ಭಾರತದಿಂದಲೂ ಇಸ್ರೇಲ್ ರೀತಿ ಸ್ವದೇಶಿ ‘ಐರನ್ ಡೋಮ್’: ಡಿಆರ್‌ಡಿಒದಿಂದ 5 ವರ್ಷಗಳಲ್ಲಿ ನಿರ್ಮಾಣ
1 min readನವದೆಹಲಿ: ಹಮಾಸ್ ಉಗ್ರರು ಸಿಡಿಸಿದ ಕ್ಷಿಪಣಿಗಳು ತನ್ನ ನೆಲದಲ್ಲಿ ಬೀಳುವ ಮೊದಲೇ ಹೊಡೆದುರುಳಿಸುವ ಮೂಲಕ ವಿಶ್ವದ ಗಮನ ಸೆಳೆದಿರುವ ಹಾಗೂ ಇಸ್ರೇಲಿ ಜನರ ಜೀವ ಕಾಪಾಡಿರುವ ‘ಐರನ್ ಡೋಮ್’ ಶೀಘ್ರದಲ್ಲೇ ಭಾರತದಲ್ಲೂ ತಯಾರಾಗಲಿದೆ. ಅಕ್ಕಪಕ್ಕದಲ್ಲಿ ಪಾಕಿಸ್ತಾನ (Pakistan) ಹಾಗೂ ಚೀನಾದಂತಹ ವಿರೋಧಿ ದೇಶಗಳನ್ನು ಹೊಂದಿರುವ ಭಾರತವು ಇಸ್ರೇಲ್ ಮಾದರಿಯಲ್ಲಿ ಸ್ವದೇಶಿ ವಾಯುರಕ್ಷಣಾ (air defense system) ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಆರಂಭಿಸಿದೆ.
ಇಸ್ರೇಲ್‌ನ ಐರನ್ ಡೋಮ್ (Israel’s Iron Dome) ಮಿತಿ 70 ಕಿ.ಮೀ. ಆಗಿದ್ದರೆ, ಭಾರತದ ವಾಯುರಕ್ಷಣಾ ವ್ಯವಸ್ಥೆ 350 ಕಿ.ಮೀ. ದೂರದಿಂದಲೂ ಬರುವ ಶತ್ರುವಿನ ಅಸ್ತ್ರ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದಕ್ಕಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ((DRDO) 20 ಸಾವಿರ ಕೋಟಿ ರು. ವೆಚ್ಚದಲ್ಲಿ ‘ಕುಶ’ (Kush)ಎಂಬ ಯೋಜನೆಯನ್ನು ಆರಂಭಿಸಿದೆ. 2028-29ರ ವೇಳೆಗೆ ಸ್ವದೇಶಿ ‘ಐರನ್ ಡೋಮ್’ ನಿಯೋಜಿಸುವ ಉದ್ದೇಶವನ್ನು ಹೊಂದಿದೆ.
ಕಣ್ತಪ್ಪಿಸಿ ದಾಳಿಗೆ ಬರುವ ಯುದ್ಧವಿಮಾನಗಳು, ವಿಮಾನಗಳು, ಡ್ರೋನ್‌ಗಳು, ಕ್ರೂಸ್ ಕ್ಷಿಪಣಿಗಳು ಹಾಗೂ ನಿಖರ ಗುರಿ ಹೊಂದಿದ ಅಸ್ತ್ರಗಳನ್ನು 350 ಕಿ.ಮೀ. ವ್ಯಾಪ್ತಿಯಲ್ಲೇ ಹೊಡೆದುರುಳಿಸುವ ಉದ್ದೇಶದಿಂದ ವಾಯುರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇಂತಹ ಸ್ವದೇಶಿ ವ್ಯವಸ್ಥೆ ಕೆಲವೇ ಕೆಲವು ದೇಶಗಳು ಬಳಿ ಇದ್ದು, ಭಾರತವೂ ಆಯ್ದ ದೇಶಗಳ ಕ್ಲಬ್‌ಗೆ ಸೇರ್ಪಡೆಯಾಗಲಿದೆ. ಸದ್ಯ ಭಾರತವು ರಷ್ಯಾ ನಿರ್ಮಿತ ಎಸ್-400 (Russian-made S-400) ವಾಯುರಕ್ಷಣಾ ವ್ಯವಸ್ಥೆಯನ್ನು ಬಳಸುತ್ತಿದೆ. ಇದು 380 ಕಿ.ಮೀ. ದೂರದಲ್ಲೇ ಶತ್ರುವಿನ ಅಸ್ತ್ರವನ್ನು ನಾಶಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.