‘ಗರಡಿ’ to ‘ಟೈಗರ್ 3’: ಬೆಳಕಿನ ಹಬ್ಬ ದೀಪಾವಳಿಗೆ ರಿಲೀಸ್ ಆಗ್ತಿರೋ ಸಿನಿಮಾಗಳ ಪಟ್ಟಿ
1 min readಬೆಳಕಿನ ಹಬ್ಬ ದೀಪಾವಳಿ ಬಂದೇ ಬಿಡ್ತು. ಈ ಹಬ್ಬಕ್ಕಾಗಿ ಭಾರತದಾದ್ಯಂತ ಜನರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾ ಮಂದಿಗಂತೂ ಬೆಳಕಿನ ಹಬ್ಬ ಅಂದರೆ ಎಲ್ಲಿಲ್ಲ ಖುಷಿ. ಯಾಕಂದ್ರೆ ಈ ವೇಳೆ ರಿಲೀಸ್ ಆಗುವ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಉತ್ತಮ ಹಣ ಗಳಿಸುತ್ತವೆ.
ಈ ಬಾರಿ ದೀಪಾವಳಿ ಹಬ್ಬಕ್ಕೆ ಕನ್ನಡವೂ ಸೇರಿದಂತೆ, ತೆಲುಗು, ತಮಿಳು ಭಾಷೆಯ ಸಿನಿಮಾಗಳೂ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿವೆ. ದೀಪಾವಳಿ ಹಬ್ಬಕ್ಕೆ ಜನರಿಗೆ ಮನರಂಜನೆ ನೀಡುವುದಕ್ಕಂತಲೇ ಕೆಲವು ಸಿನಿಮಾಗಳು ಸಜ್ಜಾಗಿ ನಿಂತಿವೆ. ಅಂತಹ ಸಿನಿಮಾಗಳ ಪಟ್ಟಿ ಇಲ್ಲಿದೆ.
1 ಗರಡಿ
ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ ಇದೇ ನವೆಂಬರ್ 10 ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಬಹುತೇಕ ಲವ್ ಸ್ಟೋರಿಗಳಿಗೆ ಆಕ್ಷನ್ ಕಟ್ ಹೇಳಿದ್ದ ಭಟ್ಟರು ಮತ್ತೆ ಮಾಸ್ ಸಿನಿಮಾ ಕಡೆ ಹೊರಳಿದಿದ್ದಾರೆ. ಯಶಸ್ ಸೂರ್ಯ ಮತ್ತೆ ಹೀರೊ ಆಗಿ ಕಮ್‌ಬ್ಯಾಕ್ ಮಾಡಿರುವ ಈ ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ದೀಪಾವಳಿ ‘ಗರಡಿ’ ಮನೆಯಲ್ಲಿ ಸಖತ್ ಮನರಂಜನೆ ಸಿಗೋದು ಗ್ಯಾರಂಟಿ ಎನ್ನಲಾಗುತ್ತಿದೆ. ಅಂದ್ಹಾಗೆ ಈ ಸಿನಿಮಾವನ್ನು ಬಿಸಿ ಪಾಟೀಲ್ ನಿರ್ಮಾಣ ಮಾಡಿದ್ದಾರೆ.
2 ಟೈಗರ್ 3
ಸಲ್ಮಾನ್ ಖಾನ್ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಸಿನಿಮಾಗಳನ್ನು ಕೊಟ್ಟು ಸ್ವಲ್ಪ ದಿನ ತಣ್ಣಗಾಗಿದ್ದರು. ಆದ್ರೀಗ ‘ಟೈಗರ್ 3’ ಮೂಲಕ ಮತ್ತೆ ಸದ್ದು ಮಾಡುವುದಕ್ಕೆ ಸಜ್ಜಾಗಿದ್ದಾರೆ. ‘ಟೈಗರ್ 3’ ಇದೇ ನವೆಂಬರ್ 12ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ‘ಟೈಗರ್’ ಹಾಗೂ ‘ಟೈಗರ್ ಜಿಂದಾ ಹೇ’ ಸಿನಿಮಾದ ಸೀಕ್ವೆಲ್ ಇದಾಗಿದ್ದು, ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಿಲೀಸ್ ಆಗಲಿದೆ.
3 ಜಪಾನ್
ಕಾರ್ತಿ ನಟಿಸಿರುವ ‘ಜಪಾನ್’ ಸಿನಿಮಾ ಕೂಡ ಇದೇ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ. ರಾಜು ಮುರುಗನ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅನು ಇಮ್ಯಾನುಯೆಲ್ ಈ ಸಿನಿಮಾಗೆ ನಾಯಕಿಯಾಗಿದ್ದಾರೆ. 200 ಕೋಟಿ ರೂಪಾಯಿ ವೆಚ್ಚದ ಜ್ಯುವೆಲರಿಯನ್ನು ಹೇಗೆ ಕದ್ದ? ಪೊಲೀಸರು ಹಿಡಿದಿದ್ದೇಗೆ? ಅನ್ನೋದೇ ಸಿನಿಮಾದ ಕಥೆ. ಈ ಸಿನಿಮಾ ನೆವೆಂಬರ್ 10ಕ್ಕೆ ರಿಲೀಸ್ ಆಗುತ್ತಿದೆ.
4 ಜಿಗರ್‌ಥಾಂಡ ಡಬಲ್ ಎಕ್ಸ್
ತಮಿಳಿನ ಯಶಸ್ವಿ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ನಿರ್ದೇಶಿಸಿದ ಸಿನಿಮಾ ಜಿಗರ್‌ಥಾಂಡ ಡಬಲ್ ಎಕ್ಸ್ ಸಿನಿಮಾ ಕೂಡ ದೀಪಾವಳಿಗೆ ರಿಲೀಸ್ ಆಗುತ್ತಿದೆ. ರಾಘವ ಲಾರೆನ್ಸ್ ಹಾಗೂ ಎಸ್‌ಜೆ ಸೂರ್ಯ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಗ್ಯಾಂಗ್‌ಸ್ಟರ್‌ಗಳನ್ನು ಹೀರೊ ಮಾಡಿ ಸಿನಿಮಾ ಮಾಡಿದರೆ ಏನೆಲ್ಲ ಕಷ್ಟಗಳನ್ನು ಅನುಭವಿಸಬೇಕಾಗುತ್ತೆ ಅನ್ನೋದೇ ಕಥೆ.
5 ಅಲಾ ನಿನ್ನು ಚೇರಿ
ದಿನೇಶ್ ತೇಜ್, ಹೆಬ್ಬ ಪಟೇಲ್ ಹಾಗೂ ಪಾಯಲ್ ರಾಧಾಕೃಷ್ಣ ನಟಿಸುವ ಸಿನಿಮಾ ‘ಅಲಾ ನಿನ್ನು ಚೇರಿ’. ಇದು ಪಕ್ಕಾ ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಎಂಟರ್‌ಟೈನರ್ ಕಥೆಯನ್ನು ಹೊಂದಿದ್ದು, ಈ ಸಿನಿಮಾ ಕೂಡ ನವೆಂಬರ್ 10ಕ್ಕೆ ರಿಲೀಸ್ ಆಗುತ್ತಿದೆ.
6 ದಿ ಮಾರ್ವಲ್ಸ್
ಹಾಲಿವುಡ್‌ನ ಸೂಪರ್ ಹೀರೋ ಸಿನಿಮಾ ‘ದಿ ಮಾರ್ವಲ್ಸ್’ ಬಿಡುಗಡೆ ಭಾರತದ ಸಿನಿಮಾಗಳಿಗೆ ಟಕ್ಕರ್ ಕೊಡುವುದಕ್ಕೆ ಬರುತ್ತಿದೆ. ನವೆಂಬರ್ 10ಕ್ಕೆ ಈ ಸಿನಿಮಾ ಕೂಡ ರಿಲೀಸ್ ಆಗುತ್ತಿದ್ದು, ಬ್ರೀ ಲಾರ್ಸನ್, ಟೆಯೋನಾ ಪ್ಯಾರಿಸ್, ಇಮಾನ್ ವೆಲ್ಲಾನಿ, ಪಾರ್ಕ್ ಸಿಯೋ-ಜೂನ್ ನಟಿಸಿದ್ದಾರೆ. ಇದು ಇಂಗ್ಲಿಷ್, ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.