ಕಾಟಾಚಾರಕ್ಕೆ ಶಾಸಕರ ಜನತಾ ದರ್ಶನ!
1 min readಕಾಟಾಚಾರಕ್ಕೆ ಶಾಸಕರ ಜನತಾ ದರ್ಶನ! ಒಂದೆ ಕಾರ್ಯಕ್ರಮಕ್ಕೆ ಸಾಕಾಯಿತೇ ಶಾಸಕರಿಗೆ? ಬರಿಗೈಯಲ್ಲಿ ವಾಪಸ್ ಆದ ಸಾರ್ವಜನಿಕರು ಶಾಸಕರ ವೈಖರಿಗೆ ಸಾರ್ವಜನಿಕರ ಅಸಮಾಧಾನ
ಶಾಸಕರಿಗೆ ದೂರು ಹೇಳಲು ದೂರದ ಊರಿನಿಂದ ಬಂದವರು, ಮುಖ್ಯವಾಗಿ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ದೂರಲು ಬಂದವರು. ಆದರೆ ಯಾರ ವಿರುದ್ಧ ದೂರು ಹೇಳಬೇಕೋ ಅವರಿಗೇ ದೂರು ಹೇಳುವ ಸ್ಥಿತಿ. ಇದರಿಂದ ನಿರಾಸೆ ಹೊಂದಿ, ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ಆದರು.
ಏನು ಇದೆಲ್ಲ ಅಂತಾ ನೋಡ್ತಿದ್ದೀರಾ? ಅದೇ ಕಣ್ರೀ ನಮ್ಮ ಜನಪ್ರಿಯ ಶಾಸಕ ಪ್ರದೀಪ್ ಈಶ್ವರ್ ಇದ್ದಾರಲ್ಲ, ಅವರ ಜನತಾ ದರ್ಶನ ಮುಖ್ಯಾಂಶಗಳು. ಶಾಸಕರು ಬುಧವಾರ ಬೆಳಗ್ಗೆ 10 ಗಂಟೆಗೆ ಚಿಕ್ಕಬಳ್ಳಾಪುರದ ತಾಲೂಕು ಕಚೇರಿ ಆವರಣದಲ್ಲಿ ಜನತಾ ದರ್ಶನ ಆಯೋಜಿಸಿದ್ದರು. ಜನತಾ ದರ್ಶನದಲ್ಲಿ ನಡೆದ ಅಂಶಗಳಿವು.
ವಾಸ್ತವಕ್ಕೆ ಜನತಾ ದರ್ಶನ ಮಾಡೋದು ಅಧಿಕಾರಿಗಳಿಗೆ ಇಷ್ಟವಿಲ್ಲದಂತಿದೆ. ಹಾಗಾಗಿಯೇ ಶಾಸಕರ ಜನತಾ ದರ್ಶನ ಕಾರ್ಯಕ್ರಮದ ಬಗ್ಗೆ ಅಪ್ಪಿ ತಪ್ಪಿಯೂ ಪ್ರಚಾರ ಮಾಡಿಲ್ಲ. ಅಷ್ಟೇಕೆ ತಹಸೀಲ್ದಾರ್ ಮತ್ತು ಎಸಿ ಕಚೇರಿಯ ಆವರಣದಲ್ಲಿ ಹುಡುಕಾಡಿದರೂ ಒಂದು ಕರ ಪತ್ರ ಸಿಗೊದಿಲ್ಲ. ಇನ್ನು ಫ್ಲೆಕ್ಸ್ ಕತೆ ಬೇಡವೇ ಬೇಡ ಬಿಡಿ.
ಮುಖ್ಯವಾಗಿ ಅಧಿಕಾರಿಗಳ ನಿರ್ಲಕ್ಷ್ಯ ಜಿಲ್ಲೆಯಲ್ಲಿ ಎದ್ದು ಕಾಣುತ್ತಿದೆ. ಗೋಮಾಳ ಸೇರಿದಂತೆ ಸರ್ಕಾರಿ ಬೂಮಿಯನ್ನು ಬಲಾಢ್ಯರು ಒತ್ತುವರಿ ಮಾಡಿದ್ದರೆ, ಅದಕ್ಕೆ ಅಧಿಕಾರಿಗಳ ಕುಮ್ಮಕ್ಕಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಹಾಗಾಗಿ ಅಂತಹ ಅಧಿಕಾರಿಗಳ ವಿರುದ್ಧ ಸಚಿವರು ಮತ್ತು ಶಾಸಕರಿಗೆ ದೂರು ನೀಡಿದರೆ ಏನಾದರೂ ಸಹಾಯವಾಗಬಹುದು ಎಂದು ಬಾಗೇಪಲ್ಲಿ ಸೇರಿದಂತೆ ಹಲವು ದೂರದ ಪ್ರದೇಶಗಳಿಂದ ದೂರುಗಳನ್ನು ಹೊತ್ತು ರೈತರು ಬಂದಿದ್ದರು. ಆದರೆ ಇಲ್ಲಿ ಸಚಿವರು ಇರಲಿ ಶಾಸಕರೂ ಗೈರು ಹಾಜರಾಗಿದ್ದರು.
ತಹಸೀಲ್ದಾರ್, ಸರ್ವೇ ಅಧಿಕಾರಿಗಳು, ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಶಾಸಕರು, ಸಚಿವರ ಗಮನ ಸೆಳೆಯುವ ಉದ್ಧೇಶದಿಂದ ಬಂದಿದ್ದ ಸಾರ್ವಜನಿಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಆದರು. ಯಾಕೆಂದರೆ ಯಾರ ವಿರುದ್ಧ ದೂರು ಹೇಳಬೇಕಿತ್ತೋ ಅವರ ಕೈಗೆ ದೂರು ನೀಡುವ ಸ್ಥಿತಿ ಸಾರ್ವಜನಿಕರಿಗೆ ಎದುರಾಗಿತ್ತು.
ಇನ್ನು ಈಗಾಗಲೇ ಹಲವು ವಿಚಾರಗಳಿಗೆ ಸಂಬಂಧಿಸಿ ಐದಾರು ವರ್ಷಗಳಿಂದ ನೀಡಿರುವ ದೂರುಗಳೇ ಇತ್ಯರ್ಥವಾಗಿಲ್ಲ. ಇನ್ನು ಅಧಿಕಾರಿಗಳ ವಿರುದ್ಧ ಅಧಿಕಾರಿಗಳಿಗೇ ದೂರು ನೀಡಿದರೆ ಆಗುವ ಉಪಯೋಗವಾದರೂ ಏನು ಎಂಬುದು ಸಾರ್ವಜನಿಕರ ಪ್ರಶ್ನೆ.
ಶಾಸಕ ಪ್ರದೀಪ್ ಈಶ್ವರ್ ಅವರು ಶಾಸಕರಾಗಿ ಆಯ್ಕೆಯಾದ ಹೊಸದರಲ್ಲಿ ಪ್ರತಿನಿತ್ಯ ಕ್ಷೇತ್ರದ ಜನತೆಯೊಂದಿಗೆ ಇರುವುದಾಗಿ ಘೋಷಿಸಿದ್ದರು. ಅದೇ ಕಾರಣಕ್ಕೆ ನಮಸ್ತೆ ಚಿಕ್ಕಬಳ್ಳಾಪುರ ಹೆಸರಿನಲ್ಲಿ ಪ್ರತಿ ದಿನ ಒಂದು ಗ್ರಾಮಕ್ಕೆ ಭೇಟಿ ನೀಡುವ ಭರವಸೆ ನೀಡಿದವರು ಆರು ತಿಂಗಳು ಕಳೆದರೂ ಆರು ಗ್ರಾಮಗಳಿಗೆ ಭೇಟಿ ನೀಡಿಲ್ಲ ಎಂಬುದು ಗುಟ್ಟಾಗಿ ಉಳಿದಿಲ್ಲ.
ಇನ್ನು ಇದೇ ಶಾಸಕ ಪ್ರದೀಪ್ ಈಶ್ವರ್ ಅವರು ನಗರಸಭಾ ಸದಸ್ಯರೆಲ್ಲಾ ಭ್ರಷ್ಟರು, ಭ್ರಷ್ಟರನ್ನು ನಗರಸಭೆಗೆ ಕಳುಹಿಸಿದ್ದೀರಿ ಎಂದು ರೇಗಾಡಿದ್ದರು. ಅಷ್ಟೇ ಅಲ್ಲ, ನಗರಸಭೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸುವ ಭರವಸೆಯನ್ನೂ ನೀಡಿದ್ದರು. ಆದರೆ ತನಿಖೆ ನಡೆಸುವುದಿರಲಿ, ಯಾರನ್ನು ಭ್ರಷ್ಟರೆಂದು ಜರಿದಿದ್ದರೋ ಅದೇ ನಗರಸಭೆ ಸದಸ್ಯರೊಂದಿಗೆ ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್ ನಲ್ಲಿ ಚರ್ಚೆ ನಡೆಸುವ ಮೂಲಕ ತಾವೂ ಅಪ್ಪಟ ರಾಜಕಾರಣಿ ಎಂಬುದನ್ನು ನಿರೂಪಿಸಿದ್ದರು.
ಮುಖ್ಯವಾಗಿ ಅಗಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿಯ ಬಗ್ಗೆ ಸರ್ವೇ ಮಾಡಿಸಿದ ಶಾಸಕರು ನಗರ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಕೋಟ್ಯಂತರ ರುಪಾಯಿ ಮೌಲ್ಯದ ನಗರಸಭೆ ಆಸ್ತಿಗಳ ಬಗ್ಗೆ ಯಾಕೆ ತುಟಿ ಬಿಚ್ಚುತ್ತಿಲ್ಲ ಎಂಬ ಪ್ರಜ್ಞಾವಂತರ ಪ್ರಶ್ನೆಗೆ ಶಾಸಕರಿಂದ ಉತ್ತರವಿಲ್ಲ.
ಚುನಾವಣಾ ಪೂರ್ವದಲ್ಲಿ ಎಚ್ಎನ್ ವ್ಯಾಲಿ ಅಪಾಯಕಾರಿ ಎಂದು ಇದೇ ಪ್ರದೀಪ್ ಈಶ್ವರ್ ಅವರು ಅಬ್ಬರದ ಪ್ರಚಾರ ನಡೆಸಿದ್ದರು. ಆದರೆ ಅವರು ಶಾಸಕರಾಗಿ ಆರು ತಿಂಗಳು ಕಳೆದರೂ ಎಚ್ಎನ್ ವ್ಯಾಲಿ ಮೂರನೇ ಹಂತದ ಶುದ್ಧೀಕರಣದ ಬಗ್ಗೆ ಚಕಾರವೇ ಎತ್ತಿಲ್ಲ.
ಹೀಗೆ ಶಾಸಕರ ಭರವಸೆಗಳು ಮತ್ತು ವೈಪಲ್ಯಗಳು ಹೇಳುತ್ತಾ ಹೋದರೆ ಸಾಲು ಸಾಲು ಇವೆ. ಅವುಗಳಲ್ಲಿ ಇಂದಿನ ಜನತಾ ದರ್ಶನ ಒಂದು ಉದಾಹರಣೆ ಅಷ್ಟೆ. ಎಷ್ಟೋ ನಿರೀಕ್ಷೆಯಿಂದ ಆರಂಭವಾದ ಜನತಾ ದರ್ಶನ ಮಧ್ಯಾಹ್ನ ಒಂದು ಗಂಟೆಗೇ ಮುಕ್ತಾಯಗೊಳಿಸಲಾಯಿತು. ಬೆಳಗ್ಗೆ 11.30ಕ್ಕೆ ಆರಂಭವಾಗಿ, ಮಧ್ಯಾಹ್ನ ಒಂದು ಗಂಟೆಗೆ ಮುಗಿದ ಜನತಾ ದರ್ಶನದಲ್ಲಿ ಅದೆಷ್ಟು ದೂರುಗಳು ಬಂದವು, ಅದರಲ್ಲಿ ಎಷ್ಟು ಪರಿಹಾರವಾಗಲಿದೆ ಎಂಬುದನ್ನು ಶಾಸಕ ಪ್ರದೀಪ್ ಈಶ್ವರ್ ಅವರೇ ಹೇಳಬೇಕು.
ಅದೇನೇ ಇರಲಿ ಹೆಚ್ಚು ನಿರೀಕ್ಷೆ ಇಟ್ಟಿಕೊಂಡಿದ್ದ ಶಾಸಕರೊಬ್ಬರು ಆರಂಭದಲ್ಲಿಯೇ ನಿರಾಸೆ ಹುಟ್ಟಿಸುವಂತೆ ವರ್ತಿಸುತ್ತಿರುವುದು ವಿಪರ್ಯಾಸವೇ ಸರಿ. ಇನ್ನಾದರೂ ನಮಸ್ತೆ ಚಿಕ್ಕಬಳ್ಳಾಪುರ ಮತ್ತು ಜನತಾ ದರ್ಶನ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲಿ, ಜನರ ಸಮಸ್ಯೆಗಳಿಗೆ ಸ್ವಲ್ಪಮಟ್ಟಿಗಾದರೂ ಪರಿಹಾರ ಸಿಗಲಿ ಎಂದು ಹಾರೈಸೋಣ.