ತ್ಯಾಜ್ಯ ಕೇಂದ್ರಗಳಾಗಿ ಬದಲಾದ ಪುರಸಭೆ ಮಳಿಗೆಗ
1 min readತ್ಯಾಜ್ಯ ಕೇಂದ್ರಗಳಾಗಿ ಬದಲಾದ ಪುರಸಭೆ ಮಳಿಗೆಗಳು
ಬಾಗೇಪಲ್ಲಿ ಹೃದಯ ಭಾಗದಲ್ಲಿರುವ ವಾಣಿಜ್ಯ ಮಳಿಗೆಗಳು
ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ ಮಳಿಗೆಗಳು
ಬಾಗೇಪಲ್ಲಿ ಪಟ್ಟಣದಲ್ಲಿ ಬೀದಿ ಬದಿ ತರಕಾರಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲೆಂದು ಹಲವು ವರ್ಷಗಳ ಹಿಂದೆ ಪುರಸಭೆÉಯಿಂದ ತರಕಾರಿ ಮಾರಾಟ ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದರೆ ಆ ಮಳಿಗೆಗಳು ಅಕ್ಷರಶಃ ಅದ್ವಾನಗಳ ಆಗರವಾಗಿ ಬದಲಾಗಿದ್ದು, ಗಬ್ಬುನಾರುವ ಜೊತೆಗೆ ಕುಡುಕರ ಅಡ್ಡೆಯಾಗಿ ಪರಿಣಮಿಸಿದ್ದರೂ ಅತ್ತ ತಿರುಗಿ ನೋಡುವವರೇ ಇಲ್ಲವಾಗಿದ್ದಾರೆ.
ಬಾಗೇಪಲ್ಲಿ ಪಟ್ಟಣದ ಹೃದಯ ಭಾಗದ ಪಿಎಲ್‌ಡಿ ಬ್ಯಾಂಕ್ ಎದುರು ಮತ್ತು ನೇತಾಜಿ ವೃತ್ತದಲ್ಲಿ ಹತ್ತಾರು ಮಂದಿ ತರಕಾರಿ ವ್ಯಾಪಾರಿಗಳು ಒಂದೆಡೆ ವ್ಯಾಪಾರ, ವಹಿವಾಟು ನಡೆಸಲು ಅನುಕೂಲವಾಗುವಂತೆ ಮಳಿಗೆಗಳನ್ನು ನಿರ್ಮಿಸಲಾಗಿದೆ. ಪಟ್ಟಣದ ಮಧ್ಯ ಇರುವ ಈ ಮಳಿಗೆಗಳು ಬಾರಿನಲ್ಲಿ ಕುಡಿಯಲು ಮುಜಗರ ಪಡುವ ಕುಡುಕರಿಗೆ ಹೇಳಿ ಮಾಡಿಸಿದಂತಿವೆ. ಎಲ್ಲಿ ನೋಡಿದರೂ ಮದ್ಯದ ಪೌಚ್‌ಗಳು, ಮದ್ಯದ ಬಾಟಲಿಗಳೇ ತುಂಬಿದ್ದು, ಸಭ್ಯರು ಮುಖ ಮಾಡದಷ್ಟು ಅದ್ವಾನವಾಗಿದೆ.
ಪಿಎಲ್ ಡಿ ಬ್ಯಾಂಕ್ ಮುಂಭಗದ ಮಳಿಗೆಗಳಲ್ಲಿ ಮೂತ್ರ ವಿಸರ್ಜನೆ, ಮಲ ವಿಸರ್ಜನೆ ಸೇರಿದಂತೆ ಎಲ್ಲವನ್ನೂ ಅಲ್ಲಿಯೇ ಮಾಡಿ, ಶೌಚಾಲಯವಾಗಿ ಬದಲಿಕೊಂಡಿದ್ದಾರೆ. ಮತ್ತೊಂದು ಬದಿ ಕೆಲವರು ವಾಹನಗಳನ್ನು ನಿಲ್ಲಿಸುವ ತಾಣವಾಗಿ ಬಳಸುತ್ತಿದ್ದಾರೆ. ಇದರಿಂದಾಗಿ ಮಳಿಗೆಗಳ ಪಕ್ಕದಲ್ಲಿರುವ ಮನೆಗಳ ನಿವಾಸಿಗಳು ಕಿರಿಕಿರಿ ಅನುಭವಿಸುತ್ತಿದ್ದು, ಕುಡುಕರ ಹಾವಳಿಯಿಂದ ಆತಂಕದಲ್ಲಿ ದಿನದೂಡುವಂತಾಗಿದೆ. ನೇತಾಜಿ ವೃತ್ತದಲ್ಲಿನ ಮಳಿಗೆಗಳ ಸಮೀಪ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ ಆದರೆ ಅದಕ್ಕೆ ಖಾಯಂ ಬೀಗ ಹಾಕಲಾಗಿದೆ.
ಈ ಕುರಿತು ಸಿಪಿಎಂ ಮುಖಂಡ ಚನ್ನರಾಯಪ್ಪ ಮಾತನಾಡಿ, ಸುಮಾರು ಏಳೆಂಟು ವರ್ಷಗಳ ಹಿಂದೆ ಪಟ್ಟಣದ ಹೃದಯ ಭಾಗದಲ್ಲಿ ತರಕಾರಿ ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸಿದ್ದು, ಸಾರ್ವಜನಿಕರಿಗೆ ಉಪಯುಕ್ತವಾಗುವ ಅಭಿವೃದ್ಧಿ ಕಾರ್ಯಗಳಿಗೆ ಯೋಜನೆ ರೂಪಿಸಲಾಗಿತ್ತು, ಆದರೆ ಕೆಲವರಿಂದಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿ ತರಾತುರಿಯಲ್ಲಿ ತರಕಾರಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದರೆ ಅವು ಕುಡುಕರ ಅಡ್ಡೆಗಳಾಗಿ ನೆರೆಹೊರೆಯವರು ಭಯಭೀತರಾಗುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಸಾರ್ವಜನಿಕರ ತೆರಿಗೆ ಹಣ ಪೋಲಾಗಿದೆ. ಕೂಡಲೇ ಪುರಸಭೆಯವರು ಎಚ್ಚೆತ್ತು ತರಕಾರಿ ಮಾರಾಟ ಮಳಿಗೆಗಳು ಸದ್ಬಳಕೆಯಾಗುವಂತೆ ಕ್ರಮ ಜರುಗಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಿಪಿಎಂನಿ0ದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.