ಕೂಸು ಹುಟ್ಟೋಕೆ ಮುನ್ನವೇ ಕುಲಾವಿ ಹೊಲೆಸಿದ್ರು ಅನ್ನೋ ಗಾದೆ ಮಾತಿದೆ. ಈ ಮಾತು ಇಂಡಿಯಾ ಮೈತ್ರಿ ಕೂಟಕ್ಕೆ ಸೂಕ್ತವಾಗಿ ಅನ್ವಯ ಆಗುವಂತೆ ಕಂಡು ಬರ್ತಿದೆ. ಏಕೆಂದರೆ, ಲೋಕಸಭಾ ಚುನಾವಣೆಗೆ ಇನ್ನೂ 6 ತಿಂಗಳು ಇರುವಾಗಲೇ ಇಂಡಿಯಾ ಮೈತ್ರಿ ಕೂಟದ ಅಂಗ ಪಕ್ಷಗಳಾದ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ನಡುವೆ ಪೋಸ್ಟರ್ ವಾರ್ ಶುರುವಾಗಿದೆ. ಭವಿಷ್ಯದ ಪ್ರಧಾನಿ, ಮುಂದಿನ ಪ್ರಧಾನಿ ಎಂಬ ಪೋಸ್ಟರ್‌ಗಳನ್ನ ಎರಡೂ ಪಕ್ಷಗಳ ನಾಯಕರು ಹಾಕಿಕೊಳ್ತಿದ್ದಾರೆ.
ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳ ಒಕ್ಕೂಟ ಇಂಡಿಯಾ ಮೈತ್ರಿ ಕೂಟದಲ್ಲಿ ಚುನಾವಣೆಗೆ 6 ತಿಂಗಳ ಮುನ್ನವೇ ಪ್ರಧಾನಿ ಪಟ್ಟದ ಫೈಟ್ ಶುರುವಾಗಿದೆ. ಇಂಡಿಯಾ ಮೈತ್ರಿ ಕೂಟದ ಅಂಗ ಪಕ್ಷವಾದ ಸಮಾಜವಾದಿ ಪಕ್ಷದ ಕಚೇರಿ ಎದುರು ಅಖಿಲೇಶ್ ಸಿಂಗ್ ಯಾದವ್ ಅವರನ್ನು ‘ಭವಿಷ್ಯದ ಪ್ರಧಾನ ಮಂತ್ರಿ’ ಎಂದು ಬಿಂಬಿಸುವ ಪೋಸ್ಟರ್ ಒಂದು ಉತ್ತರ ಪ್ರದೇಶದ ಲಖನೌನಲ್ಲಿ ಕಂಡು ಬಂತು. ಈ ಪೋಸ್ಟರ್ ವಿವಾದಕ್ಕೆ ಕಾರಣದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಪಕ್ಷ ಕೂಡಾ ತಿರುಗೇಟು ಕೊಟ್ಟಿದೆ! ಕಾಂಗ್ರೆಸ್ ಪಕ್ಷದ ಲಖನೌ ಕಚೆರಿ ಎದುರು ರಾಹುಲ್ ಗಾಂಧಿ ಅವರನ್ನು ‘2024ರ ಪ್ರಧಾನ ಮಂತ್ರಿ’ ಎಂದು ಬಿಂಬಿಸುವ ಪೋಸ್ಟರ್ ರಾರಾಜಿಸುತ್ತಿದೆ.
ಜೊತೆಯಲ್ಲೇ ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಅವರನ್ನು 2027ರ ಉತ್ತರ ಪ್ರದೇಶ ಮುಖ್ಯಮಂತ್ರಿ ಎಂದೂ ಕಾಂಗ್ರೆಸ್ ಪಕ್ಷ ತನ್ನ ಬ್ಯಾನರ್‌ನಲ್ಲಿ ಬಿಂಬಿಸಿದೆ. ಇದೀಗ ಕಾಂಗ್ರೆಸ್ ಪಕ್ಷದ ತಿರುಗೇಟಿಗೆ ಸಮಾಜವಾದಿ ಪಕ್ಷ ಕೂಡಾ ಕೆಂಗಣ್ಣು ಬೀರಿದೆ!