ಅಲಂಕಾರದ ಜೊತೆಗೆ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಪ್ರತಿನಿತ್ಯ ವಿಶೇಷ ಪೂಜೆಗಳ ಮೂಲಕ ನವರಾತ್ರಿ ಆಚರಿಸಲಾಗುತ್ತಿದೆ.

ಇನ್ನು ನವರಾತ್ರಿಯ ಐತಿಹಾಸಿಕ ಹಿನ್ನೆಲೆ ನೋಡುವುದಾದರೆ ನವರಾತ್ರಿ ಒಂಬತ್ತು ರಾತ್ರಿಗಳನ್ನು ಸೂಚಿಸುತ್ತದೆ, ಪ್ರತಿಯೊಂದು ರಾತ್ರಿಯ ಪೂಜೆಯನ್ನೂ ದುರ್ಗಾದೇವಿಯ ರೂಪಕ್ಕೆ ಸಮರ್ಪಿಸಲಾಗಿದೆ. ಸಂತಸ, ಶಕ್ತಿ ಮತ್ತು ಸಮೃದ್ಧಿಯಂತಹ ವಿಶಿಷ್ಟ ಗುಣಗಳನ್ನು ಸಂಕೇತಿಸುವ ಬಣ್ಣದೊಂದಿಗೆ ಪ್ರತಿದಿನವೂ ವಿಶೇಷತೆ ಹೊಂದಿದೆ. ಈ ಬಣ್ಣಗಳು ಆಧ್ಯಾತ್ಮಿಕ ಭಕ್ತಿ ಮತ್ತು ಆಚರಣೆಗೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತವೆ ಎಂಬುದು ನಂಬಿಕೆಯಾಗಿದೆ.

ನವರಾತ್ರಿ ಒಂಬತ್ತು ರಾತ್ರಿಗಳಲ್ಲಿ ಆಚರಿಸುವ ಮಹತ್ವದ ಹಿಂದೂ ಹಬ್ಬವಾಗಿರುವ ನವರಾತ್ರಿ ಪ್ರತಿ ರಾತ್ರಿಯನ್ನೂ ದುರ್ಗಾದೇವಿಯ ವಿಭಿನ್ನ ರೂಪಕ್ಕೆ ಸಮರ್ಪಿತವಾಗಿದೆ. ಈ ವರ್ಷದ ನವರಾತ್ರಿಗಳು ಅಕ್ಟೋಬರ್ 3 ರಿಂದ ಪ್ರಾರಂಭವಾಗಿ, ಇಂದಿಗೆ ನಾಲ್ಕು ದಿನಗಳು ಪೂರೈಸಿವೆ. ಅಲ್ಲದೆ ಅಕ್ಟೋಬರ್ 11 ಕ್ಕೆ ನವರಾತ್ರಿಗಳು ಮುಕ್ತಾಯವಾಗಲಿವೆ. ಈ ನವರಾತ್ರಿಯ ಒಂಬತ್ತು ದಿನಗಳಲ್ಲಿ ಪ್ರತಿ ದಿನ ಆಧ್ಯಾತ್ಮಿಕ ಮಹತ್ವ ಹೊಂದಿರುವ ನಿರ್ದಿಷ್ಟ ಬಣ್ಣದೊಂದಿಗೆ ಪೂಜಿಸಲಾಗುತ್ತದೆ.

ನವರಾತ್ರಿಯ ದಿನಗಳಂದು ಪೂಜಿಸುವ ಬಣ್ಣಗಳು ವಿಭಿನ್ನ ಗುಣಲಕ್ಷ ಣಗಳು ಮತ್ತು ಶಕ್ತಿಗಳನ್ನು ಸೂಚಿಸುತ್ತವೆ. ಅವುಗಳ ಪ್ರಾಮುಖ್ಯತೆ ತಿಳಿಯುವುದಾದರೆ ನವರಾತ್ರಿ ಮೊದಲ ದಿನ ಅಂದರೆ ಅಕ್ಟೋಬರ್ 3 ರಂದು ಹಳದಿ ಬಣ್ಣದೊಂದಿಗೆ ಶೈಲಪುತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ಸಂತೋಷ, ಹೊಳಪು ಮತ್ತು ಶಕ್ತಿಯನ್ನು ಹಳದಿ ಬಣ್ಣ ಸಂಕೇತಿಸುತ್ತದೆ. ಎರಡನೇ ದಿನವಾದ ಅಕ್ಟೋಬರ್ ೪ರಂದು ಹಸಿರು ಬಣ್ಣದೊಂದಿಗೆ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲಾಗುತ್ತದೆ. ಬೆಳವಣಿಗೆ, ಸಾಮರಸ್ಯ ಮತ್ತು ಹೊಸ ಆರಂಭವನ್ನು ಹಸಿರು ಬಣ್ಣ ಪ್ರತಿನಿಧಿಸುತ್ತದೆ.

ಮೂರನೇ ದಿನವಾದ ಅಕ್ಟೋಬರ್ 5 ರಂದು ಬೂದು ಬಣ್ಣದೊಂದಿಗೆ ಚಂದ್ರಘ0ಟಾ ದೇವಿಯನ್ನು ಆರಾಧಿಸಲಾಗುತ್ತದೆ. ಸ್ಥಿರತೆ ಮತ್ತು ಶಕ್ತಿಯನ್ನು ಈ ಬಣ್ಣ ಪ್ರತಿಬಿಂಬಿಸುತ್ತದೆ. ನಾಲ್ಕನೇ ದಿನವಾದ ಅಕ್ಟೋಬರ್ 6 ರಂದು ಅಂದರೆ ಇಂದು ಕಿತ್ತಳೆ ಬಣ್ಣದೊಂದಿಗೆ ಕೂಷ್ಮಾಂಡಾ ದೇವಿಯನ್ನು ಆರಾಧಿಸಲಾಗುತ್ತದೆ. ಉತ್ಸಾಹ, ಉಷ್ಣತೆ ಮತ್ತು ಶಕ್ತಿಯನ್ನು ಈ ಬಣ್ಣ ಸಂಕೇತಿಸುತ್ತದೆ. 5 ನೇ ದಿನವಾದ ಅಕ್ಟೋಬರ್ 7 ರಂದು ಅಂದರೆ ನಾಳೆ ಬಿಳಿ ಬಣ್ಣದೊಂದಿಗೆ ಸ್ಕಂದಮಾತಾ ದೇವಿಯನ್ನು ಆರಾಧಿಸಲಾಗುತ್ತದೆ. ಶಾಂತಿ ಮತ್ತು ಶುದ್ಧತೆಯನ್ನು ಈ ಬಣ್ಣ ಪ್ರತಿನಿಧಿಸುತ್ತದೆ.

೬ನೇ ದಿನವಾದ ಅಕ್ಟೋಬರ್ ೮ರಂದು ಕೆಂಪು ಬಣ್ಣದೊಂದಿಗೆ ಕಾತ್ಯಾಯನಿ ದೇವಿಯನ್ನು ಪೂಜಿಸಲಾಗುತ್ತದೆ. ಶಕ್ತಿ ಮತ್ತು ಉತ್ಸಾಹವನ್ನು ಈ ಬಣ್ಣ ಪ್ರತಿನಿಧಿಸುತ್ತದೆ. 7 ನೇ ದಿನವಾದ ಅಕ್ಟೋಬರ್ 9 ರಂದು ರಾಯಲ್ ಬ್ಲೂ ಬಣ್ಣದೊಂದಿಗೆ ಕಾಳರಾತ್ರಿ ದೇವತೆಯನ್ನು ಆರಾಧಿಸಲಾಗುತ್ತದೆ. 8 ನೇ ದಿನವಾದ ಅಕ್ಟೋಬರ್ 10 ರಂದು ಗುಲಾಬಿ ಬಣ್ಣದೊಂದಿಗೆ ಮಹಾಗೌರಿ ದೇವಿಯನ್ನು ಆರಾಧಿಸಲಾಗುತ್ತದೆ. ಸಹಾನುಭುತಿ, ಸಾಮರಸ್ಯ ಮತ್ತು ಪ್ರೀತಿಯನ್ನು ಈ ಬಣ್ಣ ಸಂಕೇತಿಸುತ್ತದೆ. 9 ನೇ ದಿನವಾದ ಅಕ್ಟೋಬರ್ 11ರಂದು ನೇರಳೆ ಬಣ್ಣದೊಂದಿಗೆ ದೇವಿ ಸಿದ್ಧಿದಾತ್ರಿಯನ್ನು ಆರಾಧಿಸಲಾಗುತ್ತದೆ. ಆಧ್ಯಾತ್ಮಿಕತೆ, ಮಹತ್ವಾಕಾಂಕ್ಷೆ ಮತ್ತು ಸಮೃದ್ಧಿಯನ್ನು ಈ ಬಣ್ಣ ಪ್ರತಿಬಿಂಬಿಸುತ್ತದೆ.

ಇದೇ ರೀತಿಯಲ್ಲಿ ಬಣ್ಣಗಳು ಮತ್ತು ದೇವಿಯರ ಆರಾಧನೆಯೊಂದಿಗೆ ಚಿಕ್ಕಬಳ್ಳಾಪುರದಲ್ಲಿಯೂ ನವರಾತ್ರಿ ಉತ್ಸವಗಳು ನಡೆಯುತ್ತಿದ್ದು, ವಿಜಯದಶಮಿಯ ದಿನ ಬನ್ನಿ ಕಡಿಯುವ ಮೂಲಕ ನವರಾತ್ರಿ ಉತ್ಸವಗಳಿಗೆ ತೆರೆ ಬೀಳಲಿದೆ. ಅಲ್ಲದೆ ನಾಡಹಬ್ಬ ಮೈಸೂರಿನಲ್ಲಿ ಜಂಬೂ ಸವಾರಿಯೊಂದಿಗೆ ನವರಾತ್ರಿ ಮತ್ತು ದಸರಾ ಹಬ್ಬ ಮುಕ್ತಾಯವಾಗಲಿದೆ. ಒಟ್ಟಿನಲ್ಲಿ ನಾಡಿನೆಲ್ಲೆಡೆ ನವರಾತ್ರಿ ಸಂಭ್ರಮ ಮನೆ ಮಾಡಿದ್ದು, ಚಿಕ್ಕಬಳ್ಳಾಪುರದಲ್ಲಿಯೂ ಈ ಸಂಭ್ರಮ ತೀವ್ರವಾಗಿಯೆ ಇದೆ ಎಂದರೆ ತಪ್ಪಾಗಲಾರದು.

 

About The Author

Leave a Reply

Your email address will not be published. Required fields are marked *