ಬಿಲ್ಡರ್‌ಗಳಿಗೆ ವಾರ್ಷಿಕ ಆಡಿಟ್ ವರದಿ ಸಲ್ಲಿಸಲು ನ.30ರ ಗಡುವು ನೀಡಿದ ಕೆ-ರೇರಾ
1 min readರಾಜ್ಯದ ಬಿಲ್ಡರ್‌ಗಳು ಮತ್ತು ಪ್ರವರ್ತಕರು ನಿಯಮದಂತೆ ಹಣಕಾಸು ವರ್ಷ ಮುಗಿದ ಆರು ತಿಂಗಳಲ್ಲಿ ಅಂದರೆ ಸೆಪ್ಟೆಂಬರ್ 30ರೊಳಗೆ ವಾರ್ಷಿಕ ಆಡಿಟ್ ವರದಿಯನ್ನು ಸಲ್ಲಿಸಲೇಬೇಕು. ಆದರೆ, ಬಹುತೇಕ ಬಿಲ್ಡರ್‌ಗಳು ಲೆಕ್ಕ ಪರಿಶೋಧನಾ ವರದಿಯನ್ನು ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಲೆಕ್ಕ ಪರಿಶೋಧನೆ ನಡೆಸಿ ವರದಿ ಸಲ್ಲಿಸದ ಬಿಲ್ಡರ್, ಪ್ರವರ್ತಕರಿಗೆ ಎಚ್ಚರಿಕೆ ನೀಡಿರುವ ಕೆ – ರೇರಾ ಆಡಿಟ್ ವರದಿ ಸಲ್ಲಿಸಲು ನವೆಂಬರ್ 30ರ ಡೆಡ್‌ಲೈನ್ ವಿಧಿಸಿದೆ.
ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯಿದೆ ಜಾರಿಯಾಗಿ ಆರು ವರ್ಷ ಕಳೆದರೂ ಇನ್ನೂ ರಾಜ್ಯದಲ್ಲಿ ಬಿಲ್ಡರ್‌ಗಳು ಮತ್ತು ಪ್ರವರ್ತಕರು ರೇರಾ ನಿಯಮಗಳನ್ನು ಸಂಪೂರ್ಣವಾಗಿ ಪಾಲನೆ ಮಾಡುತ್ತಿಲ್ಲ.
ಮೊದಲಿಗೆ ಸಾಕಷ್ಟು ಬಿಲ್ಡರ್‌ಗಳು ವಸತಿ ಯೋಜನೆಗಳನ್ನು ನೋಂದಣಿ ಮಾಡಿಸುತ್ತಿಲ್ಲ, ತ್ರೈಮಾಸಿಕ ವರದಿಗಳನ್ನು ಸಲ್ಲಿಸುತ್ತಿಲ್ಲ, ಆಡಿಟ್ ಮಾಡಿದ ಲೆಕ್ಕಪತ್ರಗಳನ್ನು ಸಲ್ಲಿಸುತ್ತಿಲ್ಲ, ಕಾಲ ಕಾಲಕ್ಕೆ ‘ರೇರಾ’ ಹೊರಡಿಸುತ್ತಿರುವ ಆದೇಶಗಳಿಗೆ ಕ್ಯಾರೆ ಎನ್ನುತ್ತಿಲ್ಲ. ಆದರೂ ‘ಕೆ-ರೇರಾ’ ಆಗಾಗ್ಗೆ ಬಿಲ್ಡರ್‌ಗಳಿಗೆ ನಿಯಮ ಪಾಲನೆಯ ಎಚ್ಚರಿಕೆ ನೋಟಿಸ್‌ಗಳನ್ನು ನೀಡುತ್ತಲೇ ಇದೆ.
ಅಂತೆಯೇ ಬಹುತೇಕ ಬಿಲ್ಡರ್‌ಗಳು ಲೆಕ್ಕ ಪರಿಶೋಧನಾ ವರದಿಯನ್ನೂ ಸಲ್ಲಿಸುತ್ತಿಲ್ಲ. ನಿಯಮದಂತೆ ಹಣಕಾಸು ವರ್ಷ (ಏಪ್ರಿಲ್‌ನಿಂದ ಮಾರ್ಚ್‌ವರೆಗೆ) ಮುಗಿದ ನಂತರ ಅಂದರೆ ಏಪ್ರಿಲ್‌ನಿಂದ ಆರು ತಿಂಗಳಲ್ಲಿ ಸೆಪ್ಟೆಂಬರ್ 30ರೊಳಗೆ ವಾರ್ಷಿಕ ಆಡಿಟ್ ವರದಿಯನ್ನು ಸಲ್ಲಿಸಲೇಬೇಕು. ಆದರೆ, ಬಹುತೇಕ ಬಿಲ್ಡರ್‌ಗಳು ಆರು ತಿಂಗಳ ಗಡುವು ಮುಗಿದರೂ ಇನ್ನೂ ‘ಕೆ-ರೇರಾ’ಕ್ಕೆ ಆಡಿಟ್ ವರದಿಯನ್ನು ಸಲ್ಲಿಸಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಾಧಿಕಾರ ಎಲ್ಲ ಬಿಲ್ಡರ್‌ಗಳಿಗೆ ನೋಟಿಸ್ ಹೊರಡಿಸಿ, ನವೆಂಬರ್ 30ರೊಳಗೆ ಆಡಿಟ್ ವರದಿಯನ್ನು ಸಲ್ಲಿಸಲೇಬೇಕು ಎಂದು ನಿರ್ದೇಶನ ನೀಡಿದೆ.
ಅಡ್ಡಾದಿಡ್ಡಿ ಬೆಳೆಯುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮವನ್ನು ನಿಯಂತ್ರಿಸಲು ಹಾಗೂ ಗ್ರಾಹಕರಿಗೆ ಆಗುವ ಅನ್ಯಾಯ ತಡೆಯಲು ಕೇಂದ್ರ ಸರಕಾರ 2016ರಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯಿದೆ ಜಾರಿಗೊಳಿಸಿದೆ. ಅದನ್ನು ಆಧರಿಸಿ ಕರ್ನಾಟಕ 2017ರಲ್ಲಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯಿದೆ ಜಾರಿಗೊಳಿಸಿದೆ. ಅದರಂತೆ ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆಗಳ ನಿಯಂತ್ರಣಕ್ಕಾಗಿ ಕರ್ನಾಟಕ ರಿಯಲ್ ಎಸ್ಟೇಟ್ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ.
ಆ ಕಾಯಿದೆ 2016ರ ಸೆಕ್ಷನ್ 4(2)(ಐ)(ಡಿ) ಪ್ರಕಾರ ‘ರೇರಾ’ದಡಿ ವಸತಿ ಯೋಜನೆಗಳನ್ನು ನೋಂದಾಯಿಸಿಕೊಂಡಿರುವ ಪ್ರತಿಯೊಬ್ಬ ಬಿಲ್ಡರ್ ಪ್ರತಿ ಹಣಕಾಸು ವರ್ಷ ಮುಕ್ತಾಯವಾದ ಕೂಡಲೇ ಆರು ತಿಂಗಳಲ್ಲಿ ಲೆಕ್ಕಪರಿಶೋಧಕರಿಂದ ಪರಿಶೀಲಿಸಲ್ಪಟ್ಟ ಲೆಕ್ಕಪತ್ರ ವರದಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಆ ಲೆಕ್ಕಪತ್ರದ ವರದಿಯನ್ನು ಚಾರ್ಟರ್ಡ್ ಅಕೌಂಟೆಂಟ್ ಪರಿಶೀಲಿಸಿ ಅನುಮೋದಿಸಿರಬೇಕು ಮತ್ತು ಅದರಲ್ಲಿ ನಿರ್ದಿಷ್ಟ ವಸತಿ ಯೋಜನೆಗೆ ಬಳಕೆ ಮಾಡಿರುವ ಖರ್ಚು-ವೆಚ್ಚಗಳ ವಿವರಗಳಿರಬೇಕು ಮತ್ತು ವಸತಿ ಯೋಜನೆಯು ಎಷ್ಟು ಪ್ರಮಾಣದಲ್ಲಿ ಪೂರ್ಣಗೊಂಡಿದೆ ಎಂಬ ವಿವರಗಳು ಒಳಗೊಂಡಿರಬೇಕು.
‘ರೇರಾ’ ಸೆಕ್ಷನ್ 25 ಮತ್ತು 37ರಡಿ ಲಭ್ಯವಿರುವ ಅಧಿಕಾರ ಬಳಸಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಇತ್ತೀಚೆಗೆ ಫಾರಂ ನಂಬರ್-7ರ ನಮೂನೆಯನ್ನು ಪ್ರಕಟಿಸಿದೆ. ಅದರಲ್ಲಿ ವಸತಿ ಯೋಜನೆಗಳಿಗೆ ಗೃಹ ಖರೀದಿದಾರರಿಂದ ಸಂಗ್ರಹಿಸುವ ಹಣ, ಖರ್ಚು ಮಾಡಿರುವ ಹಣ ಹೀಗೆ ವಸತಿ ಯೋಜನೆಯ ಎಲ್ಲಾ ಖರ್ಚು ವೆಚ್ಚಗಳ ವಿವರಗಳು, ಬ್ಯಾಂಕ್ ಖಾತೆಯ ವಿವರ, ಲೆಕ್ಕ ಪರಿಶೋಧಕರು ನಡೆಸಿದ ಪರಿಶೀಲನಾ ವರದಿಯನ್ನು ಸಲ್ಲಿಸಬೇಕು.