ಕನ್ನಡ ಜ್ಯೋತಿ ರಥ ಆದ್ದೂರಿ ಮೆರವಣಿಗೆ
1 min readಕನ್ನಡ ಜ್ಯೋತಿ ರಥ ಆದ್ದೂರಿ ಮೆರವಣಿಗೆ
ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಭಾಗಿ
ತಾಲ್ಲೂಕು ಕಛೇರಿ ವೃತ್ತದಲ್ಲಿ ಸಂವಿಧಾನ ದಿನಾಚಣೆ
ದೊಡ್ಡಬಳ್ಳಾಪುರ ತಾಲ್ಲೂಕಿಗೆ ಆಗಮಿಸಿದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥದ ಮೆರವಣಿಗೆ ನಗರದ ಬಸವ ಭವನ ಸಮೀಪದಿಂದ ಮುಂಜಾನೆ ಪ್ರಾರಂಭವಾಯಿತು.
ದೊಡ್ಡಬಳ್ಳಾಪುರ ತಾಲೂಕಿಗೆ ಆಗಮಿಸಿದ ಕನ್ನಡ ಜ್ಯೋತಿ ರಥದ ಮೆರವಣಿಗೆಗೆ ತಹಶಿಲ್ದಾರ್ ವಿದ್ಯಾ ವಿಧಾ ರಾಥೋಡ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷೆ ಸುಮಿತ್ರಮ್ಮ, ಉಪಾಧ್ಯಕ್ಷ ಮಲ್ಲೇಶ್ ಸೇರಿದಂತೆ ಶಿಕ್ಷಣ ಇಲಾಖೆ, ಮಹಿಳಾ ಹಾಗೂ ಮಕ್ಕಳ ಇಲಾಖೆಯ ಅಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ವಿವಿಧ ಕನ್ನಡಪರ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.
ನಗರದ ಬಸವ ಭವನ ಸಮೀಪದಿಂದ ಪ್ರಾರಂಭವಾದ ಕನ್ನಡ ಜ್ಯೋತಿ ರಥಕ್ಕೆ ರಸ್ತೆ ಬದಿಯಲ್ಲಿ ಸಾಲಾಗಿ ನಿಂತ ಶಾಲಾ ಕಾಲೇಜು ಸಾವಿರಾರು ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿದರು. ಮೆರವಣಿಗೆಯಲ್ಲಿ ಕಲಾ ತಂಡಗಳೊ0ದಿಗೆ ಅಂಗನವಾಡಿ ಕಾರ್ಯಕರ್ತೆಯರು ಪೂರ್ಣ ಕುಂಭದೊ0ದಿಗೆ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಕನ್ನಡ ಕವಿಗಳು, ಸಾಹಿತಿಗಳು, ಸಾಧಕರ ಪೋಟೋ ಮತ್ತು ಕನ್ನಡ ಬಾವುಟ ಹಿಡಿದು ಗಮನ ಸೆಳೆದರು. ತಾಲ್ಲೂಕು ಕಛೇರಿ ವೃತ್ತ, ಮುಗುವಾಳಪ್ಪ ವೃತ್ತ, ಇಸ್ಲಾಂಪುರ ರಸ್ತೆ, ಕೊಂಗಾಡಿಯಪ್ಪ ಕಾಲೇಜು ಮುಂಭಾಗ, ಬಯಲು ಬಸವಣ್ಣ ದೇವಸ್ಥಾನ, ಕನಕದಾಸ ವೃತ್ತದ ತನಕ ಕನ್ನಡ ಜ್ಯೋತಿ ರಥದ ಆದ್ದೂರಿ ಮೆರವಣಿಗೆ ನಡೆಯಿತು.
ಇದೆ ಸಂದರ್ಭದಲ್ಲಿ ಸಂವಿಧಾನ ದಿನವಾದ ಇಂದು ಕನ್ನಡ ಜ್ಯೋತಿ ರಥದ ಮೆರವಣಿಗೆ ತಾಲ್ಲೂಕು ಕಛೇರಿ ವೃತ್ತಕ್ಕೆ ಬರುತ್ತಿದ್ದಂತೆ ಸಂವಿಧಾನ ದಿನಾಚರಣೆ ಅಂಗವಾಗಿ ಪೀಠಿಕೆಯನ್ನು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಾಶ್ರೀ ಬೋಧನೆ ಮಾಡಿದರು. ವಿವಿಧ ಇಲಾಖೆ ಅಧಿಕಾರಿಗಳು, ಕನ್ನಡಪರ ಸಂಘಟನೆ ಮುಖಂಡರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.