ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಧೀರಜ್ ಮುನಿರಾಜು ಭೇಟಿ, ಪರಿಶೀಲನೆ
1 min readಶೀಘ್ರವೇ ರಕ್ತನಿಧಿ, ಹೈಟೆಕ್ ಡಯಾಲಿಸಿಸ್ ಕೇಂದ್ರ ಲೋಕಾರ್ಪಣೆ
ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಧೀರಜ್ ಮುನಿರಾಜು ಭೇಟಿ, ಪರಿಶೀಲನೆ
ಆಸ್ಪತ್ರೆ ನೂನ್ಯತೆಗಳ ಪರಿಶೀಲನೆ, ವೈದ್ಯರ ಹೆಚ್ಚಳಕ್ಕೆ ಕ್ರಮ ಎಂದ ಶಾಸಕ
ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳಿಗೆ ತೊಂದರೆಯಾಗಿರುವುದು, ರೋಗಿಗಳು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ ಇಲ್ಲದಿರುವುದು, ಜನರಿಕ್ ಮಳಿಗೆಯಲ್ಲಿ ಬಡರೋಗಿಗಳಿಗೆ ಅಗತ್ಯ ಔಷಧಿಗಳು ದೊರೆಯದಿರುವುದು, ರಾತ್ರಿ ಪಾಳಿಯಲ್ಲಿ ವೈದ್ಯರಿಲ್ಲದೆ ರೋಗಿಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಧೀರಜ್ ಮುನಿರಾಜು ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ತೆಯಲ್ಲಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕ ಧೀರಜ್ ಮುನಿರಾಜು ಇಂದು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವಾಸ್ತವ ಪರಿಶೀಲನೆ ನಡೆಸಿದರು. ಶಾಸಕರ ಪರಿಶೀಲನೆ ವೇಳೆ ಕಾರಣವಿಲ್ಲದೆ ಗೈರಾದ ಸಿಬ್ಬಂದಿ ವಿರುದ್ಧ ಗರಂ ಆದರಲ್ಲದೇ, ಕರ್ತವ್ಯದಲ್ಲಿ ನಿರ್ಲಕ್ಷ ಮಾಡಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಜರಿಗಿಸುವುದಾಗಿ ಎಚ್ಚರಿಕೆ ನೀಡಿದರು.
ಆಸ್ಪತ್ರೆಯಲ್ಲಿ ಸಂಚರಿಸಿ ವಾರ್ಡುಗಳು, ರಕ್ತ ತಪಾಸಣೆ ವಿಭಾಗ, ಎಕ್ಸ್ರೇ ವಿಭಾಗ, ವಿವಿಧ ಪ್ರಯೋಗಲಾಯ ಕೇಂದ್ರಗಳ ವೀಕ್ಷಣೆ ಮಾಡಿದ ಶಾಸಕರು ರೋಗಿಗಳ ಸಮಸ್ಯೆ ಆಲಿಸಿದರು. ಆಸ್ಪತ್ರೆಯ ಸ್ವಚ್ಛತೆ, ಸೂಕ್ತ ಸಮಯಕ್ಕೆ ಚಿಕಿತ್ಸೆ ಒದಗಿಸುವಂತೆ ಮಾಡುವುದಾಗಿ ರೋಗಿಗಳಿಗೆ ಭರವಸೆ ನೀಡಿದರು. ಸುತ್ತಮುತ್ತಲಿನ 15 ತಾಲ್ಲೂಕುಗಳಿಗೆ ತಾಯಿ ಮಗು ಆಸ್ಪತ್ರೆ ಮಾದರಿಯಾಗಿ ಈ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ತಿಂಗಳಿಗೆ ಸುಮಾರು 250 ಹೆರಿಗೆ ಪ್ರಕರಣಗಳು ದಾಖಲಾಗುತ್ತಿವೆ. ಹಾಲಿ ಮೂವರು ಪ್ರಸೂತಿ ತಜ್ಞ ವೈದ್ಯರಿದ್ದು, ಇಬ್ಬರು ಖಾಲಿ ಇದ್ದಾರೆ ಎಂದು ಶಾಸಕರು ಮಾಹಿತಿ ನೀಡಿದರು.
ಖಾಲಿ ಇರುವ ಹುದ್ದೆಗಳ ನೇಮಕ ಶೀಘ್ರವಾಗಿ ಮಾಡಲು ಕ್ರಮ ವಹಿಸಲಾಗುವುದು. ಪ್ರತಿ ಮೂರು ತಿಂಗಳಿಗೊಮ್ಮೆ ಆಸ್ಪತ್ರೆಯ ಸಮಿತಿ ಸಭೆ ನಡೆಸಿ ಸಮಸ್ಯೆಗಳ ಬಗೆಹರಿಸಲಾಗುವುದು ಸಾರ್ವಜನಿಕ ಆಸ್ಪತ್ರೆ ಆವರಣದ ಮುಂಭಾಗದಲ್ಲಿ ಎಜಾಕ್ಸ್ ಕಂಪನಿ ಸಹಯೋಗದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ಹೈಟೆಕ್ ಡಯಾಲಿಸಿಸ್ ಘಟಕ ಮತ್ತು ಸುಸಜ್ಜಿತ ರಕ್ತನಿಧಿ ಕೇಂದ್ರ ಸ್ಥಾಪನೆಗೆ ಕ್ರಮ ಜರುಗಿಸಲಾಗಿದೆ. ಈ ನೂತನ ಕಟ್ಟಡದಲ್ಲಿಯೇ ಒಪಿಡಿ ಕೇಂದ್ರವನ್ನೂ ತೆರೆಯುವ ಮೂಲಕ ತಾಯಿ-ಮಗು ಆಸ್ಪತ್ರೆಯಲ್ಲಿನ ಜನಸಂದಣಿಗೆ ಕಡಿವಾಣ ಹಾಕಲಾಗುವುದು ಎಂದರು.