ನ್ಯಾಯಾಧೀಶರಿಂದ ಮಂಚೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿಶೀಲನೆ
1 min readನ್ಯಾಯಾಧೀಶರಿಂದ ಮಂಚೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿಶೀಲನೆ ಅವ್ಯವಸ್ಥೆ ಸರಿಪಡಿಸಲು ನ್ಯಾಯಾಧೀಶರ ತಾಕೀತು
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯರ್ದಶಿಗಳಾದ ಎ.ಅರುಣಕುಮಾರಿ ಅವರು ಮಂಚೇನಹಳ್ಳಿ ತಾಲ್ಲೂಕು ಕೇಂದ್ರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳನ್ನು ಗಮನಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಕೆಲಸ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ಹಾಜರಾತಿ ಪರಿಶೀಲಿಸಿ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಗೈರು ಹಾಜರಾಗಿರುವುದನ್ನು ಗಮನಿಸಿದರು. ಆರೋಗ್ಯ ಸೇವೆಗಳು ಜನರಿಗೆ ಸಮರ್ಪಕವಾಗಿ ತಲುಪದಿರುವ ಬಗ್ಗೆ ತಿಳಿದುಕೊಂಡು ಸಂಬಂಧಪಟ್ಟವರಿಗೆ ಕೂಡಲೆ ಸರಿಪಡಿಸುವಂತೆ ಸೂಚನೆ ನೀಡಿದರು.
ಆಸ್ಪತ್ರೆ ಕಸ ಮತ್ತು ಪ್ಲಾಸ್ಟಿಕ್ ರಾಶಿ ಹಾಕಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ರೋಗಿಗಳು ಔಷಧಿಗಳನ್ನು ಖರೀದಿಸಲು ಖಾಸಗಿ ಮೆಡಿಕಲ್ ಸ್ಟೋರ್ ಗಳಿಗೆ ಶಿಫಾರಸ್ಸು ಮಾಡುವುದನ್ನು ನಿಲ್ಲಿಸಬೇಕೆಂದು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಆಸ್ಪತ್ರೆಯಲ್ಲಿ ಕನಿಷ್ಠ ಮಟ್ಟದ ಸ್ವಚ್ಚತೆ, ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿ, ಪ್ಲಾಸ್ಟಿಕ್ ವಿಲೇವಾರಿ, ಶೌಚಾಲಯದ ವ್ಯವಸ್ಥೆ ಇಲ್ಲದಿರುವ ಬಗ್ಗೆ ತುರ್ತು ಕ್ರಮಕೈಗೊಳ್ಳಲು ಸಂಬಂಧಪಟ್ಟ ಸ್ಥಳೀಯ ಆಡಳಿತದ ಮುಖ್ಯಸ್ಥರು ಹಾಗೂ ವೈದ್ಯಾಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು. ಆರೋಗ್ಯ ಸೇವೆಗಳನ್ನು ಸಂಬಂಧಪಟ್ಟ ಸಕ್ಷಮ ಅಧಿಕಾರಿಗಳು ಮತ್ತು ದಾದಿಯರು ನೀಡಬೇಕು. ಬದಲಾಗಿ ಡಿ ದರ್ಜೆ ನೌಕರರು ಆರೋಗ್ಯ ಸೇವೆಗಳನ್ನು ನೀಡಬಾರದು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ವೆಂಕಟೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣಸ್ವಾಮಿ, ವೈದ್ಯರಾದ ಡಾ.ನವೀನ್, ವಕೀಲರಾದ ಮಂಜುನಾಥರೆಡ್ಡಿ, ಸೌಜನ್ಯಗಾಂಧಿ ಇದ್ದರು.