ಜಿಲ್ಲೆಯಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ
1 min readಜಿಲ್ಲೆಯಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ
ಗಣೇಶ ಮಂಡಳಿಗಳಿ0ದ ಗಣೇಶ ಪ್ರತಿಷ್ಠಾಪನೆ
ನಾಗರ ಕಲ್ಲಿಗೆ ಹಾಲೆರೆದು ಪೂಡೆ ಸಲ್ಲಿಸಿದ ಮಹಿಳೆಯರು
ವಿಘ್ನ ನಿವಾರಕನ ಪೂಜೆಗೆಯಲ್ಲಿ ಮಿಂದೆದ್ದ ಚಿಕ್ಕಬಳ್ಳಾಪುರ
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ
ವಿನಾಯಕ ಚಕುರ್ದಶಿ ಎಂದರೆ ಸನಾತನ ಧರ್ಮ ಪಾಲಕರಿಗೆ ಪ್ರಮುಖ ಹಬ್ಬ. ಈ ಹಬ್ಬದ ವಿಘ್ನ ನಿವಾರಕನಾದ ವಿನಾಯಕನ ಪೂಜೆಗೆ ಮೀಸಲಾದ ಹಬ್ಬ. ಇನ್ನು ಗಣೇಶ ಉತ್ಸವಗಳಂತೂ ಈ ಹಬ್ಬದ ಹೈಲೆಟ್. ಹೊಟ್ಟೆ ಬಿರಿಯುವಂತೆ ಕಡಬು ತಿಂದು ಹಾವು ಸುತ್ತಿಕೊಂಡ ಗಣಪನ ಜನನದಿಂದಲೂ ಆತನ ಸಾಹಸಗಳು ಅನುಕರಣೀಯ. ಗಣೇಶನ ಸ್ಥಿತಿ ಕಂಡು ಹಲ್ಲುಗಿಂಜಿದ ಕಾರಣಕ್ಕೆ ಇಂದು ಚಂದ್ರನನ್ನು ನೋಡುವ ಭಾಗ್ಯದಿಂದ ಜನ ವಂಚಿತ. ಹೀಗೆ ಗಣೇಶ ಚತುರ್ಜದಶಿಯ ವಿಶೇಷಗಳು ಒಂದೇ ಎರಡೇ. ಅಂತಹ ವಿನಾಯಕ ಚೌತಿ ಇಂದು ಜಿಲ್ಲೆಯಾದ್ಯಂತ ಅದ್ಧೂರಿಯಾಗಿ ಆಚರಿಸಲಾಗಿದೆ.
ಹೌದು, ವಿಘ್ನ ನಿವಾರಕನೆಂದು ಖ್ಯಾತಿ ಪಡೆದವರು ವಿನಾಯಕ. ವಿನಾಯಕ, ಮೋದಕ ಪ್ರಿಯ, ಗಣೇಶ, ಗಣಪ ಹೀಗೆ ಹಲವು ನಾಮಗಳಿಂದ ಕರೆಯಲ್ಪಡುವ ಗಣಪತಿಗಾಗಿಯೇ ಮೀಸಲಾದ ಹಬ್ಬ ವಿನಾಯಕ ಚೌತಿ. ಇದು ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದು. ಹಾಗಾಗಿಯೇ ಜಿಲ್ಲೆಯಾದ್ಯಂತ ವಿನಾಯಕ ಚತುರ್ದಶಿಯನ್ನು ಜನರು ಅದ್ಧೂರಿಯಾಗಿ ಆಚರಿಸಿದರು. ಈ ಹಬ್ಬದ ವೇಳೆ ಬೆಳೆಗಳು ಬೆಳೆದು ನಿಂತು, ಇಡೀ ನೆಲ ಹಸಿರುಮಯವಾಗಿರುವ ಕಾರಣ ಈ ಹಬ್ಬಕ್ಕೆ ಮತ್ತೊಂದು ಪ್ರಾಮುಖ್ಯತೆಯೂ ಇದೆ.
ಹಿಂದೂ ಹಬ್ಬವಾದ ಗಣೇಶ ಚತುರ್ಥಿ ಭಗವಾನ್ ಶಿವ ಮತ್ತು ಪಾರ್ವತಿ ದೇವಿಯ ಮಗ ಗಣೇಶನ ಜನ್ಮ ತಿಳಿಸುತ್ತದೆ. ಹಿಂದೂ ಪುರಾಣದ ಪ್ರಕಾರ, ಪಾರ್ವತಿ ತನ್ನ ದೇಹದ ಮೇಲಿನ ಕೊಳೆಯಿಂದ ಗಣೇಶನನ್ನು ರೂಪಿಸಿದ ನಂತರ ಶಿವನು ಗಣೇಶನಿಗೆ ಅಸ್ತಿತ್ವವನ್ನು ನೀಡಿದನು. ಭಾರತದಲ್ಲಿ ಗಣೇಶ ಚತುರ್ಥಿ ಬಹಳ ಹಿಂದಿನಿ0ದಲೂ ಆಚರಿಸುತ್ತಿರುವುದರಿಂದ, ಈ ಹಬ್ಬ ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ ಮಹತ್ವ ಪಡೆದಿದೆ. ಇದು ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಭಿಸುತ್ತದೆ.
ಈ ದಿನ ಚಂದ್ರನನ್ನು ನೋಡಬಾರದು ಎಂಬ ನಿಯಮವಿದೆ. ಇದಕ್ಕೆ ಕಾರಣವೂ ಪುರಾಣಗಳಲ್ಲಿ ಉಲ್ಲೇಖಿಸಿದ್ದು, ಗಣೇಶನು ಚತುರ್ಥಿಯ ದಿನ ಭಕ್ತರ ಮನೆಗಳಿಗೆ ತೆರಳಿ ಅತಿಯಾಗಿ ಮೋದಕ ಸೇವಿಸಿ, ತನ್ನ ವಾಹನ ಮೂಷಕದ ಮೇಲೆ ವಾಪಸ್ ಕೈಲಾಸಕ್ಕೆ ಬರುವಾಗ ಹೊಟ್ಟೆ ಬಿರಿದು ಮೋದಕಗಳು ಹೊರಬಿದ್ದವಂತೆ. ಇದನ್ನು ಕಂಡ ಚಂದ್ರ ನಗು ತಡೆಯಲಾರದೆ, ಜೋರಾಗಿ ನಕ್ಕಿದ್ದಾನೆ. ಇದರಿಂದ ಕೋಪಗೊಡ ವಿನಾಯಕ ಜನ ನಿನ್ನನ್ನು ನೋಡದಿರೆ ಅವರ ಜೀವನದಲ್ಲಿ ಕಳಂಕ ಬರಲಿ ಎಂದು ಶಾಪ ನೀಡಿದರಂತೆ. ಇದರಿಂದ ಚಂದ್ರ ಹೆದರಿ ಶಿವನನ್ನು ಬೇಡಿಕೊಂಡಾಗ ಶಾಶ್ವತವಾಗಿದ್ದ ಶಾಪವನ್ನು ವಿನಾಯಕ ಚೌತಿ ದಿನಕ್ಕೆ ಮಾತ್ರ ಸೀಮಿತಗೊಳಿಸಿದರಂತೆ.
ಚೌತಿಯ ದಿನ ಚಂದ್ರನನ್ನು ನೋಡಿದ ಕಾರಣಕ್ಕೆ ಶ್ರೀಕೃಷ್ಣನಿಗೆ ಶಮಂತಕ ಮಣಿ ಕದ್ದ ಆರೋಪ ಎದುರಿಸಬೇಕಾಯಿತು ಎಂಬುದು ಪುರಾಣಗಳಲ್ಲಿ ಲಿಖಿತವಾಗಿದ್ದು, ಇಂದು ಚಂದ್ರನನ್ನು ನೋಡಿದರ ಕಳಂಕ ತಪ್ಪಿದ್ದಲ್ಲ ಎಂಬ ಬಲವಾದ ನಂಬಿಕೆ ಇಂದಿಗೂ ಹಿಂದೂ ಸಾಂಪ್ರದಾಯದಲ್ಲಿದೆ. ಶ್ಲೋಕಗಳ ಪಠಣ ಮತ್ತು ಹೂವು, ಸಿಹಿತಿಂಡಿಗಳ ಅರ್ಪಣೆಯೊಂದಿಗೆ ಪೂಜೆ ನಡೆಸಲಾಗುತ್ತದೆ. ಇಂದು ಪ್ರತಿ ಮನೆಯಲ್ಲಿಯೂ ಕಡಬು ವಿಶೇಷ ತಿನಿಸು. ಮೋದಕ ತಯಾರಿಸಿ ತಿನ್ನುವುದು ಈ ಹಬ್ಬದ ವಿಶೇಷವಾಗಿದ್ದು, ಗಣಪತಿಯ ನೆಚ್ಚಿನ ಸಿಹಿಯಾಗಿ ಮೋದಕ ಖ್ಯಾತಿ ಪಡೆದಿದೆ.
ಜಿಲ್ಲೆಯಾದ್ಯಂತ ಗಲ್ಲಿಗೊಂದು ಗಣೇಶ ಪ್ರತಿಮೆಗಳನ್ನು ಪ್ರತಿಷ್ಟಾಪಿಸಲಾಗಿದ್ದು, ಮೂರು ಮತ್ತು ಐದು ದಿನಗಳ ಗಡುವನ್ನು ಪೊಲೀಸ್ ಇಲಾಖೆ ನೀಡಿದೆ. ಐದು ದಿನಗಳ ಒಳಗಾಗಿ ಜಿಲ್ಲೆಯಾದ್ಯಂತ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಿದ್ದು, ಈ ಐದು ದಿನಗಳ ಕಾಲ ಗಣಪತಿ ಪೆಂಡಾಲ್‌ನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಕರು ಏರ್ಪಡಿಸಲಿದ್ದಾರೆ. ವಿವಿಧ ವಾದ್ಯಗೋಷ್ಟಿಗಳು, ನಾಟಕಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಗೌರಿಗಣೇಶ ಹಬ್ಬದ ಪ್ರಯುಕ್ತ ಇಂದು ಜಿಲ್ಲೆಯಾದ್ಯಂತ ಇರುವ ನಾಗರಕಲ್ಲುಗಳಿಗೆ ಹಾಲಿನ ತೆನೆ ಎರೆಯುವ ಮೂಲಕ ಮಹಿಳೆಯ ಪೂಜೆಗಳನ್ನು ಪ್ರಾರಂಭಿಸಿದರು. ಅಲ್ಲದೆ ವಿನಾಯಕ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆಗಳನ್ನು ಸಲ್ಲಿಸಿದರು. ಇನ್ನು ಯುವಕ ಮಂಡಳಿಗಳು ಗಣೇಶನ ಪ್ರಮಿಮೆ ಪ್ರತಿಷ್ಠಾಪನೆಯಲ್ಲಿ ಮಗ್ನರಾಗಿದ್ದರು. ಈ ಬಾರಿಯೂ ಹಲವು ನಾಯಕರು ಉಚಿತವಾಗಿ ಗಣೇಶ ಪ್ರತಿಮೆಗಳನ್ನು ಯುವಕ ಮಂಡಳಿಗಳಿಗೆ ವಿತರಿಸುವ ಮೂಲಕ ತಮ್ಮ ಇರವಿಕೆಯನ್ನು ತೋರ್ಪಡಿಸಿದರು.
ಒಟ್ಟಿನಲ್ಲಿ ಜಿಲ್ಲೆಯಾದ್ಯಂತ ವಿನಾಯಕ ಚೌತಿ ಇಂದು ಅದ್ಧೂರಿಯಾಗಿ ನೆರವೇರಿದ್ದು, ಇಂದು ಪ್ರತಿಷ್ಠಾಪನೆಯಾಗಿರುವ ಗಣೇಶ ಪ್ರತಿಮೆಗಳು ಐದು ದಿನಗಳ ಕಾಲ ಪೂಜಿಸಲ್ಪಡುವುದರಿಂದ ಇನ್ನೂ ಒಂದು ವಾರದ ಕಾಲ ವಿನಾಯಕ ಚೌತಿಯ ವಿಶೇಷ ಮುಂದುವರಿಯಲಿದೆ.