ಚಿಕ್ಕಬಳ್ಳಾಪುರದ ಮೇಲೆ ಫಂಗಲ್ ಚಂಡಮಾರುತದ ಪ್ರಭಾವ
1 min readಚಿಕ್ಕಬಳ್ಳಾಪುರದ ಮೇಲೆ ಫಂಗಲ್ ಚಂಡಮಾರುತದ ಪ್ರಭಾವ
ಮನೆಯಿಂದ ಹೊರ ಬರಲಾರದ ಸ್ಥಿತಿಗೆ ತಲುಪಿದ ಹವಾಮಾನ
ರಸ್ತೆಗಿಳಿಯದ ವಾಹನಗಳು, ರೈತರಿಗೂ ತಪ್ಪದ ಸಂಕಷ್ಟ
ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಜಿಲ್ಲಾಧಿಕಾರಿ
ಫಂಗಲ್ ಚಂಡಮಾರುತದ ಪರಿಣಾಮ ಚಿಕ್ಕಬಳ್ಳಾಪುರ ಜಿಲ್ಲೆಯ ಮೇಲೆ ತೀವ್ರವಾಗಿಯೇ ಬೀರಿದೆ. ಕಳೆದ ನಾಲ್ಕು ದಿನಗಳಿಂದಲೂ ಮೋಡ ಕವಿದ ವಾತಾವರಣವಿದ್ದು, ಎರಡು ದಿನಗಳಿಂದ ಜಡಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಇಡೀ ವಾತಾವರಣ ತಂಪಾಗಿದ್ದು, ಮನೆಯಿಂದ ಹೊರ ಬರಲು ಚಳಿಗೆ ಹೆದರುವ ಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಯಲುಸೀಮೆ ಪ್ರದೇಶದಲ್ಲಿರುವ ಕಾರಣ ಇಲ್ಲಿ ಚಳಿಗಿಂತ ಸೆಖೆಯೇ ಹೆಚ್ಚು ಭೀಕರ. ವರ್ಷದಲ್ಲಿ 10 ತಿಂಗಳ ಕಾಲ ಸೆಖೆ ಕಾಡಿದರೆ ಕೇವಲ ಎರಡು ತಿಂಗಳು ಮಾತ್ರ ಚಳಿ ಇಲ್ಲವೇ ಮಳೆ ಕಾಡುತ್ತದೆ. ಕಳೆದ ಹಲವು ವರ್ಷಗಳಿಂದ ಸತತ ಬರ ಕಾಡುತತಿರುವ ಪರಿಣಾಮ ಎರಡು ತಿಂಗಳ ಚಳಿಯೂ ಕಾಣದಂತಾಗಿ, ಮೋಡ, ಮಳೆ ಮತ್ತು ಚಳಿ ಕಾಣಲು ಜಿಲ್ಲೆಯಲ್ಲಿ ಸಾಧ್ಯವಿಲ್ಲ ಎಂಬ ಸ್ಥಿತಿ ತಂದೊಡ್ಡಿತ್ತು. ಆದರೆ ಕಳೆದ ನಾಲ್ಕು ದಿನಗಳಿಂದ ಈ ಮಾತು ಸುಳ್ಳಾಗಿಸುವಲ್ಲಿ ಫಂಗಲ್ ಚಂಡಮಾರುತ ಯಶಸ್ವಿಯಾಗಿದೆ.
ತಮಿಳುನಾಡು, ಕೇರಳ ಮಹಾರಾಷ್ಟçಗಳಲ್ಲಿ ಫಂಗಲ್ ಚಂಡಮಾರುತ ತೀವ್ರ ಸ್ವರೂಪ ಪಡೆದಿದ್ದು, ಇದರ ಪ್ರಭಾವ ಅಲ್ಪ ಪ್ರಮಾಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮೇಲೆ ಬೀರಿದ್ದು, ಚಂಡಮಾರುತದ ಹೊಡೆತಕ್ಕೆ ಜನ ಗಡ ಗಡ ನಡುಗುವಂತಾಗಿದೆ. ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಜನರು ಹೊರ ಬರುವುದೇ ಕಡಿಮೆಯಾಗಿದ್ದು, ಅನಿವಾರ್ಯ ಕೆಲಸಗಳಿಂದ ಹೊರ ಬರಲೇಬೇಕಾದವರು ಛತ್ರಿ ಹಿಡಿದು ಹೊರ ಬರುತ್ತಿದ್ದಾರೆ. ಇನ್ನು ಬೈಕ್ ಸವಾರರಂತೂ ರಸ್ತೆಗೆ ಇಳಿಯದ ಸ್ಥಿತಿ ಕಳೆದ ಎರಡು ದಿನಗಳಿಂದ ನಿರ್ಮಾಣವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಕಳೆದ ೪ ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಸಾರ್ವಜನಿಕರು ತತ್ತರಿಸಿಹೋಗಿದ್ದಾರೆ. ಮಳೆಯಲ್ಲಿ ನೆನೆದು ಚಲಿಸುತ್ತಿರುವ ವಾಹನ ಸವಾರರು, ಇನ್ನು ಕೆಲವರು ಛತ್ರಿ ಹಿಡಿದು ಪ್ರಯಾಣ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಮಿನಿ ಮಲೆನಾಡಿನಂತೆ ವಾತಾವರಣ ನಿರ್ಮಾಣವಾಗಿದ್ದು, ಈ ಜಿಟಿ ಜಿಟಿ ಮಳೆಯಿಂದ ರಸ್ತೆಗಳಲ್ಲಿ ವಾಹನ ಸಂಚಾರ ತೀವ್ರ ಕಡಿಮೆಯಾಗಿದೆ. ಅಲ್ಲದೆ ವ್ಯಾಪಾರ ವಹಿವಾಟು ಕೂಡಾ ತೀರಾ ಕಡಿಮೆಯಾಗಿದ್ದು, ಹೂವು ಸೇರಿದಂತೆ ತರಕಾರಿ ಬೆಳೆದಿರುವ ರೈತರು ಮಾರುಕಟ್ಟೆಗೆ ಬರಲೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಚಂಡಮಾರುತದ ಪರಿಣಾಮ ಇನ್ನೂ ಎರಡು ದಿನಗಳು ಮುಂದುವರಿಯಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಪ್ರಕಟಿಸಿದ್ದು, ಅತಿಯಾದ ಶೀತದಿಂದ ಮಕ್ಕಳು, ವೃದ್ಧರು, ಬಾಣಂತಿಯರು ರಕ್ಷಣೆ ಪಡೆಯುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಅಲ್ಲದೆ ಮಕ್ಕಳಿಗೆ ಅತಿಯಾದ ಶೀತದಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.
ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಭಾನುವಾರ ಸಂಜೆಯೇ ಆದೇಶ ಹೊರಡಿಸಿದ್ದು, ಜಿಲ್ಲೆಯಲ್ಲಿ ಫಂಗಲ್ ಚಂಡಮಾರುತದ ಪರಿಣಾಮ ತೀವ್ರವಾಗಿರುವ ಕಾರಣ ಮಕ್ಕಳು, ವೃದ್ಧರು ಆದಷ್ಟು ಮನೆಯಿಂದ ಹೊರಹೋಗದಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಹೊರಹೋಗಲೇಬಹೇಕಾದಲ್ಲಿ ಮಂಕಿ ಕ್ಯಾಪ್, ಸ್ಪೆಟರ್ ಧರಿಸಿ ಸಂಚರಿಸುವ0ತೆ ಅವರು ಕೋರಿದ್ದಾರೆ. ಇನ್ನು ಮಕ್ಕಳಿಗೆ ಅತಿಯಾದ ಶೀತದಿಂದ ಎದುರಾಗಬಹುದಾದ ಆರೋಗ್ಯದ ಪರಿಣಾಮಗಳನ್ನು ತಡೆಯಲು ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಸಲಾಗಿದ್ದು, ಈ ರಜೆಯನ್ನು ಮುಂದಿನ ಕರ್ತವ್ಯದ ದಿನಗಳಲ್ಲಿ ಸರಿದೂಗಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ.
ಒಟ್ಟಿನಲ್ಲಿ ಫಂಗಲ್ ಚಂಡಮಾರುತದ ಪರಿಣಾಮ ಜಿಲ್ಲೆಯ ಮೇಲೆ ತೀವ್ರವಾಗಿಯೇ ಬೀರಿದ್ದು, ಇದರಿಂದ ರೈತರು ಮಾತ್ರವಲ್ಲದೆ ವ್ಯಾಪಾರಿಗಳು ಚಟುವಟಿಕೆಗಳೂ ಸ್ಥಗಿತಗೊಳ್ಳುವಂತಾಗಿದೆ. ಇನ್ನು ವಾರದ ಕೊನೆಯಲ್ಲಿಯೇ ಚಂಡಮಾರುತದ ಪರಿಣಾಮ ತೀವ್ರವಾದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ಕೇಂದ್ರಗಳ ಮೇಲೂ ಇದರ ಪರಿಣಾಮ ಬೀರಿದೆ. ನೆನ್ನೆ ಭಾನುವಾರವಾದರೂ ನಂದಿ ಗಿರಿಧಾಮ, ಈಶ ದೇವಾಲಯ ಸೇರಿದಂತೆ ಇಥರೆ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ತೀವ್ರ ಕುಂಟಿತವಾಗಿದೆ.