ಜನ್ಮದಿನದಂದು ಶತಕ ಬಾರಿಸಿದ ಭಾರತದ 3ನೇ, ವಿಶ್ವದ 6ನೇ ಬ್ಯಾಟರ್ ವಿರಾಟ್ ಕೊಹ್ಲಿ!
1 min readಹುಟ್ಟು ಹಬ್ಬ, ಜನ್ಮದಿನ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು. ಜನ್ಮ ವಾರ್ಷಿಕೋತ್ಸವವನ್ನು ವಿವಿಧ ರೀತಿಯಲ್ಲಿ ಆಚರಿಸಿಕೊಂಡು ಸಂಭ್ರಮಿಸುತ್ತಾರೆ. ಇದೇ ದಿನ ಮೈದಾನದಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಅಬ್ಬರಿಸಬೇಕು ಎಂಬ ಹಂಬಲ ಕ್ರಿಕೆಟಿಗರಿಗೂ ಇರುತ್ತದೆ. ಆದರೆ, ಬೆರಳೆಣಿಕೆ ಆಟಗಾರರು ಮಾತ್ರ ಬರ್ಥ್ ಡೇಯನ್ನು ಸ್ಮರಣೀಯರಾಗಿಸಿಕೊಂಡಿದ್ದಾರೆ.
ಭಾನುವಾರ, ನವೆಂಬರ್ 5ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಸಹ ತಮ್ಮ ಹುಟ್ಟುಹಬ್ಬದ ದಿನವೇ ಶತಕ ಬಾರಿಸಿ ಅಬ್ಬರಿಸಿದರು. ಹಾಗಿದ್ದರೆ ಕ್ರಿಕೆಟ್ ಅಂಗಳದಲ್ಲಿ ಎಷ್ಟು ಜನ ತಮ್ಮ ಜನ್ಮದಿನದಂದು ಆರ್ಭಟಿಸಿದ್ದಾರೆ ಎಂಬ ಬಗ್ಗೆ ವರದಿ ಇಲ್ಲಿದೆ.
ಭಾರತ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿಗೆ ನವೆಂಬರ್ 5 ಜನ್ಮದಿನದ ಸಂಭ್ರಮ. ಈ ಬಾರಿ ಅವರು ತಮ್ಮ 35ನೇ ಹುಟ್ಟುಹಬ್ಬವನ್ನು ಶತಕದೊಂದಿಗೆ ಗೆಲುವಿನ ಮೂಲಕ ಆಚರಿಸಿಕೊಂಡರು.
ನವೆಂಬರ್ 5ರಂದು ಭಾರತವು 2023ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕೆ ಇಳಿಯಿತು. ಕಳೆದ ಕೆಲವು ಪಂದ್ಯಗಳಲ್ಲಿ ಕಿಂಗ್ ಕೊಹ್ಲಿ ಶತಕದ ಅಂಚಿನಲ್ಲಿ ಎಡವಿದ್ದರು. ಭಾನುವಾರ ಅವರಿಗೆ ಶಕತ ಬಾರಿಸುವ ಅವಕಾಶ ಲಭಿಸಿತು. ಹುಟ್ಟುಹಬ್ಬದಂದು ಶತಕ ಸಿಡಿಸಿದ ವಿಶ್ವದ ಆರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ.
ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಅಕ್ಟೋಬರ್ 20ರಂದು ಜನಿಸಿದ್ದಾರೆ. ಇದೇ ವಿಶ್ವಕಪ್‌ನಲ್ಲಿ ತಮ್ಮ ಜನ್ಮದಿನದಂದು ಪಾಕಿಸ್ತಾನದ ವಿರುದ್ಧ ಶತಕ ಬಾರಿಸಿ ಮಿಚೆಲ್ ಮಾರ್ಷ್ ಸಂಭ್ರಮಿಸಿದರು. ಮಿಚೆಲ್ ಮಾರ್ಷ್ 121 ರನ್‌ಗಳ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದರು.
ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರ ಟಾಮ್ ಲಾಥಮ್ ಸಹ ಹುಟ್ಟು ಹಬ್ಬದ ದಿನದಂದೇ ಶತಕ ಬಾರಿಸಿ ಸಂಭ್ರಮಿಸಿದ್ದಾರೆ. ಟಾಮ್ ಲ್ಯಾಥಮ್ ಅವರ ಜನ್ಮದಿನವು ಏಪ್ರಿಲ್ 2 ಆಗಿದೆ. ಅವರು 2022ರಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಅಬ್ಬರದ ಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ ಟಾಮ್ ಲ್ಯಾಥಮ್ ಅಜೇಯ 140 ರನ್‌ಗಳ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದರು.
ಇದೇ ಪಟ್ಟಿಯಲ್ಲಿ ಇನ್ನೊಬ್ಬ ಕಿವೀಸ್ ಆಟಗಾರ ಸ್ಥಾನ ಪಡೆದಿದ್ದಾರೆ. ಅವರೇ ಸ್ಪೋಟಕ ಬ್ಯಾಟರ್ ರಾಸ್ ಟೇಲರ್. ರಾಸ್ ಟೇಲರ್ 2011ರಲ್ಲಿ ತಮ್ಮ ಜನ್ಮದಿನವಾದ ಮಾರ್ಚ್ 8ರಂದು ಪಾಕಿಸ್ತಾನದ ವಿರುದ್ಧ 131 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು.
ಶ್ರೀಲಂಕಾದ ಮಾಜಿ ಆರಂಭಿಕ ಬ್ಯಾಟರ್ ಮತ್ತು ದಿಗ್ಗಜ ಸನತ್ ಜಯಸೂರ್ಯ ಅವರು 2008ರಲ್ಲಿ ತಮ್ಮ ಜನ್ಮದಿನದಂದು ಬಾಂಗ್ಲಾದೇಶ ವಿರುದ್ಧ ಶತಕವನ್ನು ಸಿಡಿಸಿದ್ದರು. ಜೂನ್ 30ರಂದು ಸನತ್ ಜಯಸೂರ್ಯ ಅವರ ಹುಟ್ಟುಹಬ್ಬ ಆಚರಣೆಯ ದಿನದಂದೇ ಈ ಅಮೋಘ ಇನಿಂಗ್ಸ್ ಮೂಡಿ ಬಂದಿತ್ತು.
ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಜನ್ಮದಿನವಾದ ಏಪ್ರಿಲ್ 24ರಂದು 1998ರಲ್ಲಿ ಆಸ್ಟ್ರೇಲಿಯಾ ವಿರುದ್ಧ 134 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು.
ಇಂತಹದ್ದೇ ಸಾಧನೆಯನ್ನು ಸಚಿನ್ ಅವರ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳೆ ಸಹ ಮಾಡಿದ್ದಾರೆ. ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳೆ 1993 ಜನವರಿ 18ರ ತಮ್ಮ ಜನ್ಮದಿನದಂದು ಶ್ರೀಲಂಕಾ ವಿರುದ್ಧ ಶತಕ ಬಾರಿಸಿದ್ದರು.