ಕೈಗೆ ನಾನೇ ಸಿಎಂ ಬಿಸಿತುಪ್ಪ!: ಪವರ್ ಶೇರಿಂಗ್ ವಾರ್; ವರಿಷ್ಠರ ಎಚ್ಚರಿಕೆಗೂ ಡೋಂಟ್ಕೇರ್
1 min readಅಧಿಕಾರ ಹಂಚಿಕೆಯ ಕುದಿಮೌನ ಕಾಂಗ್ರೆಸ್ನೊಳಗೆ ದಿನೇದಿನೇ ಕಾವೇರುತ್ತಿದೆ. ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಐದು ವರ್ಷ ನಾನೇ ಸಿಎಂ, ನಮ್ಮದೇ ಸರ್ಕಾರ’ ಎಂದು ಸಿದ್ದರಾಮಯ್ಯ ಖಚಿತ ಪದಗಳಲ್ಲಿ ಘೋಷಿಸಿರುವುದು ಜಂಗೀಕುಸ್ತಿಗೆ ವೇದಿಕೆ ಸೃಷ್ಟಿಸಿದಂತಾಗಿದೆ.
ಅಧಿಕಾರ ಹಂಚಿಕೆ ಕುರಿತಂತೆ ಬೇರೆ ಬೇರೆ ಮುಖಂಡರು ಆಗಾಗ ಮಾತನಾಡುತ್ತಿದ್ದರೂ ಸಿಎಂ ಎಲ್ಲಿಯೂ ಪ್ರತಿಕ್ರಿಯೆ ನೀಡಿರಲಿಲ್ಲ. ಯಾರೊಬ್ಬರೂ ಮಾತನಾಡದಂತೆ ಪಕ್ಷದ ವರಿಷ್ಠರೂ ಎಚ್ಚರಿಕೆ ನೀಡಿದ್ದರು. ಆದರೆ, ಹೊಸಪೇಟೆಯಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು. ಆಡಳಿತದ ದೃಷ್ಟಿಯಿಂದ ಅವರ ಹೇಳಿಕೆ ಸಮಯೋಚಿತವಾಗಿದ್ದರೂ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶವನ್ನು ಮಾತ್ರ ರವಾನಿಸಿದೆ. ಕೆಲವು ದಿನಗಳ ಹಿಂದೆ ಗೃಹ ಮಂತ್ರಿ ಪರಮೇಶ್ವರ ಮನೆಯಲ್ಲಿ ನಡೆದ ಭೋಜನಕೂಟಕ್ಕೂ ಈ ಹೇಳಿಕೆಗೂ ತಾಳೆ ಹಾಕಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ನೀಡಿದ್ದರೆ, ಸಚಿವರಾದ ಪರಮೇಶ್ವರ, ರಾಜಣ್ಣ, ಜಮೀರ್ ಅಹಮದ್ ಖಾನ್, ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತಂತೆ ಶುಕ್ರವಾರ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ‘ಇಬ್ಬರೂ ಸೇರಿ ಪ್ರಮಾಣವಚನ ಸ್ವೀಕರಿಸಿದ್ದೇವೆ. ಆಗ ಅಧಿಕಾರ ಹಂಚಿಕೆ ಕುರಿತು ನಿಮಗೆಲ್ಲ ಹೇಳಿದ್ದೇವಾ? ಸುಮ್ಮನೆ ಯಾಕೆ ಇಲ್ಲದ ವಿಷಯ ನೀವೇ ಸೃಷ್ಟಿ ಮಾಡಿಕೊಳ್ಳುತ್ತೀರಾ? ಇದೆಲ್ಲ ಅವಶ್ಯಕತೆಯಿಲ್ಲ ಎಂದು ಮಾಧ್ಯಮಗಳನ್ನು ಉದ್ದೇಶಿಸಿ ಸಿಟ್ಟಿನಿಂದ ಪ್ರತಿಕ್ರಿಯೆ ನೀಡಿದರು. ಜತೆಗೆ ಈಗ ಯಾರು ಯಾರು ಪಕ್ಷದ ಸೂಚನೆ ಮೀರಿ ಮಾತನಾಡಿದ್ದಾರೋ ಅವರಿಗೆಲ್ಲ ನೋಟಿಸ್ ನೀಡುತ್ತೇವೆ ಎಂದರಲ್ಲದೇ, ಅಧಿಕಾರ ಹಂಚಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ‘ಹಂಚಿಕೊಳ್ಳೋಕೆ ಯಾವುದೇ ಆಸ್ತಿಯಿಲ್ಲ’ ಎಂದು ಉತ್ತರಿಸಿದರು.
ಈ ಬೆಳವಣಿಗೆ ಬಗ್ಗೆ ಮಾಧ್ಯಮಗಳು ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ಮಾತಿಗೆಳೆದಾಗ, ಯಾವುದು ಸತ್ಯ, ಯಾವುದು ಅಸತ್ಯ ಎಂದು ನಾನು ನಿರ್ಣಯಿಸಲು ಆಗುತ್ತಾ? ಏನೋ ಅರ್ಥ ಇರಬೇಕು ಎಂದು ಸಿಎಂ ಹೇಳಿಕೆಯನ್ನು ವ್ಯಾಖ್ಯಾನಿಸಿದರು. ಸಿಎಂ ಹೇಳಿಕೆಯಿಂದ ರಾಜಕೀಯ
ವಾಗಿ ಬಣ ಸೃಷ್ಟಿಗೆ ಕಾರಣವಾಗುತ್ತಾ ಎಂಬ ವಿಚಾರದ ಬಗ್ಗೆ, ಆ ರೀತಿ ಏನೂ ಆಗಲ್ಲ. ಅದರ ಬಗ್ಗೆ ಹೆಚ್ಚು ಚರ್ಚೆ ಮಾಡುವುದು ಬೇಡ. ನಾನಂತೂ ಯಾವುದೇ ಪ್ರತಿಕ್ರಿಯೆ ಕೊಡಲು ಹೋಗಲ್ಲವೆಂದರು.
ಸರ್ಕಾರ ರಚನೆಗೆ ಮುನ್ನ ದೆಹಲಿಯಲ್ಲಿ ತೀರ್ಮಾನ ಏನಾಗಿದೆ ಎಂಬುದು ನಮಗೆ ಯಾರಿಗೂ ಗೊತ್ತಿಲ್ಲ. ಅದು ಗೊತ್ತಿರುವುದು ಸಿಎಂ ಹಾಗೂ ಡಿಸಿಎಂಗೆ ಮಾತ್ರ ಎಂದು ಹೇಳಿದರು.
ಸಂಸದ ಡಿ.ಕೆ ಸುರೇಶ್ ಮಾತನಾಡಿ, ಕಾಂಗ್ರೆಸ್ಗೆ ಐದು ವರ್ಷ ಆಡಳಿತ ನೀಡಲು ಜನ ಅವಕಾಶ ನೀಡಿದ್ದಾರೆ. ಈಗ ಸಿಎಂ ಹುದ್ದೆ ಖಾಲಿ ಇಲ್ಲ , ಈಗ ಚರ್ಚೆ ಮಾಡಿ ಏನು ಪ್ರಯೋಜನ. ನಮ್ಮ ನಾಯಕರು ಸಿದ್ದರಾಮಯ್ಯ. ಅದರಲ್ಲಿ ಸಂದೇಹ ಬೇಡ. ವರಿಷ್ಠರು ಎಲ್ಲವನ್ನೂ ತೀರ್ವನಿಸುತ್ತಾರೆ ಎಂದು ಎಚ್ಚರಿಕೆ ಅಭಿಪ್ರಾಯ ನೀಡಿದರು.
‘ಸಿದ್ದರಾಮಯ್ಯ ಅವರೇ ಸಿಎಂ, ತಪ್ಪಿದರೆ ಪರಮೇಶ್ವರ ಆಗುತ್ತಾರೆ’ ಎಂದು ಸಚಿವ ರಾಜಣ್ಣ ಹೇಳಿಕೆ ಕುರಿತು ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಪ್ಪ, ರಾಜಣ್ಣ ಹೇಳಿಕೆ ಬಗ್ಗೆ ಗೊತ್ತಿಲ್ಲ. ಸಿಎಂ ದೊಡ್ಡವರು ಹೇಳಿರಬಹುದು. ಹೈಕಮಾಂಡ್ ಎಲ್ಲವನ್ನೂ ನಿರ್ಧಾರ ಮಾಡುತ್ತದೆ ಎಂದರು.
ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ನಾನು ಮಾತನಾಡಲ್ಲ. ಈಗಾಗಲೇ ವರಿಷ್ಠರು ಬಂದು ಸೂಚನೆ ನೀಡಿ ಹೋಗಿದ್ದಾರೆ. ಯಾವುದೇ ಪ್ರತಿಕ್ರಿಯೆ ಕೊಡಲ್ಲ.| ಟಿ. ಬಿ. ಜಯಚಂದ್ರ, ಸರ್ಕಾರದ ದೆಹಲಿ ಪ್ರತಿನಿಧಿಈಗ ಪರಮೇಶ್ವರ ಹೆಸರು, ಇನ್ನೊಬ್ಬರ ಹೆಸರು ಹೇಳಿರಬಹುದು. ಅವರಿಗೆ ಅಂದೇ ಅವಕಾಶ ಸಿಗಬೇಕಿತ್ತು, ಕಾರಾಣಾಂತರಗಳಿಂದ ಸಿಗಲಿಲ್ಲ. ಆದರೆ, ಇವತ್ತಿನ ಪರಿಸ್ಥಿತಿಯಲ್ಲಿ ಡಿ.ಕೆ. ಶಿವಕುಮಾರ್ ಕಷ್ಟಪಟ್ಟು ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ಸಿದ್ದರಾಮಯ್ಯ ನಂತರ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು.| ಕದಲೂರು ಉದಯ ಗೌಡ, ಮದ್ದೂರು ಶಾಸಕಪರಮೇಶ್ವರಗೂ ಸಿಎಂ ಆಗುವ ಎಲ್ಲ ಅವಕಾಶವಿದೆ. ಸದ್ಯ ಅವರು ಗೃಹ ಸಚಿವರಾಗಿದ್ದಾರೆ. ಮುಂದೆ ಏನು ಬೇಕಾದರೂ ಆಗಬಹುದು. ಸಿಎಂ ಸಿದ್ದರಾಮಯ್ಯ ಇರೋವರೆಗೆ ನಾವೆಲ್ಲಾ ಅವರ ಪರ. ನಾನು ಎಐಸಿಸಿಗೂ ಹೆದರೋದಿಲ್ಲ.| ಕೆ.ಎನ್. ರಾಜಣ್ಣ, ಸಹಕಾರ ಸಚಿವಸಿದ್ದರಾಮಯ್ಯ ನಾನೇ ಐದು ವರ್ಷ ಸಿಎಂ ಅಂತ ಹೇಳಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐದು ವರ್ಷ ಇರುತ್ತದೆ ಎಂದಿದ್ದಾರೆ. ಸದ್ಯ ಸಿಎಂ ಆಗಿರೋದು ಸಿದ್ದರಾಮಯ್ಯ.| ಜಮೀರ್ ಅಹ್ಮದ್, ವಸತಿ ಸಚಿವಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೋರಾಟ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಅವರಿಗೆ ಅವಕಾಶ ಸಿಗಬೇಕೆಂಬುದು ನಾನು ಮಾತ್ರವಲ್ಲ, ಪಕ್ಷದ ಕಾರ್ಯಕರ್ತರು ಹಾಗೂ ಜನರ ಕೂಗು| ಇಕ್ಬಾಲ್ ಹುಸೇನ್, ಶಾಸಕಯಾವ ಶೇರಿಂಗ್? ಹಂಚಿಕೊಳ್ಳುವುದಕ್ಕೆ ಯಾವ ಆಸ್ತಿನೂ ಇಲ್ಲ, ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಿದವರಿಗೆ ನೋಟಿಸ್ ಕೊಡುತ್ತೇವೆ.| ಡಿ.ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾಜಕೀಯ ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ತಿರುವು ಪಡೆದುಕೊಳ್ಳುತ್ತದೆ. ಸಿಎಂ ಹಾಗೆ ಹೇಳುವಂಥ ಸಂದರ್ಭ ಸೃಷ್ಟಿಯಾಗಿದ್ದು ಅನಾರೋಗ್ಯಕರ ಬೆಳವಣಿಗೆ. ಸಿದ್ದರಾಮಯ್ಯ ಆ ಮಾತು ಹೇಳುವ ಸ್ಥಿತಿ ಉದ್ಭವಿಸಬಾರದಿತ್ತು.
ಎಸ್.ಎಂ. ಕೃಷ್ಣ, ಮಾಜಿ ಸಿಎಂ
ಸಿಎಂ ಹುದ್ದೆಗಾಗಿ ಹಲವರು ರೇಸ್ಗೆ ಇಳಿದಿದ್ದಾರೆ. ಕಾಂಗ್ರೆಸ್ ಸರ್ಕಾರ ಅವನತಿಯತ್ತ ಸಾಗಿದೆ. ಸಿಎಂ, ಡಿಸಿಎಂ ರಾಜೀನಾಮೆ ನೀಡದಿದ್ದರೂ ಅತೃಪ್ತರೇ ಸರ್ಕಾರ ಬೀಳಿಸುತ್ತಾರೆ.
| ಕೆ.ಎಸ್. ಈಶ್ವರಪ್ಪ ಮಾಜಿ ಸಚಿವ
ನಾನೂ ಸಿಎಂ ಆಕಾಂಕ್ಷಿ
ಮೈಸೂರು: ನಾನು ಕೂಡ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದು, ಹೈಕಮಾಂಡ್ ಸೂಚಿಸಿದರೆ ಸಿಎಂ ಆಗುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಜಿಪಂ ಸದಸ್ಯರಿಂದ ಹಿಡಿದು ಶಾಸಕರವರೆಗೆ ಎಲ್ಲರಿಗೂ ತಮ್ಮ ಅಭಿಪ್ರಾಯ ಹೇಳಲು ಸ್ವಾತಂತ್ರ್ಯದೆ. ಆದರೆ, ಅವರ ಹೇಳಿಕೆ ಶಿಲಾಶಾಸನವಲ್ಲ, ಎಲ್ಲವೂ ಪಕ್ಷದ ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಹೇಳಿದರು.
ಹೈಕಮಾಂಡ್ ತೀರ್ಮಾನಕ್ಕೆ ಬದ್ಧ: ನಮ್ಮದು ಹೈಕಮಾಂಡ್ ಪಕ್ಷ. ಸಿಎಂ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ವರಿಷ್ಠರು ತೆಗೆದುಕೊಳ್ಳುವ ತೀರ್ವನಕ್ಕೆ ನಾನು ಬದ್ಧನಾಗಿದ್ದೇನೆ’ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಸಿಎಂ ಬದಲಾವಣೆ ಚರ್ಚೆ ಮುನ್ನೆಲೆಗೆ ಬಂದ ಕುರಿತಾದ ಪ್ರಶ್ನೆಗೆ ತುಸು ಅಸಹನೆಯಿಂದ ಅವರು ಪ್ರತಿಕ್ರಿಯಿಸಿದರು.
ಸಚಿವರ ಜತೆ ಸಿಎಂ ಸಭೆ ಇಂದು
ಬೆಂಗಳೂರು: ಸಿಎಂ ಅಧಿಕಾರವಧಿ ಹೇಳಿಕೆಗಳ ಮೇಲಾಟದ ಬೆನ್ನಲ್ಲೇ, ಲೋಕಸಭಾ ಎಲೆಕ್ಷನ್ಸಿದ್ಧತೆ, ಹೈಕಮಾಂಡ್ ನೀಡಿರುವ ಟಾರ್ಗೆಟ್ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಇಂದು ಸಚಿವರ ಸಭೆ ನಡೆಸಲಿದ್ದಾರೆ. ಕಾಂಗ್ರೆಸ್ ಹೈಕಮಾಂಡ್, ರಾಜ್ಯದ ಬಗ್ಗೆ ವಿಶೇಷ ಗಮನ ನೀಡಿ, ಸಚಿವರಿಗೆ ಜವಾಬ್ದಾರಿ ನಿಗದಿ ಮಾಡಿದೆ. ಸಭೆಯಲ್ಲಿ ಕೃಷ್ಣ ಬೈರೇಗೌಡ, ಸತೀಶ್ ಜಾರಕಿಹೊಳಿ, ಡಾ.ಜಿ.ಪರಮೇಶ್ವರ ಸೇರಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.