ಪ್ರಿಯತಮೆಯ ಹತ್ಯೆಗೈದು ಮೃತದೇಹ ತುಂಡರಿಸಿ ಕಾಡಿನಲ್ಲಿ ಹೂತು ಹಾಕಿದ ಪ್ರಿಯಕರ
1 min readಒಡಿಶಾದಲ್ಲಿ ಭೀಕರ ಕೊಲೆ ಪ್ರಕರಣ ನಡೆದಿದೆ. ವಿವಾಹಿತ ವ್ಯಕ್ತಿಯೊಬ್ಬ ಯುವತಿಯನ್ನು ಪ್ರೀತಿಸಿ, ಆಕೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಂತೆ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ನಬರಂಗಪುರ(ಒಡಿಶಾ): ಜಿಲ್ಲೆಯ ರಾಯಗಢ ತಾಲೂಕಿನಲ್ಲಿ ಭೀಕರ ಕೊಲೆ ಪ್ರಕರಣ ವರದಿಯಾಗಿದೆ.
ಪೊಲೀಸರು ಆರೋಪಿಗಳಾದ ಗಂಡ, ಹೆಂಡತಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ: ನಬರಂಗಪುರ ಜಿಲ್ಲೆಯ ಬಾಗಬೇಡ ಗ್ರಾಮದ ಲೂತುರಾಮ್ ಎಂಬವರ ಮಗಳು ತಿಲಬತಿ ಗಂಡ್ (23) ಬುಧವಾರ ಸಂಜೆ ತನ್ನ ಸ್ನೇಹಿತೆಯ ಮನೆಗೆ ಹೋಗುವುದಾಗಿ ತಿಳಿಸಿದ್ದರು. ಬಹಳ ಹೊತ್ತಾದರೂ ಆಕೆ ಮರಳಿ ಮನೆಗೆ ಬಂದಿರಲಿಲ್ಲ. ಮರುದಿನ ತಂದೆ ರಾಯಗಢ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ಕಾಣೆಯಾದ ಯುವತಿ ತಿಲಬತಿ ಮುರ್ಮಡ್ಡಿಹಿ ಗ್ರಾಮದ ಚಂದ್ರ ರಾವುತ್ ಎಂಬಾತನನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗೆ, ತನ್ನನ್ನು ಮದುವೆಯಾಗುವಂತೆ ಯುವತಿ ಒತ್ತಾಯಿಸುತ್ತಿದ್ದಳು. ಕಳೆದ ಬುಧವಾರ ರಾತ್ರಿ ಯುವತಿ ತನ್ನ ಗ್ರಾಮದಿಂದ 10 ಕಿ.ಮೀ ದೂರದಲ್ಲಿರುವ ರಾವುತ್ ಮನೆಗೆ ಹೋಗಿದ್ದಾಳೆ. ಅಲ್ಲಿ ಮತ್ತೆ ತನ್ನನ್ನು ಮದುವೆಯಾಗುವಂತೆ ಆಕೆ ಪಟ್ಟು ಹಿಡಿದಿದ್ದಾಳೆ.
ಈ ವಿಚಾರವಾಗಿ ಗಂಡ (ಯುವತಿಯ ಪ್ರಿಯಕರ), ಹೆಂಡತಿ ಮತ್ತು ಯುವತಿಯ ಮಧ್ಯೆ ವಾಗ್ವಾದ ನಡೆದಿದೆ. ಇದು ಮಿತಿಮೀರಿದ್ದು ರಾವುತ್ ತನ್ನ ಪ್ರಿಯತಮೆಯ ಕೊಲೆಗೆ ಸಂಚು ರೂಪಿಸಿದ್ದಾನೆ. ಇದಕ್ಕೆ ಪತ್ನಿ ಬೆಂಬಲ ನೀಡಿದ್ದಾಳೆ. ಯುವತಿಯನ್ನು ಕೊಂದ ಬಳಿಕ ಶವವನ್ನು ಮನೆಯಿಂದ ಸುಮಾರು 300 ಮೀಟರ್ ದೂರದ ಮೂರುಮಡಿಹಿ ಅರಣ್ಯ ಪ್ರದೇಶದಲ್ಲಿ ಬಿಸಾಡಿದ್ದಾರೆ. ಯುವತಿಯ ಗುರುತು ಮರೆಮಾಚಲು ಆಕೆಯ ದೇಹವನ್ನು ಸುಮಾರು 31 ಭಾಗಗಳನ್ನು ಕತ್ತರಿಸಿ ಹೂತು ಹಾಕಿದ್ದರು.
ಪೊಲೀಸರ ಹೇಳಿಕೆ: ಯುವತಿ ಬುಧವಾರ ಸಂಜೆ ಮನೆ ಬಿಟ್ಟು ಹೋಗಿದ್ದಳು. ಪೋಷಕರು ಆಕೆಗಾಗಿ ಹುಡುಕಾಟ ನಡೆಸಿದರೂ ಫಲ ನೀಡಲಿಲ್ಲ. ಮತ್ತೊಂದೆಡೆ, ಮೂರುಮಡಿಹಿ ಅರಣ್ಯ ಪ್ರದೇಶದ ಮರವೊಂದರ ಬಳಿ ರಕ್ತದ ಕಲೆಯನ್ನು ಕೆಲವರು ಕಂಡಿದ್ದಾರೆ. ಆತಂಕಕಾರಿ ದೃಶ್ಯ ಕಂಡು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದರು. ಗ್ರಾಮಸ್ಥರು ಸ್ಥಳಕ್ಕೆ ತೆರಳಿ ತೆಂತಾಲಿಗಚ್ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲಿಸಿದ್ದು, ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾಗಿದ್ದ ಯುವತಿಯ ಪೋಷಕರಿಗೆ ಸುದ್ದಿ ಮುಟ್ಟಿಸಲಾಗಿತ್ತು. ಅವರು ಘಟನಾ ಸ್ಥಳಕ್ಕೆ ಆಗಮಿಸಿದ್ದು, ತಮ್ಮ ಮಗಳೆಂದು ಖಚಿತಪಡಿಸಿ ರಾಯಗಢ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಪೊಲೀಸರು ಶ್ವಾನ ದಳ ಮತ್ತು ವೈಜ್ಞಾನಿಕ ತಂಡದೊಂದಿಗೆ ಆಗಮಿಸಿ ಮಣ್ಣು ಅಗೆದಿದ್ದಾರೆ. ಆಗ ಕತ್ತರಿಸಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ತಂದೆ ಮಗಳ ಶವ ನೋಡಿ ಬಿಕ್ಕಿಬಿಕ್ಕಿ ಕಣ್ಣೀರು ಹಾಕಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆರೋಪಿ ಚಂದ್ರ ರಾವುತ್ ಮತ್ತು ಪತ್ನಿ ಶಿಯಾ ಎಂಬಾಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಇದೀಗ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.