ಕಳ್ಳಾಟವಾಡುವ ಅಧಿಕಾರಿಗಳಿಗೆ ಶಾಸಕರ ಖಡಕ್ ಎಚ್ಚರಿಕೆ
1 min read
ಕಳ್ಳಾಟವಾಡುವ ಅಧಿಕಾರಿಗಳಿಗೆ ಶಾಸಕರ ಖಡಕ್ ಎಚ್ಚರಿಕೆ
ಸಭೆಗಳಿಗೆ ಗೈರಾಗುವ ಅಧಿಕಾರಿಗಳು ತಾಲೂಕು ಬಿಟ್ಟು ತೊಲಗಿ
ಕಳ್ಳಾಟದ ಅಧಿಕರಿಗಳಿಗೆ ಶಾಸಕ ದರ್ಶನ್ ಖಡಕ್ ಎಚ್ಚರಿಕೆ
ಮೈಸೂರು ಜಿಲ್ಲೆಯ ನಂಜನಗೂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಎಂಬುವುದನ್ನು ತಾಲೂಕು ಮಟ್ಟದ ಅಧಿಕಾರಿಗಳು ಮರೆಯಬಾರದು. ಜಾಗ್ರತೆ ಮತ್ತು ಪ್ರಾಮಾಣಿಕವಾಗಿ ಜನರ ಸೇವೆ ಮಾಡುವುದಕ್ಕೆ ಆಗದೆ ಕಳ್ಳಾಟ ಆಡಿ ದಿನದೊಡುತ್ತೇವೆ, ಸಂಬಳ ಪಡೆಯುತ್ತೇವೆ ಎಂಬ ಮನಸ್ಥಿತಿ ಇರುವ ಅಧಿಕಾರಿಗಳೇ ನೀವಾಗಿ ನೀವೇ ತಾಲೂಕು ಬಿಟ್ಟು ತೊಲಗಿ ಹೀಗಂತ ಶಾಸಕ ದರ್ಶನ್ ಧ್ರುವನಾರಾಯಣ್ ಅಧಿಕರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಘಟನೆ ಇಂದು ನಡೆಯಿತು.
ಸಭೆಗಳಿಗೆ ಬಾರದೆ, ಕರ್ತವ್ಯ ಸಮರ್ಪಕವಾಗಿ ನಿರ್ವಹಿಸದೆ, ಸಂಬಳಕ್ಕಾಗಿಯೇ ಕೆಲಸ ಮಾಡುತ್ತೇವೆ ಎಂಬ ಮನೋಭಾವ ಇರುವ ಅಧಿಕರಿಗಳು ಮೊದಲು ಜಾಗ ಖಾಲಿ ಮಾಡಿ ಎಂದು ಖಡಕ್ಕಾಗಿ ಶಾಸಕರು ಎಚ್ಚರಿಕೆ ನೀಡಿದರು. ನಂಜನಗೂಡು ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ 78ನೇ ವರ್ಷದ ಸ್ವಾತಂತ್ರ ದಿನಾಚರಣೆ ಪೂರ್ವಭಾವಿ ಸಭೆಗೆ ಗೈರಾದ ಅಧಿಕಾರಿಗಳಿಗೆ ಶಾಸಕ ದರ್ಶನ್ ಧ್ರುವ ನಾರಾಯಣ್ ಬಿಸಿ ಮುಟ್ಟಿಸಿದರು.
ರಾಷ್ಟಿಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷ ಮತ್ತು ತಹಸೀಲ್ದಾರ್ ಶಿವಕುಮಾರ್ ಕಾಸ್ನೂರ್ ಅಧ್ಯಕ್ಷತೆಯಲ್ಲಿ ಸ್ವಾತಂತ್ರ ದಿನಾಚರಣೆ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಕೆಲವೇ ಕೆಲವು ಅಧಿಕಾರಿಗಳು ಮಾತ್ರ ಹಾಜರಿದ್ದರು. ಸಂಘ ಸಂಸ್ಥೆಗಳ ಮುಖಂಡರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಇದನ್ನು ಗಮನಿಸಿದ ಶಾಸಕ ದರ್ಶನ್ ಧ್ರುವ ನಾರಾಯಣ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
15ರಂದು ಸ್ವಾತಂತ್ರ ದಿನಾಚರಣೆ ಅದ್ದೂರಿಯಾಗಿ ಆಚರಿಸಲು ತಾಲೂಕು ಆಡಳಿತ ಮುಂದಾಗಿದೆ. ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ, ಅತಿ ಹೆಚ್ಚು ಶಿಕ್ಷಣ ಇಲಾಖೆಗೆ ಜವಾಬ್ದಾರಿ ನೀಡಲಾಗಿದೆ, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಜೆ ವೇಳೆಗೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಧ್ವಜಾರೋಹಣ ಕಾರ್ಯಕ್ರಮ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ಪಥಸಂಚಲನ ಹಾಗೂ ವಿವಿಧ ಬಗೆಯ ಜಾಗೃತಿ ಸಂದೇಶಗಳನ್ನು ತಿಳಿಸುವ ಕಾರ್ಯಕ್ರಮಗಳನ್ನು ನಡೆಸಲು ತಯಾರಿ ನಡೆಸಲಾಗಿದೆ.
ಇಂತಹ ಪ್ರಮುಖ ಕಾರ್ಯಕ್ರಮಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು, ಪೂರ್ವಭಾವಿ ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳ ವಿರುದ್ಧ ಕೂಡಲೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಬಳಿ ವಿಚಾರ ಮಾಡಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ, ಕಾರ್ಯಕ್ರಮದಲ್ಲಿ ಗೈರಾಗಿರುವ ಅಧಿಕಾರಿಗಳ ಪಟ್ಟಿ ಮಾಡಿ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರ್ ಅವರಿಗೆ ಶಾಸಕ ದರ್ಶನ್ ದ್ರುವ ನಾರಾಯಣ ಸಭೆಯಲ್ಲಿ ತಿಳಿಸಿದರು. ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಸಿಡಿಪಿಒ ಭವ್ಯ ಶ್ರೀ, ನಗರಸಭಾ ಆಯುಕ್ತ ನಂಜು0ಡಸ್ವಾಮಿ ಪಿಎಸ್‌ಐ ಪ್ರಕಾಶ್ ಸಿದ್ದಪ್ಪ ಭಾಗವಹಿಸಿದ್ದರು.