ಬೆಂಗಳೂರು ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧದ ಪ್ರಕರಣದ ತನಿಖೆ ಸಿಸಿಬಿಗೆ ವರ್ಗಾವಣೆ
1 min readಭ್ರಷ್ಟಾಚಾರ ತಡೆ ಕಾಯ್ದೆಯಡಿ ಇನ್ಸ್ಪೆಕ್ಟರ್ ವಿರುದ್ಧ ದಾಖಲಾದ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ.
ಬೆಂಗಳೂರು : ಇನ್ಸ್ಪೆಕ್ಟರ್ವೊಬ್ಬರುತಮ್ಮ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯ ನಡೆಯದಿದ್ದರೂ ನಡೆದಿದೆ ಎಂದು ಬಿಂಬಿಸಿ, ಸುಳ್ಳು ಕೇಸ್ ದಾಖಲಿಸಿದ ಆರೋಪ ಇರುವ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.
ಬ್ಯಾಟರಾಯನಪುರ ಉಪವಿಭಾಗದ ಎಸಿಪಿ ಭರತ್ ರೆಡ್ಡಿ ನೀಡಿದ್ದ ದೂರಿನ ಅನ್ವಯ ಇನ್‌ಸ್ಪೆಕ್ಟರ್ ಜಿ ಕೆ ಶಂಕರ್ ನಾಯಕ್ ಹಾಗೂ ಇತರರ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಸುಳ್ಳು ಪ್ರಕರಣ ಸೃಷ್ಟಿಸಿ ಹಣ ದೋಚಲು ಸಂಚು ರೂಪಿಸಿದ್ದ ಹಾಗೂ ಲಂಚಕ್ಕೆ ಬೇಡಿಕೆ ಇರಿಸಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆಯನ್ನು ಎಸಿಪಿ ಮಟ್ಟದ ಅಧಿಕಾರಿ ನಡೆಸಬೇಕಿರುವುದು ಹಾಗೂ ಎಸಿಪಿಯೇ ದೂರುದಾರ ಆಗಿರುವುದರಿಂದ ಪ್ರಕರಣದ ತನಿಖೆಯ ಹೊಣೆಯನ್ನು ಸಿಸಿಬಿಗೆ ವಹಿಸಲಾಗಿದೆ ಎಂದು ಬಿ.ದಯಾನಂದ್ ತಿಳಿಸಿದ್ದಾರೆ.
2022ರ ಸೆಪ್ಟೆಂಬರ್‌ನಲ್ಲಿ ಉದ್ಯಮಿ ಹರೀಶ್ ಅವರಿಗೆ ಸೇರಿದ್ದ 75 ಲಕ್ಷ ರೂ. ಹಣವನ್ನು ಅವರ ಚಾಲಕ ಸಂತೋಷ್ ಕದ್ದೊಯ್ದಿದ್ದ. ಈ ಬಗ್ಗೆ ದೂರು ದಾಖಲಾಗಿತ್ತು. ಆದರೆ, ಹೊಸಕೋಟೆ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದ್ದರೂ ಸಹ ಬ್ಯಾಟರಾಯನಪುರ ವ್ಯಾಪ್ತಿಯಲ್ಲಿಯೇ ಕಳ್ಳತನ ನಡೆದಿರುವುದಾಗಿ ಇನ್ಸ್ಪೆಕ್ಟರ್ ಶಂಕರ್ ನಾಯಕ್ ಸುಳ್ಳು ಪ್ರಕರಣ ಸೃಷ್ಟಿಸಿದ್ದಾರೆ. ಅಲ್ಲದೇ, ತಾನೇ ಸಿದ್ಧಪಡಿಸಿದ್ದ ದೂರಿಗೆ ಮೂರನೇ ವ್ಯಕ್ತಿಯಿಂದ ನಕಲಿ ಸಹಿ ಪಡೆದು ಎಫ್‌ಐಆರ್ ದಾಖಲಿಸಿಕೊಂಡು, ಆರೋಪಿ ಪತ್ತೆ ಮಾಡಿ 72 ಲಕ್ಷ ರೂ. ಜಪ್ತಿ ಮಾಡಿದ್ದರು ಎಂದು ಎಸಿಪಿ ದೂರಿನಲ್ಲಿ ಉಲ್ಲೇಖಿಸಿದ್ದರು.
ಪ್ರಕರಣದ ಬಗ್ಗೆ ಅನುಮಾನಗೊಂಡಿದ್ದ ಅಂದಿನ ಡಿಸಿಪಿ, ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದರು. ಅದರನ್ವಯ ಪ್ರಕರಣದ ಕಡತಗಳನ್ನು ವಶಕ್ಕೆ ಪಡೆದಿದ್ದ ತನಿಖಾಧಿಕಾರಿ ಕೋದಂಡರಾಮ್, 72 ಲಕ್ಷ ಹಣವನ್ನ ಸರ್ಕಾರಿ ಖಜಾನೆಯಲ್ಲಿ ಇರಿಸುವಂತೆ ಶಂಕರ್ ನಾಯಕ್ಗೆ ಸೂಚಿಸಿದ್ದರು. ಆದರೆ, ಇನ್ಸ್ಪೆಕ್ಟರ್ ಅದೇ ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ನಂತರದಲ್ಲಿ ಬ್ಯಾಟರಾಯನಪುರ ಠಾಣೆಗೆ ವರ್ಗಾವಣೆಗೊಂಡಿದ್ದ ಇನ್ಸ್‌ಪೆಕ್ಟರ್ ಸುಪರ್ದಿಗೆ ಹಣ ನೀಡುವಂತೆ ಹಲವು ಬಾರಿ ಶಂಕರ್ ನಾಯಕ್ಗೆ ನೋಟಿಸ್ ನೀಡಲಾಗಿತ್ತು. ಹಣವಿದ್ದ ಚೀಲವನ್ನು ಶಂಕರ್ ನಾಯಕ್ ಬ್ಯಾಟರಾಯನಪುರ ಠಾಣೆಗೆ ತಂದಿರಿಸಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು ಎಂದು ಎಸಿಪಿ ದೂರಿದ್ದರು.
ಈ ಎಲ್ಲ ಅಂಶಗಳನ್ನು ಆಧರಿಸಿ ಪ್ರಸ್ತುತ ತನಿಖಾಧಿಕಾರಿಯಾಗಿದ್ದ ಬ್ಯಾಟರಾಯನಪುರ ಉಪವಿಭಾಗದ ಎಸಿಪಿ ಭರತ್ ರೆಡ್ಡಿ ನೀಡಿದ್ದ ದೂರಿನ ಅನ್ವಯ, ಐಪಿಸಿ 409 (ಸಾರ್ವಜನಿಕ ಸೇವಕರಿಂದ ನಂಬಿಕೆಯ ಉಲ್ಲಂಘನೆ), ಐಪಿಸಿ 465 (ನಕಲಿ ದಾಖಲೆ ಸೃಷ್ಟಿ), ಐಪಿಸಿ 201 (ಸಾಕ್ಷ್ಯಗಳ ಕಣ್ಮರೆ ಮಾಡುವುದು), ಐಪಿಸಿ 110 (ಅಪರಾಧಕ್ಕೆ ಕುಮ್ಮಕ್ಕು) ಆರೋಪ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ಹಾಗೂ ಲೋಕನಾಥ್ ಸಿಂಗ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಇದರ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ.