‘ಹಳೆ ಪಿಂಚಣಿ ಯೋಜನೆ’ ನಿರೀಕ್ಷೆಯಲ್ಲಿದ್ದ ರಾಜ್ಯದ ‘ಸರ್ಕಾರಿ ಶಾಲಾ ಶಿಕ್ಷಕ’ರಿಗೆ ಶುಭಸುದ್ದಿ
1 min readಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆಯಲ್ಲಿ ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೊಳಿಸೋದಾಗಿದೆ. ಇದೀಗ ಇದನ್ನು ಜಾರಿಗೆ ತರೋ ನಿಟ್ಟಿನಲ್ಲಿ, ಶಿಕ್ಷಕರಿಗೆ ಹಳೆ ಪಿಂಚಣಿ ಯೋಜನೆ ಜಾರಿಗೆ ತರೋ ಸಂಬಂಧ ಪರಿಶೀಲನೆ ನಡೆಸಲು ಸಿಎಂ ಕಚೇರಿ ಸೂಚಿಸಿದೆ.
ಈ ಮೂಲಕ ಎನ್ ಪಿಎಸ್ ರದ್ದುಗೊಂಡು, ಓಪಿಎಸ್ ಜಾರಿ ನಿರೀಕ್ಷೆಯಲ್ಲಿದ್ದಂತ ಶಿಕ್ಷಕರಿಗೆ ಶುಭಸುದ್ದಿ ಹೊರಬಿದ್ದಿದೆ.
ಹೌದು ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರನ್ನು ಹಳೇ ಪಿಂಚಣಿ ವ್ಯವಸ್ಥೆ(OPS)ಗೆ ಒಳಪಡಿಸುವ ಕುರಿತು ಪರಿಶೀಲನೆ ನಡೆಸುವಂತೆ ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ನಿರ್ದೇಶನ ನೀಡಲಾಗಿದೆ.
ಸರ್ಕಾರಿ ಸೇವೆಯಲ್ಲಿರುವ ಶಿಕ್ಷಕರ ನಿವೃತ್ತಿಯ ಜೀವನಕ್ಕೆ ಭದ್ರತೆ ನೀಡಬೇಕು. ಮಾಸಿಕ ಕನಿಷ್ಠ ಪಿಂಚಣಿ ಇಲ್ಲದೇ ಶಿಕ್ಷಕರ ವೃತ್ತಿ ಜೀವನ ಕಷ್ಟಕರವಾಗುತ್ತದೆ. ಅವರಿಗೆ ನ್ಯಾಯ ಕೊಡಿಸುವ ದೃಷ್ಟಿಯಿಂದ ನೂತನ ಪಿಂಚಣಿ ಯೋಜನೆಯನ್ನು ( NPS) ರದ್ದುಪಡಿಸಿ, OPS ತರಬೇಕು ಎಂದು ಕೋರಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಿಎಂಗೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಈ ನಿರ್ದೇಶನ ಹೊರ ಬಿದ್ದಿದೆ.
ಮುಖ್ಯಮಂತ್ರಿಯವರ ನಿರ್ದೇಶನದಂತೆ ಸಂಘದ ಕೋರಿಕೆಯನ್ನು ಪರಿಶೀಲಿಸಿ, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಗೆ ಪತ್ರದ ಮೂಲಕ ತಿಳಿಸಿದ್ದಾರೆ.