ಸರ್ಕಾರಿ ನೌಕರರಿಗೆ 2 ನೇ ವಿವಾಹ ನಿಷೇಧಿಸಿದ ಅಸ್ಸಾಂ ಸರ್ಕಾರ!
1 min readಅಸ್ಸಾಂ ಸರ್ಕಾರಿ ನೌಕರರು ಸಂಗಾತಿ ಜೀವಂತವಾಗಿದ್ದು, ಇನ್ನೊಬ್ಬರನ್ನು ಮದುವೆಯಾಗುವುದನ್ನು ಸರ್ಕಾರ ನಿರ್ಬಂಧಿಸಿದೆ ಮತ್ತು ಅವರು ದ್ವಿಪತ್ನಿತ್ವದಲ್ಲಿ ತೊಡಗಿಸಿಕೊಂಡರೆ ದಂಡದ ಕ್ರಮದ ಎಚ್ಚರಿಕೆಯನ್ನು ನೀಡಿದೆ.
ಸಿಬ್ಬಂದಿ ಇಲಾಖೆಯ ‘ಕಚೇರಿ ಸುತ್ತೋಲೆಯಲ್ಲಿ ಸಂಗಾತಿ ಬದುಕಿದ್ದು, ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗುವ ಮೊದಲು ಸರ್ಕಾರದ ಅನುಮತಿಯನ್ನು ತೆಗೆದುಕೊಳ್ಳುವಂತೆ ನೌಕರರಿಗೆ ಸೂಚಿಸಲಾಗಿದೆ. ಆದರೆ, ಇದರಲ್ಲಿ ವಿಚ್ಛೇದನ ಮಾನದಂಡದ ಬಗ್ಗೆ ಉಲ್ಲೇಖಿಸಿಲ್ಲ.
“ಹೆಂಡತಿ ಜೀವಂತವಾಗಿರುವ ಯಾವುದೇ ಸರ್ಕಾರಿ ನೌಕರನು ಸರ್ಕಾರದ ಅನುಮತಿಯನ್ನು ಪಡೆಯದೆ ಮತ್ತೊಂದು ಮದುವೆ ಒಪ್ಪಂದ ಮಾಡಿಕೊಳ್ಳಬಾರದು, ಅಂತೆಯೇ, ಯಾವುದೇ ಮಹಿಳಾ ಸರ್ಕಾರಿ ಉದ್ಯೋಗಿ, ತನ್ನ ಗಂಡ ಬದುಕಿರುವಾಗ ಸರ್ಕಾರದ ಅನುಮತಿ ಪಡೆಯದೆ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಬಾರದು ಎಂದು ಸರ್ಕಾರದ ಸುತ್ತೋಲೆಯಲ್ಲಿ ಹೇಳಲಾಗಿದ್ದು, ಇದು ಕೂಡಲೇ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.
ಈ ಸಂಬಂಧ ಅಕ್ಟೋಬರ್ 20 ರಂದು ಸಿಬ್ಬಂದಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೀರಜ್ ವರ್ಮಾ ಅಧಿಸೂಚನೆ ಹೊರಡಿಸಿದ್ದರು, ಆದರೆ ಅದು ಗುರುವಾರ ಬೆಳಕಿಗೆ ಬಂದಿದೆ. ಅಸ್ಸಾಂ ನಾಗರಿಕ ಸೇವೆಗಳ (ನಡತೆ) ನಿಯಮಗಳು 1965 ರ ನಿಯಮ 26 ರ ನಿಬಂಧನೆಗಳ ಪ್ರಕಾರ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಹೇಳಲಾಗಿದೆ.