ಬಡವರ ಮನೆಗೆ ಇನ್ನೂ ಬೆಳಕಾಗದ ದೀಪಾವಳಿ
1 min readಬಡವರ ಮನೆಗೆ ಇನ್ನೂ ಬೆಳಕಾಗದ ದೀಪಾವಳಿ
ಬೆಳಗದ ಗೃಹಜ್ಯೋತಿ, ಬೆಳಕಿನ ಹಬ್ಬಕ್ಕೆ ಇಲ್ಲ ಬೆಳಕು
ಬೀದಿ ದೀಪದ ಕೆಳಗೆ ಓದುವ ವಿದ್ಯಾರ್ಥಿಗಳು
ಬಡವರ ಮನೆಗೆ ಇನ್ನೂ ಬರಲಿಲ್ಲ, ಬೆಳಕಿನ ಕಿರಣ ತರಲಿಲ್ಲ, ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ ಎಂಬ ಸಾಹಿತಿ ಡಾ.ಸಿದ್ದಲಿಂಗಯ್ಯನವರ ಕವಿತೆ ಇಂದು ಪ್ರಸ್ತುತವಾಗಿದೆ. ಹೌದು, ಶತಮಾನಗಳೇ ಕಳೆದರು ಬಡವರ ಮನೆಗೆ ಇನ್ನೂ ಬೆಳಕಿನ ಭಾಗ್ಯ ಸಿಕ್ಕಿಲ್ಲ. ಕಗ್ಗತ್ತಿಲಿನ¯್ಲೆ ವಾಸ ಮಾಡುತ್ತಿದ್ದು, ಅಧಿಕಾರಿಗಳ ಬೇಜವಾಬ್ದಾರಿ ತನಕ್ಕೆ ಮೇಣದಬತ್ತಿ ಬೆಳಕಿನಲ್ಲೆ ಬದುಕುತ್ತಿರುವುದು ನಾಗರೀಕ ಸಮಾಜವೇ ತಲೆ ತಗ್ಗಿಸುವಂತಿದೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ, ಶಾಸಕ ದರ್ಶನ್ ಧ್ರುವನಾರಾಯಣ್ ಮತ್ತು ಸಂಸದ ಸುನೀಲ್ ಬೋಸ್ ಪ್ರತಿನಿಧಿಸುವ ಮೈಸೂರು ಜಿಲ್ಲೆ. ಇದೇ ಜಿಲ್ಲೆಯ ನಂಜನಗೂಡು ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿರುವ ಮೇದರಬೀದಿ ಬಡಾವಣೆಯಲ್ಲಿ ವಾಸಿಸುತ್ತಿರುವ ಚೆನ್ನಜಮ್ಮ ಎಂಬುವರ ಮನೆಗೆ ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುತ್ತಿದ್ದಾರೆ. ನಂಜನಗೂಡು ನಗರಸಭೆ ಅಧಿಕಾರಿಗಳು ಮತ್ತು ಚೆಸ್ಕಾಂ ಅಧಿಕಾರಿಗಳ ಕಛೇರಿಗೆ ಅಲೆದಾಡಿದರು ಅಧಿಕಾರಿಗಳು ಮಾತ್ರ ಕ್ಯಾರೇ ಎಂದಿಲ್ಲ.
ವಿದ್ಯುತ್ ಸಂಪರ್ಕವಿಲ್ಲದೆ ವಿದ್ಯಾಭ್ಯಾಸ ಮಾಡಲು ತೊಂದರೆಯಾಗುತ್ತಿದ್ದು, ಮೇಣದ ಬತ್ತಿಯ ಬೆಳಕು ಮತ್ತು ಬೀದಿ ದೀಪದ ಕೆಳಗೆ ವಿದ್ಯಾರ್ಥಿ ಓದುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ನಲ್ಲಿ ಸಂಪರ್ಕವನ್ನೂ ಕಲ್ಪಿಸಿಲ್ಲ. ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ. ಮುರುಕಲು ಮನೆಯಲ್ಲಿ ವಾಸಿಸುತ್ತಿರುವ ಕುಟುಂಬಕ್ಕೆ ಈವರೆಗೆ ನಗರಸಭೆಯಿಂದ ಮನೆ ನೀಡುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ.
ಗೃಹಲಕ್ಷ್ಮೀ, ಉಜ್ವಲ ಯೋಜನೆ, ವಿಭಾವಾ ವೇತನ, ಪ್ರಧಾನ ಮಂತ್ರಿಗಳ ಉಜ್ವಲ ಯೋಜನೆಯ ಸಬ್ಸಿಡಿ, ಅನ್ನಭಾಗ್ಯ ಯೋಜನೆಯಲ್ಲೆ ಕುಟುಂಬ ಜೀವನ ಸಾಗಿಸುತ್ತಿದ್ದು, ಆಧರ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ ಎಲ್ಲವು ಇದೆ. ಆದರೆ ವಿದ್ಯುತ್ ಸಂಪರ್ಕ ಮಾತ್ರ ಇಲ್ಲ. ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯಂತೂ ಇವರಿಗೆ ತಲುಪಿಲ್ಲ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎಚ್ಚೆತ್ತು ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಜನಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ನಗರ್ಲೆ ಎಂ.ವಿಜಯಕುಮಾರ್ ಎಚ್ಚರಿಕೆ ನೀಡಿದ್ದಾರೆ.