ಜಿಲ್ಲಾಸ್ಪತ್ರೆ, ತೀವ್ರ ನಿಗಾ ಘಟಕದ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ
1 min readಜಿಲ್ಲಾಸ್ಪತ್ರೆ, ತೀವ್ರ ನಿಗಾ ಘಟಕದ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಂದ ಭೂಮಿ ಪೂಜೆ
ದೊಡ್ಡಬಳ್ಳಾಪುರ ನಗರದ ಸಿದ್ದೆನಾಯಕನಹಳ್ಳಿ ಬಳಿ ಜಿಲ್ಲಾಸ್ಪತ್ರೆ ಹಾಗೂ ತೀವ್ರ ನಿಗಾ ಘಟಕದ ಕಟ್ಟಡ ನಿರ್ಮಾಣಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಇಂದು ಗುದ್ದಲಿ ಪೂಜೆ ನೆರವೇರಿಸಿದರು.
ದೊಡ್ಡಬಳ್ಳಾಪುರ ತಾಲೂಕು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಇಂದು ಎಜಾಕ್ಸ್ ಸಂಸ್ಥೆ ನೆರವಿನೊಂದಿಗೆ 4 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಒಪಿಡಿ ಬ್ಲಾಕ್, ಡಯಾಲಿಸಿಸ್ ಕೇಂದ್ರ ಹಾಗೂ ಬ್ಲಡ್ ಬ್ಯಾಂಕ್ ಕೇಂದ್ರಗಳನ್ನೊಳಗೊ0ಡ ಕಟ್ಟಡವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವ ದಿನೇಶ್ ಗುಂಡೂರಾವ್ ಹಾಗೂ ಅಹಾರ ನಾಗರಿಕ ಸರಬರಾಜು ಹಾಗೂ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ ಉಟಿಸಿದರು.
ಸಮಾರಂಭದಲ್ಲಿ ಮಾತನಾಡಿದ ಆರೋಗ್ಯ ಕುಟುಂಬ ಕಲ್ಯಾಣ ಇಲಾಖಾ ಸಚಿವರು ಉತ್ಕಷ್ಟ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡುವುದು ಸರ್ಕಾರದ ಆದ್ಯತೆಯಾಗಿದ್ದು, ಎಲ್ಲಾ ವಿಧವಾದ ಚಿಕಿತ್ಸೆ ಹಾಗೂ ಔಷಧಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ದೊರೆಯುವಂತೆ ನೋಡಿಕೊಳ್ಳಲಾಗುವುದು ಎಂದರು. ಈ ಹಿಂದೆ 250 ರಿಂದ 300 ಅಗತ್ಯ ಔಷಧಿಗಳು ದೊರೆಯುತಿದ್ದು, ಅವುಗಳ ಸಂಖ್ಯೆಯನ್ನು 1 ಸಾವಿರಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದರು.
ದೊಡ್ಡಬಳ್ಳಾಪುರ ನೂತನ ಡಯಾಲಿಸಿಸ್ ಕೇಂದ್ರಕ್ಕೆ 1.5 ಕೋಟಿ ವೆಚ್ಚದ ಉಪಕರಣಗಳು ಹಾಗೂ ಪ್ರತಿ ವರ್ಷ ಮಾನವ ಸಂಪನ್ಮೂಲಗಳಿಗೆ 50 ಲಕ್ಷ ಒದಗಿಸಲಾಗುವುದು ಎಂದರು. ಈಗಾಗಲೇ ನೆಲಮಂಗಲ ತಾಲೂಕು ಕೇಂದ್ರಕ್ಕೆ ತಾಲೂಕು ಆಸ್ಪತ್ರೆ ಮಂಜೂರಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಂಪೂರ್ಣ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಲಾಗುವುದೆಂದರು. ಇತ್ತೀಚೆಗೆ ಬಿಪಿ, ಶುಗರ್ ಪ್ರಕರಣಗಳಲ್ಲಿ ಹೆಚ್ಚಳವಾಗುತಿದ್ದು, ಮನೆ ಮನೆಗೆ ತೆರಳಿ ಪರೀಕ್ಷಿಸುವ ಯೋಜನೆ ಜಾರಿಗೆತರಲಾಗುತ್ತಿದೆ. ಈ ಖಾಯಿಲೆಗಳು ಮುಂದಿನ ದಿನಗಳಲ್ಲಿ ಬೇರೆ ಬೇರೆ ಖಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ. ರಾಜ್ಯಾದ್ಯಂತ ೮ ಸಾವಿರ ಡಯಾಲಿಸಿಸ್ ಯಂತ್ರಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ನೀಡಲಾಗಿದೆ ಎಂದರು.