ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಮೆಕ್ಕೆಜೋಳ ಗೋದಾಮು ಅವಘಡ: ಮೂರು ಮೃತದೇಹ ಪತ್ತೆ, ಮುಂದುವರಿದ ಕಾರ್ಯಾಚರಣೆ

1 min read

ವಿಜಯಪುರ: ನಗರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿ ‘ರಾಜ್ ಗುರು ಫುಡ್’ ಗೋದಾಮಿನ ಮೆಕ್ಕೆಜೋಳ ಸಂಸ್ಕರಣ ಘಟಕದಲ್ಲಿ ನಡೆದ ಅವಘಡದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ರಾತ್ರಿಯಡಿ ನಡೆದಿದ್ದು, ಇದುವರೆಗೆ ಮೂರು ಶವಗಳು ಪತ್ತೆಯಾಗಿವೆ.

ಬಿಹಾರ ಮೂಲದ ರಾಜೇಶಕುಮಾರ(25), ಶಂಭು ಮುಖಿಯಾ(26) ಮತ್ತು ರಾಮ್ಜಿ ಮುಖಿಯಾ(29) ಸಾವಿಗೀಡಾದವರು ಎಂದು ಗುರುತಿಸಲಾಗಿದೆ.

ಮೂರು ಶವಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಮೆಕ್ಕೆಜೋಳದ ರಾಶಿಯಲ್ಲಿ ಇನ್ನೂ ನಾಲ್ಕೈದು ಜನ ಸಿಲುಕಿ ಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಆದರೆ, ಸಿಲುಕಿಕೊಂಡಿರುವ ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಕ್ಷೀಣಿಸಿದೆ.

ಸೋಮವಾರ ಸಂಜೆ 4.30ಕ್ಕೆ ಬೃಹತ್ ಟ್ಯಾಂಕ್ ಗಳು ನಿಗದಿಗಿಂತ ಹೆಚ್ಚಿನ ( ಓವರ್ ಲೋಡ್) ಬಾರ ತಾಳಲಾರದೇ ಸ್ಫೋಟಗೊಂಡು ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ.

ಅವಘಡ ನಡೆದ ಕ್ಷಣದಿಂದ ಸ್ಥಳೀಯ ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆಗೆ ತಡರಾತ್ರಿ 2.30ರ ಹೊತ್ತಿಗೆ ಬೆಳಗಾವಿ, ಕಲಬುರ್ಗಿಯಿಂದ ಬಂದ ಎಸ್ ಡಿಆರ್ ಎಫ್ ಸಿಬ್ಬಂದಿ ಕೈಜೋಡಿಸಿದ್ದಾರೆ.

ಸಂಸ್ಕರಣ ಘಟಕದ ಬೃಹದಾಕಾರದ ಟ್ಯಾಂಕುಗಳು ಸ್ಪೋಟಗೊಂಡು, ಅದರಲ್ಲಿರುವ ಸಾವಿರಾರು ಕ್ವಿಂಟಲ್ ಮೆಕ್ಕೆಜೋಳದ ರಾಶಿಯ ಅಡಿಯಲ್ಲಿ ಸಿಲುಕಿಕೊಂಡಿರುವರ ರಕ್ಷಣಾ ಕಾರ್ಯಾಚರಣೆ ವೇಗವಾಗಿ ನಡೆಸಲು ಸಾಧ್ಯವಾಗುತ್ತಿಲ್ಲ.

ಕಾರ್ಯಾಚರಣೆ ಕಠಿಣವಾಗಿದ್ದು, ನಿಧಾನವಾಗಿ ಸಾಗಿದೆ. ನಾಲ್ಕು ಜೆಸಿಬಿಗಳು ಮೆಕ್ಕೆಜೋಳ ವನ್ನು ಬಗೆದು ಟಿಪ್ಪರ್ ಗಳಿಗೆ ತುಂಬಿ ಹೊರಹಾಕುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿವೆ.

ಇನ್ನೊಂದೆಡೆ ಗ್ಯಾಸ್ ಕಟ್ಟರ್ ಬಳಸಿ, ಬೃಹದಾಕಾರದ ಸಂಸ್ಕಾರಣಾ ಘಟಕದ ಭಾಗಗಳನ್ನು ಕತ್ತರಿಸಿ ತೆಗೆಯಲಾಗುತ್ತಿದೆ.

ಅವಘಡದಲ್ಲಿ ಸಿಲುಕಿಕೊಂಡಿರುವವರನ್ನು ಹೊರತೆಗೆಯುವ ಕಾರ್ಯಾಚರಣೆ

ನೂರಾರು ಬಿಹಾರಿ ಕಾರ್ಮಿಕರು ನಿದ್ರೆ, ನೀರು,ಊಟ ಬಿಟ್ಟು ತಲೆಗೆ ಕೈಕೊಟ್ಟು ಆತಂಕದಿಂದ ಕಾಯುತ್ತಿದ್ದಾರೆ. ದೂರದ ಬಿಹಾರದಲ್ಲಿರುವ ತಮ್ಮ ಸಂಬಂಧಿಗಳಿಗೆ ಫೋನ್ ಕರೆ ಮಾಡಿ, ಅವಘಡದ ಮಾಹಿತಿ ನೀಡುತ್ತಿದ್ದಾರೆ.

ತಡರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಕಾರ್ಮಿಕರೊಂದಿಗೆ ಮಾತನಾಡಿ, ಸಾಂತ್ವಾನ ಹೇಳಿದ್ದಾರೆ.

‘ಸರ್ಕಾರ ಮತ್ತು ಮಾಲೀಕನಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.‌ ಅಲ್ಲದೇ, ಶವಗಳನ್ನು ಬಿಹಾರಕ್ಕೆ ಕೊಂಡೊಯ್ಯಲು ಅಗತ್ಯ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.

‘ರಾಜ್ ಗುರು ಫುಡ್ ಘಟಕದಲ್ಲಿ ಈ ಹಿಂದಿನ ವರ್ಷವೂ ಇಬ್ಬರು ಸಾವಿಗೀಡಾದಾಗ ಮಾಲೀಕ ನಯಾಪೈಸೆ ಪರಿಹಾರ ಕೊಡದೇ ಮೋಸ ಮಾಡಿದ್ದಾನೆ. ಈ ಬಾರಿಯೂ ಸಾವಿಗೀಡಾದ ಕಾರ್ಮಿಕರಿಗೆ ಅನ್ಯಾಯವಾಗಬಾರದು, ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಬೇಕು, ಇಲ್ಲವಾದರೆ ಶವಗಳನ್ನು ಸ್ಥಳದಿಂದ ಹೊರಗೆ ಕೊಂಡೊಯ್ಯಲು ಬಿಡುವುದಿಲ್ಲ’ ಎಂದು ಕಾರ್ಮಿಕರು ಪಟ್ಟು ಹಿಡಿದಿದ್ದು, ಡಿಸಿ, ಎಸ್ ಪಿ ಅವರ ಮನವೊಲಿಸಿದ್ದಾರೆ.

ರಾಜ್ ಗುರು ಫುಡ್ ಗೋದಾಮಿನ ಮಾಲೀಕ ಕಿಶೋರ್ ಜೈನ್ ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್ ಶಿಂಧೆ ಸ್ಥಳದಲ್ಲೇ ಇದ್ದು, ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ಮಾರ್ಗದರ್ಶನ ನೀಡುವ ಜೊತೆಗೆ ಕಾರ್ಮಿಕರನ್ನು ಸಂತೈಸುತ್ತಿದ್ದಾರೆ.

ಜಿಲ್ಲಾಸ್ಪತ್ರೆ ವೈದ್ಯರ ತಂಡ, ಅಂಬುಲೆನ್ಸ್, ಮಹಾನಗರ ಪಾಲಿಕೆ ಸಿಬ್ಬಂದಿ, ಪೊಲೀಸರು ಹಗಲಿರುಳು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಸ್ಥಳಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಘಟನೆ ನಡೆಯುವ ಸಂದರ್ಭದಲ್ಲಿ 100ಕ್ಕೂ ಅಧಿಕ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದರು. ಮೆಕ್ಕೆಜೋಳ ಸಂಸ್ಕರಣ ಘಟಕಗಳು ಏಕಾಏಕಿ ಸ್ಫೋಟಗೊಂಡಾಗ ಕಾರ್ಮಿಕರು ದಿಕ್ಕಾಪಾಲಾಗಿ ಹೊರಗೆ ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ. ಆದರೆ, 15ರಿಂದ 20 ಕಾರ್ಮಿಕರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಸಂಸ್ಕರಣ ಘಟಕದ ಅಡಿ ಸಿಲುಕಿಕೊಂಡಿದ್ದಾರೆ. ಅದರಲ್ಲಿ ಕೈಗೆ ಸಿಕ್ಕ ನಾಲ್ಕೈದು ಜನರನ್ನು ಆ ಕ್ಷಣವೇ ಕೆಲ ಕಾರ್ಮಿಕರು ಎಳೆದು ರಕ್ಷಣೆ ಮಾಡಿದ್ದಾರೆ. ಮೆಕ್ಕೆಜೋಳದ ರಾಶಿಯಲ್ಲಿ ಸಿಲುಕಿದವರ ಆಕ್ರಂದನ, ಗೋಳಾಟ ಕೆಲ ಹೊತ್ತು ಹೊರಗಡೆ ಇದ್ದವರಿಗೆ ಕೇಳಿಸಿದೆ. ಆದರೆ, ರಕ್ಷಣೆ ಮಾಡಲು ಸಾಧ್ಯವಾಗಿಲ್ಲ.

About The Author

Leave a Reply

Your email address will not be published. Required fields are marked *