ಸಂಸದ ಡಾ.ಕೆ. ಸುಧಾಕರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
1 min readಲೋಕಸಭೆಯಲ್ಲಿ ನಿರೀಕ್ಷಿತ ಗೆಲುವು ಸಾಧಿಸಲು ವಿಫಲ
ರಾಜ್ಯದ ಜನರ ಮೇಲೆ ದ್ವೇಷ ಸಾಧಿಸುತ್ತಿರುವ ರಾಜ್ಯ ಸರ್ಕಾರ
ಸಂಸದ ಡಾ.ಕೆ. ಸುಧಾಕರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
ಕೂಡಲೇ ತೈಲ ಬೆಲೆ ಏರಿಕೆ ಕಡಿತ ಮಾಡಲು ಒತ್ತಾಯ
ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಹೊಂದಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಚುನಾವಣೆ ಫಲಿತಾಂಶ ತೀವ್ರ ನಿರಾಸೆ ಮೂಡಿಸಿದ್ದು, ಇದರಿಂದ ಕುಪಿತರಾಗಿ ರಾಜ್ಯದ ಜನರ ಮೇಲೆ ಸೇಡು ತೀರಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿದೆ ಎಂದು ಸಂಸದ ಡಾ.ಕೆ. ಸುಧಾಕರ್ ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ಏಕಾಏಕಿ ತೈಲ ಬೆಲೆ ಏರಿಕೆ ಮಾಡಿರುವ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜಿಲ್ಲಾ ಬಿಜೆಪಿ ಬೆಲೆ ಏರಿಕೆ ವಿರೋಧಿಸಿ ಇಂದು ಚಿಕ್ಕಬಳ್ಳಾಪುರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಲಯಿತ್ತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಸದ ಡಾ.ಕೆ. ಸುಧಾಕರ್, ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದರ ಪರಿಣಾಮ ಖಜಾನೆ ಖಾಲಿಯಾಗಿ ತೈಲ ದರ ಏರಿಸುವ ಮೂಲಕ ಗ್ಯಾರೆಂಟಿಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿದೆ ಎಂದು ಅವರು ಆರೋಪಿಸಿದರು. ಮದ್ಯ, ಸ್ಟಾಂಪ್ ಡ್ಯೂಟಿ, ವಿದ್ಯುತ್, ಹಾಲಿನ ದರ ಸೇರಿದಂತೆ ಹಲವಾರು ದಿನಬಳಕೆ ವಸ್ತುಗಳ ಮೇಲೆ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡಿದೆ. ಈಗ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ಬಡವರಿಗೆ ಕೊಡಲಿ ಪೆಟ್ಟು ನೀಡಿದ್ದಾರೆ ಎಂದು ಆರೋಪಿಸಿದರು.
ಉಚಿತ ಕೊಡುತ್ತೇವೆ ಎಂದು ಹೇಳಿ ದುಪ್ಪಟ್ಟು ತೆರಿಗೆ ವಸೂಲಿ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರೋಧ ಪಕ್ಷದಲ್ಲಿದ್ದಾಗ ಪ್ರತಿಭಟನೆ ನಡೆಸಿ ಗ್ಯಾಸ್ ಸಿಲಿಂಡರ್‌ಗೆ ಪೂಜೆ ಮಾಡಿದ್ದರು. ಈಗ ನಾವು ಆಟೋ, ಲಾರಿ, ಬಸ್, ಟ್ರಾö್ಯಕ್ಚರ್ ಇದರಲ್ಲಿ ಯಾವುದಕ್ಕೆ ಪೂಜೆ ಮಾಡಬೇಕು ಎಂದು ಪ್ರಶ್ನೆ ಮಾಡಿದರು. ರಾಜ್ಯ ಸರ್ಕಾರಕ್ಕೆ ಕಿವಿ, ಕಣ್ಣು ಇಲ್ಲ. ಆರ್ಥಿಕ ಶಿಸ್ತು ಕಾಪಾಡಿಕೊಳ್ಳದೆ ಸರ್ಕಾರದ ಖಜಾನೆ ಖಾಲಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್ ಇದ್ದಾಗಲೂ ತೈಲ ದರ ಇಳಿಕೆ ಮಾಡಿದ್ದರು. ಡೀಸೆಲ್ ಬೆಲೆ ೧೦ ರುಪಾಯಿ, ಪೆಟ್ರೋಲ್ ಬೆಲೆಯಲ್ಲಿ ೫ ರುಪಾಯಿ ಇಳಿಕೆ ಮಾಡುವ ಮೂಲಕ ಜನಪರ ಆಡಳಿತ ನೀಡಿದ್ದರು.
ಆದರೆ ರಾಜ್ಯ ಕಾಗ್ರೆಂಸ್ ಸರ್ಕಾರ ಲೋಕಸಭೆ ಫಲಿತಾಂಶ ಬಂದು ಹದಿನೈದು ದಿನಗಳಾಗುವ ಮೊದಲೇ ದ್ವೇಷದ ರಾಜಕಾರಣದಿಂದ ಬೆಲೆ ಏರಿಸಿದೆ. ಕಾಂಗ್ರೆಸ್ ನಾಯಕರಿಗೆ ಅಧಿಕಾರದಲ್ಲಿ ಉಳಿಯಲು ಯಾವುದೇ ನೈತಿಕತೆ ಇಲ್ಲ. ರಾಜಸ್ಥಾನ, ಮಧ್ಯಪ್ರದೇಶ, ಅಸ್ಸಾಂ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ೯೭ ರೂ. ಇದೆ. ಆದರೆ ಕಾಂಗ್ರೆಸ್ ಆಡಳಿತದಲ್ಲಿ ೧೦೫ ರೂ. ಗೂ ಹೆಚ್ಚು ದರವಿದೆ. ದೂರದೃಷ್ಟಿ ಇಲ್ಲದೆ ಅಧಿಕಾರ ಹಿಡಿಯಲು ಸುಳ್ಳು ಹೇಳಿದ್ದು, ಈಗ ಇಡೀ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.
ದಲಿತರಿಗೆ ಸೇರಿದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಕಾಂಗ್ರೆಸ್ ನಾಯಕರು ಲೂಟಿ ಮಾಡಿದ್ದಾರೆ. ಎಸ್.ಟಿ ಅಭಿವೃದ್ಧಿ ನಿಗಮದ ಹಣವನ್ನು ಲ್ಯಾಂಬೋರ್ಗಿನಿ ಕಾರು ಖರೀದಿಸಲು ಬಳಸಲಾಗಿದೆ. ಆದರೆ ಚುನಾವಣೆಗೆ ಮುನ್ನ ಕಾಂಗ್ರೆಸ್ ದಲಿತರ ಉದ್ಧಾರದ ಮಾತುಗಳನ್ನ ಆಡಿತ್ತು. ಮುಂದಿನ ದಿನಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬೆಲೆ ಏರಿಕೆ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಪ್ರತಿಭಟನೆ ನಡೆಸಲಿದೆ. ಕೂಡಲೇ ಕಾಂಗ್ರೆಸ್ ಸರ್ಕಾರ ತೈಲ ದರ ಏರಿಕೆ ಆದೇಶ ವಾಪಸ್ ಪಡೆಯಬೇಕು ಎಂದು ಸುಧಾಕರ್ ಒತ್ತಾಯಿಸಿದರು.