ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮುಂದಾಗಲಿ
1 min readಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮುಂದಾಗಲಿ
ಶಾಲೆಗಳ ಬಗ್ಗೆ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ ಆರ್ ಕುಮಾರ್ ಸಲಹೆ
ಮಾತೃಭಾಷೆ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಸರ್ಕಾರಿ ಕನ್ನಡ ಶಾಲೆಗಳ ಉನ್ನತೀಕರಣಕ್ಕೆ ಶಾಸಕರು, ಸಂಸದರು ಸೇರಿ ಜನಪ್ರತಿನಿಧಿಗಳು ಮುಂದಾಗ ಬೇಕು ಎಂದು ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ ಆರ್ ಕುಮಾರ್ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಭಾರತಿ ವಿದ್ಯಾ ಸಂಸ್ಥೆ ಆವರಣದಲ್ಲಿ ಕನ್ನಡ ಸೇನೆ ಜಿಲ್ಲೆ ಘಟಕದಿಂದ ಏರ್ಪಡಿಸಿದ್ದ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್, ಸರ್ಕಾರಿ ಶಾಲೆಗಳಲ್ಲಿ ಓದಿ, ಉನ್ನತ ವ್ಯಾಸಂಗ ಪಡೆದು, ಉನ್ನತ ಹುದ್ದೆಗಳನ್ನು ಪಡೆದವರಲ್ಲಿ ಹೆಚ್ಚಿನ ಸಂಖ್ಯೆಯವರು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೇ ಆಗಿರುವುದು ಹೆಮ್ಮೆಯ ಸಂಗತಿ. ಇದನ್ನು ಮನಗಂಡು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಬೇಕಾಗಿರುವ ಮೂಲ ಸೌಕರ್ಯಗಳನ್ನು ಒದಗಿಸಲು ಜನ ಪ್ರತಿನಿಧಿಗಳು ಸಂಘ ಸಂಸ್ಥೆಗಳು ಮುಂದಾಗುವುದು ಸಾಮಾಜಿಕ ಜವಾಬ್ದಾರಿಯಾಗಿದೆ ಎಂದರು.
ಕನ್ನಡ ಸೇನೆ ಜಿಲ್ಲೆ ಘಟಕ ಭಾರತಿ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಿದರು. ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉದ್ಯೋಗಕ್ಕೆ ಸೇರಿದ ಸಂದರ್ಭದಲ್ಲಿ ಸಮಾಜಕ್ಕೆ ದೇಶಕ್ಕೆ ಉತ್ತಮ ಕೊಡುಗೆ ನೀಡುವ ಜವಾಬ್ದಾರಿ ನಾಗರೀಕರಾಗಬೇಕು ಆಗ ಮಾತ್ರ ದಾನಕ್ಕೆ ಅರ್ಥವಿರುತ್ತದೆ ಎಂದರು. ವಕೀಲ ಕೆಎಂ ಮುನೇಗೌಡ ಮಾತನಾಡಿ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದುವ ಮಕ್ಕಳು ಬಡತನದ ಹಿನ್ನೆಲೆಯಲ್ಲಿ ಬಂದ ಮಕ್ಕಳೇ ಆಗಿದ್ದಾರೆ. ತಂದೆ ತಾಯಿಗಳ ಕಷ್ಟ ಅರಿತು ಗುರುಗಳ ಮಾರ್ಗದರ್ಶನದಲ್ಲಿ ಉತ್ತಮವಾಗಿ ಓದಿ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಮಾತನಾಡಿ, ಕನ್ನಡ ಸೇನೆ ಜಿಲ್ಲಾ ಘಟಕ ಹಲವು ಕನ್ನಡಪರ ಕಾರ್ಯಕ್ರಮಗಳ ಮೂಲಕ ಜಿ¯್ಲೆಯಲ್ಲಿ ಮನೆ ಮಾತಾಗಿದೆ. ಸಹೋದರ ರವಿಕುಮಾರ್ ಮಕ್ಕಳಿಗೆ ಬ್ಯಾಗ್ ವಿತರಿಸಿರುವುದು ಶ್ಲಾಘನೀಯ. ಭಾರತಿ ವಿದ್ಯಾ ಸಂಸ್ಥೆ ಸೇವಾ ಮನೋಭಾವವುಳ್ಳ ಶಾಲೆಯಾಗಿದ್ದು, ಇಲ್ಲಿ ಓದುತ್ತಿರುವ ಮಕ್ಕಳು ದೇಶಕ್ಕೆ ಕೊಡುಗೆ ಕೊಡುವ ಮಕ್ಕಳಾಗಬೇಕು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಸರ್ಕಾರಿ ಶಾಲೆಗಳಲ್ಲಿ ಕೊರತೆ ಇದ್ದಲ್ಲಿ ನಮ್ಮ ಗಮನಕ್ಕೆ ತಂದರೆ ತಮ್ಮ ಟ್ರಸ್ಟ್ನಿಂದ ಸಹಾಯ ಮಾಡಲಾಗುವುದು ಎಂದು ತಿಳಿಸಿದರು.
ಕನ್ನಡ ಸೇನೆ ಜಿಲ್ಲೆ ಘಟಕ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾರತಿ ಶಾಲೆಯ 250 ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್ ಮತ್ತು ನೋಟ್ ಪುಸ್ತಕ ಗಳನ್ನು ವಿತರಿಸಿ ಇತರೆ ಸಂಘಗಳಿಗೆ ಮಾದರಿಯಾದರು. ಈ ಸಂದರ್ಭದಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ರವಿಕುಮಾರ್, ಮಾನವ ಹಕ್ಕುಗಳ ಜಿಲ್ಲಾ ಅಧ್ಯಕ್ಷ ಕೃಷ್ಣಪ್ಪ, ಹಿರಿಯ ವಕೀಲ ಉದಯ್ ಕುಮಾರ್, ಶಿಡ್ಲಘಟ್ಟ ತಾಲೂಕು ಕಸಾಪ ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ ಇದ್ದರು.