ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಲಿ
1 min readಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಲಿ
ವಿದ್ಯಾರ್ಥಿಗಳಿಂದಲೇ ಜನಪದ ಉಳಿಯಬೇಕು
ನಮ್ಮ ನಾಡು, ನುಡಿ, ಸಂಸ್ಕೃತಿ, ನೆಲ-ಜಲದ ಜೊತೆಗೆ ನಮ್ಮ ಭಾಷೆ ಮತ್ತು ಜನಪದ ಕಲೆ ಉಳಿಸಿ ಬೆಳೆಸಲು ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದೆ, ಜಾನಪದ ನಡೆ ವಿದ್ಯಾರ್ಥಿಗಳ ಕಡೆ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.
ಗೌರಿಬಿದನೂರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ ಜಾನಪದ ನಡೆ ವಿದ್ಯಾರ್ಥಿಗಳ ಕಡೆ ಕಾರ್ಯಕ್ರಮ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಕಲೆಗಳು ಜೀವನಕ್ಕೆ ಸಂಪರ್ಕ ಸೇತುವೆಯಾಗಿವೆ, ನಮ್ಮ ಪೂರ್ವಜರು ಜಾನಪದ ಕಲೆಗಳ ಮೂಲಕ ಬದುಕಿಗೆ ಅರ್ಥ ಕಲ್ಪಿಸಿಕೊಟ್ಟಿದ್ದಾರೆ. ಅದನ್ನು ಇಂದಿನ ಯುವ ಸಮೂಹ ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದರು.
ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ನಮ್ಮ ಜಾನಪದ ಕಲೆಗಳನ್ನು ಕಲಿತು ಉಳಿಸಿ ಬೆಳೆಸುವ ಜೊತೆಗೆ ಜಾನಪದ ಕಲೆಗಳ ಕಂಪನ್ನು ಇತರರಿಗೂ ಪಸರಿಸಬೇಕು. ನಮ್ಮ ಸಂಸ್ಕೃತಿ ಹಾಗೂ ನಮ್ಮ ಮಣ್ಣಿನ ಕಲೆ ಉಳಿಸಿ ಬೆಳಸಬೇಕು, ಸರಕಾರಗಳೂ ಜಾನಪದ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ. ಹಿರಿಯ ಕಲಾವಿದರು ನಿಮ್ಮ ಜಾನಪದ ಕೌಶಲ್ಯವನ್ನು ಇತರರಿಗೆ ಕಲಿಸುವ ಹಾಗೂ ಅರ್ಪಿಸುವ ಕೆಲಸವನ್ನು ಮಾಡಬೇಕಿದೆ ಎಂದರು.
ಸರಕಾರಿ ಪ್ರಥಮ ದರ್ಜೆ ಪ್ರಾಂಶುಪಾಲ ರಮೇಶ್ ಚಂದ್ರದತ್ತ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಗೆ ಜಾನಪದ ಕಲೆಗಳ ಬಗ್ಗೆ ಆಸಕ್ತಿ ವಹಿಸಬೇಕು ಎಂಬ ದೃಷ್ಟಿಯಿಂದ ಈಗಾಗಲೇ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಎರಡು ಜಾನಪದ ಕಲಾತಂಡಗಳಿಗೆ ತರಬೇತಿ ನೀಡಲಾಗಿದೆ, ಇದರಿಂದ ವಿದ್ಯಾರ್ಥಿಗಳಲ್ಲಿ ಜಾನಪದ ಕಲೆಯ ಸೊಗಡನ್ನು ಇತರರಿಗು ಪಸರಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಾಯಕ ಅಪ್ಪಗೆರೆ ತಿಮ್ಮರಾಜು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ಕಾಲೇಜಿನ ಸಾಂಸ್ಕೃತಿ ಸಂಚಾಲಕ ಕೆ.ಆರ್. ರಂಗನಾಥ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕೆ.ವಿ. ನಾಯಕ್, ಇದ್ದರು. ಜಾನಪದ ಗಾಯನ, ಗೊರವರ ಕುಣಿತ, ಕೊಂಬು ಕಹಳೆ, ತಮಟೆ, ಅರೆವಾದ್ಯ, ಡೊಳ್ಳು ಕುಣಿತ, ಲಂಬಾಣಿ ಕುಣಿತ, ಪೂಜಾಕುಣಿತ, ಪಟ ಕುಣಿತ ಇತರೆ ಕಲಾ ಪ್ರಕಾರಗಳ ಪ್ರದರ್ಶನ ವಿದ್ಯಾರ್ಥಿಗಳನ್ನು ಆಕರ್ಷಿಸಿತು.