ಕೈಗಾರಿಕೆ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸಿದರೆ ಸಹಸಲಾಗದು
1 min readಕೈಗಾರಿಕೆ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸಿದರೆ ಸಹಸಲಾಗದು
ಶಿಡ್ಲಘಟ್ಟದಲ್ಲಿ ರೈತಸಂಘದ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ
ಆರ್‌ಎಸ್‌ಎಸ್ ನಾಯಕರ ಶಿಫಾರಸಿನ ಮೇರೆಗೆ 9.90 ಲಕ್ಷ ತೆರಿಗೆ ಬಾಕಿ ಮನ್ನಾ ಮಾಡಿದ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ. ರೈತರು ಸಂಘಟಿತರಾಗಿ ರಾಜಕೀಯ ಶಕ್ತಿ ಪ್ರದರ್ಶನ ಮಾಡುವ ಕಾಲ ಬಂದಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಕ್ರಾಸ್ ನಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಆರು ಗ್ರಾಮ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾ ಮಾಡುವ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿವೆ. ಆದರೆ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಹಣದಾಸೆಯಿಂದ ರೈತರನ್ನು ಒಕ್ಕಲಬ್ಬಿಸುವ ದುಸ್ಸಾಹಸವನ್ನು ಮಾಡುತ್ತಿದ್ದು, ರೈತರು ಇದರ ವಿರುದ್ಧ ಸಂಘಟಿತರಾಗಿ ಹೋರಾಟಕ್ಕೆ ಸಜ್ಜಾಗಬೇಕು. ಅಗತ್ಯ ಬಿದ್ದಲ್ಲಿ ಜೈಲ್ ಭರೋ ಚಳುವಳಿ, ಕರ್ನಾಟಕ ವಿಧಾನಸಭೆಗೆ ಮುತ್ತಿಗೆ ಹಾಕಲು ತಯಾರಾಗಿರಬೇಕೆಂದು ಕರೆ ನೀಡಿದರು.
ಕರ್ನಾಟಕದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ವಿಚಾರದಲ್ಲಿ ರೈತರ ಭೂಸ್ವಾಧೀನಕ್ಕೆ ತಮ್ಮ ಸಂಘಟನೆ ಪ್ರಬಲವಾಗಿ ವಿರೋಧ ವ್ಯಕ್ತ ಮಾಡುತ್ತದೆ. ರಾಜ್ಯದ ಯಾವ ಭಾಗದಲ್ಲಿ ಆದರೂ ಕೈಗಾರಿಕೆ ನೆಪದಲ್ಲಿ ಭೂಸ್ವಾಧೀನ ಮಾಡಿಕೊಳ್ಳಲು ಬರುವ ಅಧಿಕಾರಿಗಳನ್ನು ದನದ ಕೊಟ್ಟಿಗೆಯಲ್ಲಿ ದಿಗ್ಬಂಧನಕ್ಕೆ ಒಳಪಡಿಸಬೇಕೆಂದು ಕರೆ ನೀಡಿದರು. ಜಂಗಮಕೋಟೆ ಸುತ್ತಮುತ್ತಲಿನ 2,820 ಎಕರೆ ಜಮೀನು ಕೈಗಾರಿಕೆ ಹೆಸರಿನಲ್ಲಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಯಾರೂ ಅವಕಾಶ ಕೊಡಬಾರದು, ಈಗಾಗಲೇ ಕೈಗಾರಿಕೆಗಾಗಿ ಭೂ ಸ್ವಾಧೀನ ಮಾಡಿಕೊಂಡಿರುವ ಜಾಗಗಳನ್ನು ಕೆಲ ಪ್ರಭಾವಿ ಸಾಹಿತಿಗಳು ಅವರ ಮಕ್ಕಳ ಹಾಗೂ ಮೊಮ್ಮಕ್ಕಳ ಹೆಸರಿನಲ್ಲಿ ಪಡೆದು ಬಾಡಿಗೆ ನೀಡಿದ್ದಾರೆ ಇವೆಲ್ಲವೂ ಬಹಿರಂಗಪಡಿಸಲಾಗುವುದು ಎಂದು ಎಚ್ಚರಿಸಿದರು.
ರೈತರು ಆರ್ಥಿಕವಾಗಿ ಸಬಲರಾಗಲು ಚಿಂತನೆ ಮಾಡಬೇಕು ಯಾರು ಅವರ ಹಿತ ಕಾಪಾಡುತ್ತಾರೆ ಎಂಬುದನ್ನು ನೋಡಿ ಮುಂಬರುವ 2028ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರೈತರು ಸಂಘಟಿತರಾಗಿ ರೈತರ ಹಿತ ಕಾಪಾಡುವ ಪ್ರತಿನಿಧಿಗಳನ್ನು ವಿಧಾನಸಭೆಗೆ ಕಳಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಹೀರೆಬಲ್ಲ ಕೃಷ್ಣಪ್ಪ ಇದ್ದರು.