ಭಾರತ ವಿಶ್ವಕಪ್ ಗೆಲ್ಲೋದು ಫಿಕ್ಸ್ ಫೈನಲ್ ಪಂದ್ಯದ ಮೇಲೆ ಕತ್ರಿನಾ ಕೈಫ್ ವಿಶ್ವಾಸ
1 min readನಾಳೆ ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ತಂಡದ ಗೆಲುವಿಗೆ ನಟಿ ಕತ್ರಿನಾ ಕೈಫ್ ಶುಭ ಹಾರೈಸಿದ್ದಾರೆ.
2023ರ ವಿಶ್ವಕಪ್ನಲ್ಲಿ ಭಾರತ ಕ್ರಿಕೆಟ್ ತಂಡದ ಅಜೇಯ ಪ್ರದರ್ಶನಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸತತ 10 ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಟೀಂ ಇಂಡಿಯಾ ನಾಳೆ (ನ.19) ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಅಂತಿಮ ಪಂದ್ಯದಲ್ಲಿ ಜಯ ಗಳಿಸಿ ಟ್ರೋಫಿ ಪಡೆಯುವಂತಾಗಲಿ ಎಂದು ನಾಯಕ ರೋಹಿತ್ ಶರ್ಮಾ ಮತ್ತು ತಂಡಕ್ಕೆ ಕತ್ರಿನಾ ಕೈಫ್ ಶುಭ ಹಾರೈಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ‘ಟೈಗರ್ 3’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಮುಖ್ಯಭೂಮಿಕೆಯಲ್ಲಿ ನಟಿಸಿರುವ ಕತ್ರಿನಾ ಕೈಫ್ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಇದೀಗ ನಾಳೆ ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲಿ ಎಂದು ಹಾರೈಸಿದ್ದಾರೆ. “ನಾನು ಟೀಂ ಇಂಡಿಯಾವನ್ನು ಹುರಿದುಂಬಿಸುತ್ತೇನೆ. ಈವರೆಗೆ ಅಸಾಧಾರಣವಾಗಿ ಆಡಿದ್ದಾರೆ. ಈ ಸಂಪೂರ್ಣ ವಿಶ್ವಕಪ್ ವೀಕ್ಷಿಸಲು ತುಂಬಾ ಸಂತಸವಾಗಿದೆ” ಎಂದು ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಕತ್ರಿನಾ ಹೇಳಿದ್ದಾರೆ.
ಜೊತೆಗೆ, “ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನನ್ನ ಆತ್ಮೀಯರು. ಹಾಗಾಗಿ ಮ್ಯಾಚ್ ವೀಕ್ಷಿಸಲು ಇನ್ನಷ್ಟು ಖುಷಿಯಾಗಿದೆ. ನಾನು ಅವರನ್ನು ಹುರಿದುಂಬಿಸುತ್ತೇನೆ. ಟೀಂ ಇಂಡಿಯಾ ಅಸಾಧಾರಣವಾಗಿ ಹೊರಹೊಮ್ಮಲಿದೆ. ಈ ಬಾರಿ ಗೆಲುವು ಖಚಿತ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ರೋಚಕ ಸೆಮಿಫೈನಲ್ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ನ್ಯೂಜಿಲೆಂಡ್ ಅನ್ನು ಸೋಲಿಸುವ ಮೂಲಕ ಫೈನಲ್ಗೆ ಪ್ರವೇಶ ಪಡೆದುಕೊಂಡಿತು. ಸೆಮಿಫೈನಲ್ ಪಂದ್ಯದಲ್ಲಿ ಕತ್ರಿನಾ ಕೈಫ್ ಪತಿ ವಿಕ್ಕಿ ಕೌಶಲ್, ರಜನಿಕಾಂತ್, ಅನುಷ್ಕಾ ಶರ್ಮಾ, ರಣ್ಬೀರ್ ಕಪೂರ್, ಜಾನ್ ಅಬ್ರಹಾಂ, ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ಕುನಾಲ್ ಖೆಮ್ಮು ಮತ್ತು ಸೋಹಾ ಅಲಿ ಖಾನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿ ಮ್ಯಾಚ್ ವೀಕ್ಷಿಸಿದ್ದರು.
ಮತ್ತೊಂದೆಡೆ, ವಾರಾಂತ್ಯಗಳಲ್ಲಿ ಥಿಯೇಟರ್ಗಳಲ್ಲಿ ಜನಸಾಗರವೇ ಹರಿದು ಬರುತ್ತದೆ. ಕತ್ರಿನಾ ಕೈಫ್ ಮತ್ತು ಸಲ್ಮಾನ್ ಖಾನ್ ಮುಖ್ಯಭೂಮಿಕೆಯ ‘ಟೈಗರ್ 3’ ಸಿನಿಮಾ ಥಿಯೇಟರ್ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ವಾರಾಂತ್ಯವಾದ ಇಂದು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಆದರೆ, ನಾಳೆ ವರ್ಲ್ಡ್ ಕಪ್ ಫೈನಲ್ ಪಂದ್ಯ ಇರುವ ಕಾರಣ ಕಲೆಕ್ಷನ್ನಲ್ಲಿ ಕುಸಿತ ಕಾಣುವ ಸಾಧ್ಯತೆ ಇದೆ. ಹೀಗಾಗಿ ನಾಳೆ ಸಿನಿಮಾ ಹಿನ್ನೆಡೆ ಕಾಣುವ ಚಾನ್ಸಸ್ ಇದೆ. ಇನ್ನು ಈ ಬಾರಿಯ ವರ್ಲ್ಡ್ ಕಪ್ ಯಾರ ಮುಡಿಗೇರಲಿದೆ? ಎಂಬ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ.