ಜೆಡಿಎಸ್ ಸದಸ್ಯರ ಮತ ಮೈತ್ರಿ ಅಭ್ಯರ್ಥಿಗೆ
1 min readಜೆಡಿಎಸ್ ಸದಸ್ಯರ ಮತ ಮೈತ್ರಿ ಅಭ್ಯರ್ಥಿಗೆ
ಜೆಡಿಎಸ್ ಮುಖಂಡರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ
ಮತ ಚಲಾಯಿಸದಿದ್ದರೆ ಶಿಸ್ತು ಕ್ರಮದ ಬಗ್ಗೆ ಚಿಂತನೆ
ಚಿಕ್ಕಬಳ್ಳಾಪುರ ನಗರಸಭೆಗೆ ನಾಳೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಲಿದ್ದು, ಈ ಚುನಾವಣೆಯಲ್ಲಿ ಜೆಡಿಎಸ್‌ನ ಇಬ್ಬರೂ ಸದಸ್ಯರು ಮೈತ್ರಿ ಅಭ್ಯರ್ಥಿ ಪರ ಮತ ಚಲಾಯಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಫಲಿತಾಂಶ ಏನಾಗಲಿದೆ ಎಂಬ ಸ್ಪಷ್ಟತೆ ಯಾವುದೇ ಪಕ್ಷಕ್ಕೆ ಇಲ್ಲದ ಕಾರಣ ಮುಖಂಡರಲ್ಲಿ ತಲ್ಲಣ ಮೂಡಿಸಿದೆ. ಕಳೆದ ಒಂದು ವಾರದಿಂದ ಜೆಡಿಎಸ್ ಸದಸ್ಯರು ಸಾರ್ವಜನಿಕ ಸಂಪರ್ಕದಿ0ದ ದೂರ ಇದ್ದು, ಯಾವುದೇ ನಾಯಕರ ಕೈಗೂ ಸಿಗುತ್ತಿಲ್ಲ. ಇದರಿಂದ ಜೆಡಿಎಸ್ ಸದಸ್ಯರು ಈಗಾಗಲೇ ಕಾಂಗ್ರೆಸ್ ಸಂಪರ್ಕದಲ್ಲಿ ಪ್ರವಾಸ ತೆರಳಿದ್ದಾರೆ ಎಂಬ ಮಾತುಗಳು ಹೇರಳವಾಗಿರುವ ಬೆನ್ನಲ್ಲಿಯೇ ಇಂದು ಜೆಡಿಎಸ್ ನಾಯಕರಿಂದ ಸುದ್ದಿಗೋಷ್ಠಿ ನಡೆಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ, ಚಿಕ್ಕಬಳ್ಳಾಪುರ ನಗರಸಭೆ ಯಲ್ಲಿ ಒಟ್ಟು 31 ಸದಸ್ಯರಿದ್ದಾರೆ. ಜೊತೆಗೆ ಸಂಸದರು ಮತ್ತು ಶಾಸಕರು ಮತ ಚಲಾಯಿಸಬಹುದಾಗಿದೆ. ಆದರೆ ಕಾಂಗ್ರೆಸ್‌ನವರು ದುರುದ್ಧೇಶಪೂರ್ವಕವಾಗಿ ಇಬ್ಬರು ವಿಧಾನ ಪರಿಷತ್ ಸದಸ್ಯರನ್ನು ಸೇರಿಸಿದ ಕಾರಣ ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ 35 ಮತಕ್ಕೆ ಏರಿಕೆಯಾಗಿದೆ. ಇದಕ್ಕೆ ಅಗತ್ಯವಿರುವ ಬಹುಮತ ಮೈತ್ರಿ ಪಕ್ಷಗಳಿಗೆ ಇದ್ದು, ನಾಳೆ ಮೈತ್ರಿ ಪಕ್ಷದ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲದೆ ಕಳೆದ ನಾಲ್ಕೆದು ದಿನಗಳಿಂದ ಜೆಡಿಎಶ್ ಸದಸ್ಯರು ಸಂಪರ್ಕಕ್ಕೆ ಸಿಗದೆ ದೂರ ಇದ್ದು, ಅವರು ನಾಳೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ವರಿಷ್ಠರ ಆದೇಶ ಮತ್ತು ಆತ್ಮ ಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಲಿದ್ದಾರೆ ಎಂದರು. ಜೆಡಿಎಸ್ ಸದಸ್ಯರು ಇಬ್ಬರು ಗೆದ್ದಿದ್ದರೂ ಒಬ್ಬರಿಗೆ ಈ ಹಿಂದೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಅಲ್ಲದೆ ಮತ್ತೊಬ್ಬ ಸದಸ್ಯ ಮಟಮಪ್ಪ ಅವರಿಗೂ ಸ್ಥಾಯಿ ಸಮಿತಿಯಲ್ಲಿ ಅವಕಾಶ ಕಲ್ಪಿಸುವ ಭರವಸೆ ನೀಡಲಾಗಿದೆ. ಹಾಗಾಗಿ ಅವರಿಬ್ಬರೂ ಪಕ್ಷಕ್ಕೆ ದ್ರೋಹ ಮಾಡದೆ ಆತ್ಮ ಸಾಕ್ಷಿಯಾಗಿ ಮತ ಚಲಾಯಿಸಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ ಎಂದರು.
ಕಳೆದ ಕೆಲ ದಿನಗಳಿಂದ ಸಂಪರ್ಕಕ್ಕೆ ಸಿಗದ ಕಾರಣ ವಿಪ್ ಜಾರಿಗೊಳಿಸಲು ಪಕ್ಷದ ವರಿಷ್ಠರು ಸೂಚಿಸಿದ್ದು, ಇಬ್ಬರೂ ಜೆಡಿಎಸ್ ಸದಸ್ಯರಿಗೆ ವಿಪ್ ಜಾರಿ ಮಾಡಲಾಗುವುದು. ಅವರು ಯಾವುದೋ ಒತ್ತಡಕ್ಕೆ ಮಣಿದು ಹೋಗಿದ್ದಾರೆ ಎಂಬ ನಂಬಿಕೆ ಇದ್ದು, ಚುನಾವಣಯೆಲ್ಲಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ. ಒಂದು ವೇಳೆ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಬೆಂಬಲಿಸಿದರೆ ಯಾವ ರೀತಿಯ ಕ್ರಮ ಜರುಗಿಸಬೇಕು ಎಂಬ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಿ, ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯ ಕಿಸಾನ್ ಕೃಷ್ಣಪ್ಪ, ಜೆಡಿಎಸ್ ಮುಖಂಡ ಕೆ.ಆರ್. ರೆಡ್ಡಿ, ಸೇರಿದಂತೆ ಇತರರು ಇದ್ದರು.