ರಾಜ್ಯದ 40ಕ್ಕೂ ಕಡೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ
1 min readಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ರಾಜ್ಯದ 40ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಅಕ್ರಮ ಸಂಪತ್ತನ್ನು ಬಯಲಿಗೆಳೆದಿದ್ದಾರೆ.ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಇಂದು ಬೆಳಿಗ್ಗೆ ಬೆಂಗಳೂರು, ಮಂಡ್ಯ, ಮೈಸೂರು, ಹಾಸನ, ತುಮಕೂರು, ಚಿಕ್ಕಮಗಳೂರು, ಕೊಪ್ಪಳ, ಚಾಮರಾಜನಗರ, ಬಳ್ಳಾರಿ, ವಿಜಯನಗರ, ಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ 10 ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ ಸಂಬಂಧಿಗಳಿಗೂ ಶಾಕ್ ನೀಡಿದ್ದಾರೆ.
ಸಾಂಸ್ಕøತಿಕ ನಗರಿ ಮೈಸೂರಿನ ಜೆ.ಪಿ.ನಗರದಲ್ಲಿರುವ ಮುಡಾ ಎಂಜಿನಿಯರ್ ಯಜ್ನೇಂದ್ರ ಮನೆಗೆ ಲೋಕಾಯುಕ್ತ ಪೊಲೀಸರು ಬಂದು ಕದ ತಟ್ಟುತ್ತಿದ್ದಂತೆ ನಿದ್ದೆ ಕಣ್ಣಿನಲ್ಲಿದ್ದ ಮನೆಯವರಿಗೆ ಯಾರು ಬಂದಿದ್ದಾರೆ ಎಂದು ತಿಳಿಯಲಿಲ್ಲ. ನಂತರ ಗಾಬರಿಗೊಂಡಿದ್ದಾರೆ. ವಿಜಯನಗರದ ಅಪಾರ್ಟ್‍ಮೆಂಟ್ ಕೆ.ಆರ್.ನಗರ ತಾಲೂಕಿನ ನಗರ್ಲೆ ಗ್ರಾಮದಲ್ಲಿರುವ ಯಜ್ನೇಂದ್ರ ಅವರ ಸಹೋದರನ ಮನೆ ಮೇಲೂ ದಾಳಿ ನಡೆದಿದ್ದು, ನಗದು ಹಣ, ಚಿನ್ನಾಭರಣ, ಹಲವೆಡೆ ನಿವೇಶನಗಳ ಖರೀದಿ ಪತ್ರಗಳು ಸೇರಿದಂತೆ ಹಲವು ಬೆಲೆಬಾಳುವ ವಾಚ್ ಮತ್ತಿತರ ವಸ್ತುಗಳು ಪತ್ತೆಯಾಗಿದ್ದು, ಲೋಕಾ ಎಸ್‍ಪಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತಕ್ಕೆ 93ನೇ ಸ್ಥಾನ
ಮಂಡ್ಯದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಹರ್ಷ ಅವರ ಕಚೇರಿ, ಮಂಡ್ಯದಲ್ಲಿರುವ ಮನೆ ಹಾಗೂ ಕಲ್ಲಹಳ್ಳಿಯಲ್ಲಿರುವ ಮಾವನ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಮನೆಯಿದ್ದು, ಅಲ್ಲೂ ಪರಿಶೀಲನೆ ನಡೆಸಲಾಗಿದೆ. ನಾಗಮಂಗಲದಲ್ಲಿರುವ ಫಾರ್ಮ್‍ಹೌಸ್ ಮೇಲೆ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಹಾಸನದಲ್ಲಿ ಆಹಾರ ನೀರಿಕ್ಷಕ ಜಗನ್ನಾಥ್ ಅವರ ನಿವಾಸ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಇವರ ಸಹೋದರ ರಿಯಲ್ ಎಸ್ಟೇಟ್ ಉದ್ಯಮಿ ಕಿರಣ್ ನಿವಾಸ ಹಾಗೂ ಕಚೇರಿ ಮೇಲೂ ದಾಳಿ ನಡೆದಿದೆ. ಲೋಕಾಯುಕ್ತ ಎಸ್‍ಪಿ ಮಲ್ಲಿಕ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ನಾಲ್ಕಕ್ಕೂ ಹೆಚ್ಚು ಕಡೆ ಪರಿಶೀಲನಾ ಕಾರ್ಯ ಕೈಗೊಂಡಿದ್ದು, ಹಲವೆಡೆ ಕೃಷಿ ಜಮೀನು, ಫೈನಾನ್ಸ್ , ವಿವಿಧ ವಲಯಗಳಲ್ಲಿ ಹೂಡಿಕೆ ಮಾಡಿರುವುದು ಗೊತ್ತಾಗಿದ್ದು, ಹಲವು ಕಾಗದ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಕಾರಿಯಾಗಿರುವ ನೇತ್ರಾವತಿ ಅವರಿಗೆ ಲೋಕಾ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಕಡೂರಿನಲ್ಲಿರುವ ಮನೆ, ಕಚೇರಿ ಮೇಲೆ ದಾಳಿ ನಡೆದಿದ್ದು, 5 ಲಕ್ಷ ನಗದು ಹಣ, ವಿವಿಧೆಡೆ ಚರ-ಚಿರ ಆಸ್ತಿ, 900 ಗ್ರಾಂ. ಚಿನ್ನಾಭರಣ, ಒಂದು ಕೆಜಿ ಬೆಳ್ಳಿ ವಸ್ತುಗಳು ಪತ್ತೆಯಾಗಿದ್ದು , ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ತುಮಕೂರಿನಲ್ಲೂ ಕೆಆರ್‍ಐಡಿಎಲ್‍ನಲ್ಲಿ ಸಹಾಯಕ ಎಂಜಿನಿಯರ್ ಹನುಮಂತರಾಯಪ್ಪ ಅವರ ಶಿರಾ ಗೇಟ್ ಬಳಿಯ 80 ಅಡಿ ರಸ್ತೆಯಲ್ಲಿರುವ ಮನೆ ಮೇಲೆ ಒಟ್ಟು 14 ಜನರ ಲೋಕಾಯುಕ್ತ ಅಕಾರಿಗಳ ತಂಡದಿಂದ ಶೋಧ ಕಾರ್ಯ ನಡೆಯುತ್ತಿದೆ.
ಮಂಗಳೂರಿನಲ್ಲಿ ಜೆಸ್ಕಾಂ ಕಾರ್ಯಪಾಲಕ ಅಭಿಯಂತರ ಶಾಂತಕುಮಾರ್ ಅವರ ಅತ್ತಾವರದಲ್ಲಿರುವ ಕಚೇರಿ, ಮನೆ ಮೇಲೆ ಲೋಕಾ ದಾಳಿ ನಡೆದಿದ್ದು, ನಗದು, ಚಿನ್ನಾಭರಣ ಪತ್ತೆಯಾಗಿದೆ. ಬೆಂಗಳೂರಿನಲ್ಲೂ ಇವರ ಮನೆ ಇರುವುದು ಗೊತ್ತಾಗಿದೆ. ಹಲವೆಡೆ ನಿವೇಶನ ಹಾಗೂ ವಿವಿಧ ವಲಯಗಳಲ್ಲಿ ಹೂಡಿಕೆ ಮಾಡಿರುವುದು ಕಂಡುಬಂದಿದೆ. ಹಲವು ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ.
ಕೊಪ್ಪಳ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಜೆಸ್ಕಾಂನಲ್ಲಿ ಎಂಜಿನಿಯರ್ ಆಗಿರುವ ಸುರೇಶ್ ಅವರ ನಿವಾಸ ಹಾಗೂ ಕಚೇರಿ ಮೇಲೆ ಲೋಕಾ ದಾಳಿ ನಡೆದಿದ್ದು, ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.ನಗದು ಹಣ, ಕೆಲವೆಡೆ ಖರೀದಿಸಿರುವ ಜಮೀನು ಸೇರಿದಂತೆ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಅಕ್ರಮ ಆಸ್ತಿ ಗಳಿಕೆ ದೂರಿನ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಲೋಕಾಯುಕ್ತ ಪೊಲೀಸರು ಸಂಡೂರಿನ ಸ್ನಾತಕೋತ್ತರ ಕೇಂದ್ರ (ಪಿಜಿ)ದ ನಿರ್ದೇಶಕರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆದಿದೆ.ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ಅವರ ಕಚೇರಿ, ಮನೆ, ದಾವಣಗೆರೆಯಲ್ಲಿರುವ ಮತ್ತೊಂದು ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಲೋಕಾಯುಕ್ತ ಎಸ್‍ಪಿ ಸಿದ್ದರಾಜು ನೇತೃತ್ವದ ಅಧಿಕಾರಿಗಳ ತಂಡ ಪರಿಶೀಲನೆ ವೇಳೆ ಅಪಾರ ಪ್ರಮಾಣದ ನಗದು, ಕೆಲ ಆಸ್ತಿ ಪತ್ರಗಳು ಪತ್ತೆಯಾಗಿವೆ.