2019ರ ಸೋಲಿಗೆ ಸೇಡು ತೀರಿಸಿಕೊಂಡ ಭಾರತ: ಕಿವೀಸ್ ವಿರುದ್ಧ ಗೆದ್ದು ಫೈನಲ್ಗೆ ಲಗ್ಗೆ ಇಟ್ಟ ರೋಹಿತ್ ಪಡೆ
1 min readವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ಬ್ಯಾಟರ್ಗಳ ಅಬ್ಬರ ಮತ್ತು ಮೊಹಮ್ಮದ್ ಶಮಿ (7/10) ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ಸೋಲಿನ ಕಹಿ ಉಂಡುವುದರೊಂದಿಗೆ ವಿಶ್ವಕಪ್ ಅಭಿಯಾನವನ್ನು ಮುಗಿಸಿತು.
2019ರ ವಿಶ್ವಕಪ್ ಸೆಮೀಸ್ನಲ್ಲಿ ಕಿವೀಸ್ ವಿರುದ್ಧ ಸೋತು ಮುಖಭಂಗ ಅನುಭವಿಸಿದ್ದ ಟೀಮ್ ಇಂಡಿಯಾ, ಅದೇ ತಂಡವನ್ನು ಮಣಿಸಿ ಸೇಡು ತೀರಿಸಿಕೊಳ್ಳುವುದರೊಂದಿಗೆ ಫೈನಲ್ಗೆ ಲಗ್ಗೆ ಇಟ್ಟಿದ್ದು, ಟ್ರೋಫಿಯನ್ನು ಎತ್ತಿಹಿಡಿಯಲು ಇನ್ನೂ ಒಂದೇ ಹೆಜ್ಜೆ ಬಾಕಿದೆ.
ಟೀಮ್ ಇಂಡಿಯಾ ನೀಡಿದ್ದ 397 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಕಿವೀಸ್ 48.5 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 327ರನ್ ಗಳಿಸುವ ಮೂಲಕ 70 ರನ್ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಡೆವನ್ ಕಾನ್ವೇ (13) ಮತ್ತು ರಚಿನ್ ರವೀಂದ್ರ (13)ಗೆ ಮೊಹಮ್ಮದ್ ಶಮಿ ಶಾಕ್ ನೀಡಿದರು. ಇಬ್ಬರು ಆರಂಭಿಕರು ಬಹುಬೇಗನೇ ಔಟಾಗುವ ಮೂಲಕ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಕೇವಲ 39 ರನ್ಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ನಾಯಕ ಕೇನ್ ವಿಲಿಯಮ್ಸನ್ ಮತ್ತು ಡರೈಲ್ ಮಿಚೆಲ್ ಬೂಸ್ಟರ್ ಡೋಸ್ ನೀಡಿದರು.
ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮವಾಗಿ ಬ್ಯಾಟ್ ಬೀಸಿದ ವಿಲಿಯಮ್ಸನ್ ಮತ್ತು ಮಿಚೆಲ್ 181 ರನ್ಗಳ ಜತೆಯಾಟವಾಡುವ ಮೂಲಕ ಗೆಲವುದನ್ನು ತಮ್ಮ ಕಡೆ ವಾಲಿಸಿಕೊಂಡರು. ಆದರೆ, ಈ ಜೋಡಿಗೂ ಮೊಹಮ್ಮದ್ ಶಮಿ ಮುಳ್ಳಾದರು. 73 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿ ತಾಳ್ಮೆಯ ಆಟವಾಡುತ್ತಿದ್ದ ವಿಲಿಯಮ್ಸನ್ ಅವರನ್ನು ಮೊಹಮ್ಮದ್ ಶಮಿ ಔಟ್ ಮಾಡಿದರು. ಆದರೆ, ಮಿಚೆಲ್ ಮಾತ್ರ ತಮ್ಮ ಬ್ಯಾಟಿಂಗ್ ಆರ್ಭಟವನ್ನು ಮುಂದುರಿಸಿದರು. ವಿಲಿಯಮ್ಸನ್ ಔಟ್ ಆದ ಬಳಿಕ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಟಾಮ್ ಲಾಥಮ್ (0) ಅವರನ್ನು ಶಮಿ, ಬಂದಷ್ಟೇ ವೇಗವಾಗಿ ಪೆವಲಿಯನ್ ಕಳುಹಿಸಿದರು.
ಲಾಥಮ್ ಔಟಾದ ಬಳಿಕ ಕ್ರೀಸ್ಗೆ ಆಗಮಿಸಿದ ಗ್ಲೆನ್ ಫಿಲಿಪ್ಸ್, ಡರೈಲ್ ಮಿಚೆಲ್ಗೆ ಸಾಥ್ ನೀಡಿದರು. ಮತ್ತೆ ಮಧ್ಯಮ ಕ್ರಮಾಂಕದಲ್ಲಿ ಈ ಜೋಡಿ 75 ರನ್ಗಳ ಜತೆಯಾಟ ಆಡಿ ಗೆಲುವನ್ನು ಮತ್ತೆ ತಮ್ಮತ್ತ ವಾಲಿಸಿಕೊಂಡಿದ್ದರು. ಆದರೆ, ಈ ಸಂದರ್ಭದಲ್ಲಿ ಬೌಲಿಂಗ್ಗೆ ಇಳಿದ ಜಸ್ಪ್ರಿತ್ ಬೂಮ್ರಾ ಕೇವಲ 33 ಎಸೆತಗಳಲ್ಲಿ 41 ರನ್ ಗಳಿಸಿದ್ದ ಗ್ಲೇನ್ ಫಿಲಿಪ್ಸ್ ವಿಕೆಟ್ ಉರುಳಿಸುವ ಮೂಲಕ ಜತೆಯಾಟವನ್ನು ಮುರಿದರು. ಇದರ ಬೆನ್ನಲ್ಲೇ ಮಾರ್ಕ್ ಛಪ್ಮನ್ಗೆ (2) ಕುಲದೀಪ್ ಯಾದವ್ ಪೆವಿಲಿಯನ್ ದಾರಿ ತೋರಿದರು.
ಡರೈಲ್ಗೆ ಆಟಕ್ಕೆ ಶಮಿ ಬ್ರೇಕ್
ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್ಗೆ ಇಳಿದು ಭಾರತದ ಬೌಲರ್ಗಳನ್ನು ಕಾಡಿದ ಡರೈಲ್ ಮಿಚೆಲ್ ಭಾರತ ಪಾಲಿಗೆ ಸವಾಲಾಗಿ ಪರಿಣಮಿಸಿದರು. ಎರಡು ಬಾರಿ ಗೆಲುವನ್ನು ತಮ್ಮ ಕಡೆ ವಾಲಿಸಿಕೊಂಡರು. ಕೇವಲ 119 ಎಸೆತಗಳಲ್ಲಿ 9 ಬೌಂಡರಿ ಹಾಗೂ 7 ಸಿಕ್ಸರ್ನೊಂದಿಗೆ 134 ರನ್ ಗಳಿಸಿದ್ದ ಡರೈಲ್ ಮಿಚೆಲ್ ಓಟಕ್ಕೆ ಮೊಹಮ್ಮದ್ ಶಮಿ ಬ್ರೇಕ್ ಹಾಕಿದರು. ಅಲ್ಲಿಗೆ ಭಾರತದ ಗೆಲುವು ನಿಶ್ಚಯವಾಯಿತು.
ಉಳಿದಂತೆ ಮಿಚೆಲ್ ಸ್ಯಾಂಟ್ನರ್ (9), ಟಿಮ್ ಸೌಥಿ (9), ಲುಕಿ ಫರ್ಗ್ಯೂಸನ್ (6) ರನ್ ಗಳಿಸಿ ಔಟಾದರೆ, ಟ್ರೆಂಟ್ ಬೌಲ್ಟ್ (2) ರನ್ ಗಳಿಸಿ ಅಜೇಯರಾಗಿ ಉಳಿದರು.
ಟೀಮ್ ಇಂಡಿಯಾ ಪರ ಮಾರಕ ಬೌಲಿಂಗ್ ದಾಳಿ ಮಾಡಿದ ಮೊಹಮ್ಮದ್ ಶಮಿ 7 ವಿಕೆಟ್ಗಳನ್ನು ಕಬಳಿಸುವ ಮೂಲಕ ನ್ಯೂಜಿಲೆಂಡ್ ಪಾಲಿಗೆ ಅಕ್ಷರಶಃ ಮುಳ್ಳಾದರು. ಉಳಿದಂತೆ ಜಸ್ಪ್ರಿತ್ ಬೂಮ್ರಾ, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.
ಟೀಮ್ ಇಂಡಿಯಾದಿಂದ ಅದ್ಭುತ ಇನಿಂಗ್ಸ್
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 397 ರನ್ ಕಲೆಹಾಕಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮ ಮತ್ತು ಶುಭಮಾನ್ ಗಿಲ್ 71 ರನ್ಗಳ ಉತ್ತಮ ಆರಂಭ ಒದಗಿಸಿಕೊಟ್ಟರು. ಕೇವಲ 29 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿ ಬಿರುಸಿನ ಆಟವಾಡುತ್ತಾ ಕಿವೀಸ್ ಬೌಲರ್ಗಳಲ್ಲಿ ನಡುಕು ಹುಟ್ಟಿಸಿದ ಹಿಟ್ ಮ್ಯಾನ್ ರೋಹಿತ್ (47) ಅರ್ಧಶತಕಕ್ಕೆ ಇನ್ನೂ 3 ರನ್ ಬಾಕಿ ಇರುವಾಗ ಟಿಮ್ ಸೌಥಿ ಬೌಲಿಂಗ್ನಲ್ಲಿ ವಿಲಿಯಮ್ಶನ್ಗೆ ಕ್ಯಾಚಿತ್ತು ನಿರ್ಗಮಿಸಿದರು.
ಬಳಿಕ ಶುಭಮಾನ್ ಗಿಲ್ ಜತೆಯಾದ ವಿರಾಟ್ ಕೊಹ್ಲಿ ತಾಳ್ಮೆಯ ಆಟದೊಂದಿಗೆ ಇನಿಂಗ್ಸ್ ಕಟ್ಟಿದರು. ರೋಹಿತ್ಗಿಂತ ನಾನೇನು ಕಮ್ಮಿ ಇಲ್ಲ ಎನ್ನುವಂತೆ ಬ್ಯಾಟ್ ಬೀಸುತ್ತಿದ್ದ ಗಿಲ್ 65 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ ನೆರವಿನೊಂದಿಗೆ ನಿರ್ಣಾಯಕ ಪಂದ್ಯದಲ್ಲಿ 79 ರನ್ ಗಳಿಸಿ ಭರ್ಜರಿ ಆಟವಾಡುತ್ತಿದ್ದಾಗ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಹಠಾತ್ ಪೆವಿಲಿಯನ್‌ಗೆ ಮರಳಿದರು. ಬಳಿಕ ಕೊಹ್ಲಿ ಜತೆಗೂಡಿದ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ನಲ್ಲಿ ಉತ್ತಮ ಸಾಥ್ ನೀಡಿದರು.
ವಿರಾಟ ರೂಪ
ತಾಳ್ಮೆಯ ಆಟದೊಂದಿಗೆ ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ವೃತ್ತಿಜೀವನದ ಅಮೋಘ ಇನಿಂಗ್ಸ್ ಆಡಿದ ಚೇಸ್ ಮಾಸ್ಟರ್, ಸ್ಟಾರ್ ಕ್ರಿಕೆಟಿಗ ಮತ್ತು ಕ್ರಿಕೆಟ್ ಲೋಕದ ಕಿಂಗ್ ಕೊಹ್ಲಿ 117 ರನ್ಗಳನ್ನು ಸಿಡಿಸಿದರು. ಇತ್ತೀಚೆಗೆ ಅಂದರೆ, ನ.5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿಯೂ ಅಬ್ಬರಿಸಿದ್ದ ಕೊಹ್ಲಿ, 35ನೇ ವರ್ಷದ ಹುಟ್ಟುಹಬ್ಬದ ದಿನದಂದೇ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಯನ್ನ ಸರಿಗಟ್ಟಿದ್ದರು ಎಂಬುದನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಲೇಬೇಕು.
ಶ್ರೇಯಸ್ ಸಿಡಿಲಬ್ಬರದ ಬ್ಯಾಟಿಂಗ್
ನ.12ರಂದು ನೆದರ್ಲೆಂಡ್ಸ್ ವಿರುದ್ಧ ನಡೆದ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಅಬ್ಬರಿಸಿದ್ದ ಶ್ರೇಯಸ್ ಅಯ್ಯರ್ 128 ರನ್ ಗಳಿಸಿದ್ದರು. ಇಂದಿನ ನಿರ್ಣಾಯಕ ಪಂದ್ಯದಲ್ಲಿಯೂ ಶತಕ ಸಿಡಿಸಿ ಭಾರತಕ್ಕಿದ್ದ ಅತಿದೊಡ್ಡ ಚಿಂತೆಯಾದ ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್ ಕೊರತೆಯನ್ನು ಹೋಗಲಾಡಿಸಿದರು. ಕೇವಲ 70 ಎಸೆತಗಳನ್ನು ಎದುರಿಸಿದ ಅಯ್ಯರ್ 4 ಬೌಂಡರಿ, 8 ಸಿಕ್ಸರ್ಗಳ ನೆರವಿನಿಂದ 105 ರನ್ ಕಲೆಹಾಕಿದರು. ಈ ಮೂಲಕ ಪ್ರಸಕ್ತ ವಿಶ್ವಕಪ್ನಲ್ಲಿ ಎರಡನೇ ಶತಕವನ್ನು ಸಂಭ್ರಮಿಸಿದರು.
ಉಳಿದಂತೆ ಸೂರ್ಯಕುಮಾರ್ ಯಾದವ್ 1 ರನ್ ಗಳಿಸಿ ಔಟಾದರೆ, ಕೊನೆಯಲ್ಲಿ ಅಬ್ಬರಿಸಿದ ಕನ್ನಡಿಗ ಕೆ.ಎಲ್ ರಾಹುಲ್ 20 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ನೆರವಿನಿಂದ 39 ರನ್ ಗಳಿಸಿ ಅಜೇಯರಾಗಿ ಉಳಿದರು.
ನ್ಯೂಜಿಲೆಂಡ್ ಪರ ಟಿಮ್ ಸೌಥಿ 2 ವಿಕೆಟ್ ಪಡೆದರೆ, ಟ್ರೆಂಟ್ ಬೋಲ್ಸ್ 1 ವಿಕೆಟ್ಗೆ ತೃಪ್ತಿಪಟ್ಟುಕೊಂಡರು. ಆದರೂ ಯಾವೊಬ್ಬ ಬೌಲರ್ಗಳು ಕೂಡ ರನ್ ಎಂಬ ಟೀಮ್ ಇಂಡಿಯಾ ಅಶ್ವಮೇಧವನ್ನು ತಡೆಯಲು ಸಾಧ್ಯವಾಗಲಿಲ್ಲ. ಪಂದ್ಯದ ಮೊದಲ ಓವರ್ನಿಂದಲೇ ಕಿವೀಸ್ ಬೌಲರ್ಗಳನ್ನು ಮನಸೋ ಇಚ್ಛೆ ಬೆಂಡೆತ್ತಿದ ಭಾರತ 397 ರನ್ಗಳ ಬೃಹತ್ ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಗುರಿ ಬೆನ್ನತ್ತಲಾಗದೇ ಟೀಮ್ ಇಂಡಿಯಾ ಎದುರು ಕಿವೀಸ್ ಸೋಲೊಪ್ಪಿಕೊಂಡಿದ್ದು, ವಿಶ್ವಕಪ್ ಪ್ರಯಾಣವನ್ನು ಮುಗಿಸಿದೆ. ಅಮೋಘ ಗೆಲುವು ದಾಖಲಿಸಿ ಭಾರತ ಫೈನಲ್ಗೆ ಲಗ್ಗೆ ಇಟ್ಟಿದೆ. ನಾಳೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಯಾರು ಗೆಲುವು ಸಾಧಿಸುತ್ತಾರೋ ಅವರು ಭಾರತದ ವಿರುದ್ಧ ಫೈನಲ್ಲ್ಲಿ ಟ್ರೋಫಿಗಾಗಿ ಕಾದಾಡಲಿದ್ದಾರೆ.