ಕೂಡಲೇ ತನಿಖೆ ನಡೆಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ
1 min read![](https://i0.wp.com/ctvnewskannada.com/wp-content/uploads/2024/11/1-9.jpg?fit=1024%2C516&ssl=1)
ಮಾಡಿದ ಎರಡೇ ತಿಂಗಳಿಗೆ ಕಿತ್ತು ಬಂದ ಮೋರಿ ಕಾಮಗಾರಿ
ನಗರಸಭೆಯಿಂದ ನಡೆಯುತ್ತಿರುವ ಕಾಮಗಾರಿಗಳು ಕಳಪೆ ಆರೋಪ
ಕೂಡಲೇ ತನಿಖೆ ನಡೆಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ
ಕಳಪೆ ಕಾಮಗಾರಿಗೆ ಬಲ್ ತಡೆ ಹಿಡಿಯಲು ಒತ್ತಾಯ
ಚಿಕ್ಕಬಳ್ಳಾಪುರ ನಗರಸಭೆ ಈ ಹಿಂದೆ ಹಲವು ವಿವಾದಗಳಿಗೆ ಕಾರಣವಾಗಿತ್ತು. ಅದಕ್ಕೆ ಕಾರಣ ಆಡಳಿತ ಮಂಡಳಿ ಇಲ್ಲದೆ ಅಧಿಕಾರಿಗಳೇ ಆಡಳಿತಾಧಿಕಾರಿಯಾಗಿದ್ದರು. ಅದೇ ಸಮಯದಲ್ಲಿ ನಡೆದಿರೋ ಕಾಮಗಾರಿಯೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ಕಾಮಗಾರಿ ಮಾಡಿ ಎರಡು ತಿಂಗಳು ಕಳೆಯುವುದಕ್ಕೂ ಮೊದಲೇ ಕಿತ್ತು ಬಂದಿದ್ದು, ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.
ಹೌದು, ಸರ್ಕಾರಿ ಕಾಮಗಾರಿಗಳೆಂದರೆ ಕಳಪೆ ನಡೆಯೋದು ಸಾಮಾನ್ಯ ಎಂಬ ಪರಿಸ್ಥಿತಿ ಪ್ರಸ್ತುತ ಎದುರಾಗಿದೆ. ಇನ್ನು ನಗರಸಭೆ ಕಾಮಗಾರಿಗಳಂತೂ ಅವುಗಳಿಗೆ ಗುಣವೂ ಇಲ್ಲ, ಮಟ್ಟವೂ ಇಲ್ಲ ಎಂಬ0ತಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಚಿಕ್ಕಬಳ್ಳಾಪುರ ನಗರದ ೧೧ನೇ ವಾರ್ಡಿನ ಸಿಸಿ ವೃತ್ತದಲ್ಲಿ ಮಾಡಿರುವ ಮೋರಿ ಕಾಮಗಾರಿ. ಇದು ಮೊದಲೇ ತಗ್ಗು ಪ್ರದೇಶ, ಇಲ್ಲಿಗೆ ಬರುವ ಚರಂಡಿ ನೀರು ಮುಂದೆ ಸಾಗದೆ ನಿಂತಲ್ಲೇ ನಿಂತು ಜನರಿಗೆ ತೊಂದರೆಯಾಗಿತ್ತು. ಇದನ್ನು ದುರಸ್ತಿ ಮಾಡಲು ಬಂದ ಗುತ್ತಿಗೆದಾರ ಮತ್ತಷ್ಟು ಅವಾಂತರ ಸೃಷ್ಟಿ ಮಾಡಿದ್ದಾನೆ ಎಂಬುದು ಈಗ ಎದುರಾಗಿರೋ ಆರೋಪ.
ಸಿಸಿ ವೃತ್ತದಲ್ಲಿ ಕಳೆದ ಎರಡು ತಿಂಗಳ ಹಿಂದೆ ಚರಂಡಿ ತ್ಯಾಜ್ಯ ನೀರು ಸರಾಗವಾಗಿ ಹರಿದು ಹೋಗುವ ಉದ್ಧೇಶದಿಂದ ಮಾಡಿರುವ ಮೋರಿ ಕಾಮಗಾರಿ ಎರಡು ತಿಂಗಳು ಕಳೆಯುವುದಕ್ಕೂ ಮೊದಲೇ ಕಿತ್ತು ಬಂದಿದೆ. ಸಾಲದೆಂಬ0ತೆ ಚರಂಡಿ ನೀರು ಹರಿಯುವ ಬದಲು ಮೊದಲಿಗಿಂತಲೂ ಹೆಚ್ಚು ಮೊಂಡುಗೆ ಬಿದ್ದಂತೆ ನಿಂತಲ್ಲೇ ನಂತು ದುರ್ನಾತ ಬಾರುತ್ತಿದೆ. ಇದರಿಂದ ಸುತ್ತಮುತ್ತಲ ನಿವಾಸಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಕೂಡಲೇ ಈ ಮೋರಿ ಕಾಮಗಾರಿ ಮಾಡಿದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹಿಸಿದ್ದಾರೆ.
ಮೊದಲಿದ್ದ ಸಮಸ್ಯೆ ನೂತನ ಕಾಮಗಾರಿ ನಂತರ ಮತ್ತಷ್ಟು ಬಿಗಡಾಯಿಸಿದೆ. ಅಲ್ಲದೆ ಬಿಲ್ ಪಡೆಯುವುದಕ್ಕೆ ಮಾತ್ರ ಕಾಮಗಾರಿ ನಡೆಸಿದಂತಿದ್ದು, ಸಾರ್ವಜನಿಕರಿಗೆ ಅನುಕೂಲಕ್ಕಿಂತ, ತೊಂದರೆಯೇ ಹೆಚ್ಚಾಗಿದೆ. ಪರಿಸ್ಥಿತಿ ಹೀಗಿದ್ದರೂ ಕಾಮಗಾರಿ ಪರಿಶೀಲನೆ ಮಾಡದೆ ಬಿಲ್ ಹೇಗೆ ಮಾಡಿದರು ಎಂಬ ಪ್ರಶ್ನೆ ಎದುರಾಗಿದ್ದು, ಕಾಮಗಾರಿಯನ್ನು ಮರು ಪರಿಶೀಲನೆ ನಡೆಸಿ, ಕೂಡಲೇ ಗುತ್ತಿಗೆದಾರನ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳುವ ಜೊತೆಗೆ ಆತನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಸ್ಥಳೀಯ ನಿವಾಸಿ ವಿಜಯ್ ಈ ಕಾಮಗಾರಿಯ ಬಗ್ಗೆ ಮಾತನಾಡಿ, ೧೧ನೇ ವಾರ್ಡಿನಲ್ಲಿ ಕಳೆದ ಎರಡು ತಿಂಗಳ ಹಿಂದೆ ಮೋರಿ ದುರಸ್ತಿಯಾಗಿದೆ. ಈ ಮೋರಿ ಕಾಮಗಾರಿ ನಡೆಸಲು ಉತ್ತಮವಾಗಿದ್ದ ರಸ್ತೆ ಕಿತ್ತು ಹಾಳು ಮಾಡಿದ್ದಾರೆ, ಈಗ ಚರಂಡಿಯಲ್ಲಿ ಸರಾಗವಾಗಿ ನೀರು ಹರಿಯುತ್ತಿಲ್ಲ, ಕಾಮಗಾರಿ ನಡೆಸಿದ ನಂತರ ಅಲ್ಲಿ ಉಳಿದ ಕಲ್ಲು, ಮಣ್ಣು ತ್ಯಾಜ್ಯವನ್ನು ತೆರುವು ಮಾಡಬೇಕು ಎಂಬ ಕನಿಷ್ಠ ಜ್ಞಾನ ಗುತ್ತಿಗೆದಾರನಿಗಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದ ಕಾರಣ ಪಕ್ಕದ ಅಂಗಡಿಯವರೇ ತ್ಯಾಜ್ಯವನ್ನು ಟ್ರಾಕ್ಟರ್ ಮೂಲಕ ತೆರುವು ಮಾಡಿದ್ದಾರೆ. ಇದರ ಜೊತೆಗೆ ಇವರು ನಡೆಸಿದ ಕಾಮಗಾರಿ ಎರಡೇ ತಿಂಗಳಿಗೆ ಕಿತ್ತು ಬಂದಿದ್ದು, ಕೂಡಲೇ ಈ ಕುರಿತು ಪರಿಶೀಲನೆ ನಡೆಸಿ, ಗುತ್ತಿಗೆದಾರನ ವಿರುದ್ಧ ಕಾನೂನು ಕ್ರ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಮತ್ತೊಬ್ಬ ನಿವಾಸಿ ವೆಂಕಟ್ ಮಾತನಾಡಿ, ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆಯಿಂದ ಕೂಡಿವೆ, ಕಳಪೆ ಕಾಮಗಾರಿಗಳು ಮಾಡಿದರೂ ಬಿಲ್ ಮಾಡಲಾಗಿದ್ದು, ಕೂಡಲೇ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಆಗಬೇಕಿದೆ. ನಗರದ ಕಂದವಾರ ಬಾಗಲಿನ ಸಿಸಿ ವೃತ್ತದಲ್ಲಿ ಕಳಪೆ ಕಾಮಗಾರಿ ನಡೆಸಿ, ಮೋರಿ ನಿರ್ಮಾಣ ಮಾಡಿದ್ದಾರೆ. ಇಂತಹ ಕಳಪೆ ಕಾಮಗಾರಿಯಿಂದ ಸಾರ್ವಜನಿಕರಿಗೆ ತೀವ್ರ ಕಿರುಕುಳ ಆಗುತ್ತಿದೆ ಎಂದು ಆರೋಪಿಸಿದರು.
ಇಂತಹ ಕಳಪೆ ಕಾಮಗಾರಿಗೆ ಬಿಲ್ ಪಾವತಿ ಮಾಡಿದ್ದಾದರೂ ಹೇಗೆ ಎಂದು ಪ್ರಶ್ನಿಸಿರುವ ಅವರು, ಈ ಕಳಪೆ ಕಾಮಗಾರಿ ಕುರಿತು ಶಾಸಕರ ಗಮನಕ್ಕೂ ತರಲಾಗುವುದು, ನಗರಸಭೆ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಕುರಿತು ಗಣಮಟ್ಟ ಪರಿಶೀಲನೆ ಮಾಡಿ, ನಂತರ ಬಿಲ್ ಪಾವತಿಸಬೇಕು, ಸಿಸಿ ವೃತ್ತದಲ್ಲಿ ನಡೆದಿರುವ ಕಾಮಗಾರಿ ಮರು ಪರಿಶೀಲನೆ ನಡೆಸಿ, ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.