ಷೇರು ಮಾರುಕಟ್ಟೆ ಹೆಸರಿನಲ್ಲಿ ವಂಚನೆ: ವಿದ್ಯಾವಂತರೇ ಟಾರ್ಗೆಟ್!
1 min readತಂತ್ರಜ್ಞಾನ ಬೆಳೆದಷ್ಟೇ ವೇಗವಾಗಿ ಅದನ್ನೇ ಬಳಸಿ ಜನರನ್ನು ವಂಚಿಸುವ ಜಾಲವೂ ಬೆಳೆಯುತ್ತಿದೆ. ಈಚೆಗೆ ಷೇರು ಮಾರುಕಟ್ಟೆಯ ನೆಪವೊಡ್ಡಿ ಲಕ್ಷಾಂತರ ಹಣ ಪಡೆದು ಮೋಸ ಮಾಡಿದ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಿವೆ. ಇಂತಹ ಜಾಲಗಳಿಗೆ ವಿದ್ಯಾವಂತರೇ ಟಾರ್ಗೆಟ್ ಆಗಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಕಳೆದೊಂದು ತಿಂಗಳಲ್ಲಿ ದಾಖಲಾದ ಆನ್‌ಲೈನ್ ವಂಚನೆ ಪ್ರಕರಣದಲ್ಲಿ ಷೇರು ಮಾರುಕಟ್ಟೆಯ ಕುರಿತು ಆಸೆ ಹುಟ್ಟಿಸಿ ವಂಚಿಸಿದ ಬಗ್ಗೆ 15ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿದೆ ಎನ್ನುತ್ತಾರೆ ಪೊಲೀಸರು.
ನಗರದ ಮೂವರು ತಲಾ ₹75 ಲಕ್ಷಕ್ಕಿಂತ ಹೆಚ್ಚು ಹಣ ಕಳೆದುಕೊಂಡಿದ್ದಾರೆ. ನಿತ್ಯ ಈ ರೀತಿಯ ಪ್ರಕರಣ ದಾಖಲಾಗುತ್ತಿದ್ದು, ಈ ಬಗ್ಗೆ ವರದಿ ಪ್ರಕಟವಾಗುತ್ತಿದ್ದರೂ ಜನರು ವಂಚನೆಗೆ ಒಳಗಾಗುತ್ತಲೇ ಇದ್ದಾರೆ!
ಆರಂಭದಲ್ಲಿ ಹಣ ಜಮೆ: ವಂಚನೆ ಮಾಡುವ ಕಂಪೆನಿಗಳು ತಾವು ಸಂಪರ್ಕಿಸುವವರಿಗೆ ಯಾವುದೇ ಅನುಮಾನ ಬಾರದಂತೆ ನಡೆದುಕೊಳ್ಳುತ್ತವೆ. ಆರಂಭದಲ್ಲಿ ಷೇರು ಮಾರುಕಟ್ಟೆಗೆ ಸಂಬಂಧಿಸಿದ್ದು ಎನ್ನಲಾದ ಆಯಪ್ ಆರಂಭಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕಿಸಿ, ಅವರಿಗೆ ಕೆಲವೊಂದು ಚಟುವಟಿಕೆ ನೀಡುತ್ತಾರೆ. ಅದಕ್ಕಾಗಿ ಸಣ್ಣ ಮೊತ್ತವನ್ನೂ ಪಾವತಿಸುತ್ತಾರೆ. ಇದಾದ ಬಳಿಕ ಹೆಚ್ಚಿನ ಹಣ ಹೂಡಿಕೆ ಮಾಡಿದರೆ 6 ತಿಂಗಳಲ್ಲಿ ಲಾಭ ಪಡೆಯುವುದೆಂದು ನಂಬಿಸಿ ಹಣ ವರ್ಗಾಯಿಸಿಕೊಳ್ಳುತ್ತಿದ್ದಾರೆ.
ಇನ್ನೂ ಕೆಲವು ಪ್ರಕರಣದಲ್ಲಿ ಷೇರು ಮಾರುಕಟ್ಟೆಗೆ ಹೂಡಿಕೆ ಮಾಡಿಸಿದರೆ ಬಡ್ಡಿ, ಕಮಿಷನ್ ನೀಡುವುದಾಗಿ ನಂಬಿಸುತ್ತಿದ್ದು, ನಂತರ ಅವರು ಸಣ್ಣ ಮೊತ್ತವನ್ನು ಪಾವತಿಸಿದಾಗ ಅದಕ್ಕೆ ಸಂಬಂಧಿಸಿದ ಹಣ ಪಾವತಿಸುತ್ತಾರೆ. ದೊಡ್ಡ ಮೊತ್ತ ಹೂಡಿಕೆ ಮಾಡುತ್ತಿದ್ದಂತೆ ವಂಚಕರು ಹಣ ಪಾವತಿ ಮಾಡುವುದನ್ನು ನಿಲ್ಲಿಸುತ್ತಾರೆ. ನಂತರ ಸಂಪರ್ಕಕ್ಕೂ ಸಿಗುವುದಿಲ್ಲ. ಅವರು ತಯಾರಿಸಿದ ಆಯಪ್‌ನಲ್ಲಿ ಹಣ ಇರುವುದನ್ನು ತೋರಿಸುತ್ತದೆ. ಆದರೆ ಅದು ಬ್ಯಾಂಕ್ ಖಾತೆಗೆ ಜಮೆ ಆಗುವುದಿಲ್ಲ ಎಂದು ಪೊಲೀಸರು ವಿವರಿಸಿದರು.
‘ಈಚೆಗೆ ಷೇರು ಮಾರುಕಟ್ಟೆ ಹಾಗೂ ಕ್ರಿಫ್ಟೊ ಕರೆನ್ಸಿ ಬಗ್ಗೆ ವಂಚನೆ ಪ್ರಕರಣಗಳೇ ಹೆಚ್ಚುತ್ತಿವೆ. ಅವೆಲ್ಲ ವ್ಯವಹಾರಗಳು ಸಾಮಾಜಿಕ ಜಾಲತಾಣಗಳಿಂದಲೇ ಆರಂಭವಾಗಿದೆ. ಎರಡು, ಮೂರು ಲಕ್ಷದಿಂದ ತೊಡಗಿ ಕೋಟಿಯವರೆಗೂ ವಂಚನೆಯಾಗುತ್ತಿದೆ. ಈ ಬಗ್ಗೆ ಜನರಲ್ಲೇ ಅರಿವು ಬರಬೇಕು’ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ರೀತಿಯ ವಂಚನೆ ಪ್ರಕರಣ ಪತ್ತೆಗೆ ಮೂವರು ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಕಳೆದ 5 ತಿಂಗಳಲ್ಲಿ ₹2 ಕೋಟಿಯನ್ನು ವಾಪಸ್ ಪಡೆದಿದ್ದೇವೆ. ಆನ್‌ಲೈನ್ ವಂಚನೆಗೆ ಒಳಗಾದರೆ ತಕ್ಷಣ ಸಹಾಯವಾಣಿ ಸಂಖ್ಯೆ 1930 ಅಥವಾ ಸೈಬರ್ ಕ್ರೈಂ ಠಾಣೆಯ ಮೊ.ಸಂ 9480802263 ಸಂಪರ್ಕಿಸಬಹುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಲಕ್ಷಾಂತರ ರೂಪಾಯಿ ವಂಚನೆ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸುವ ಆಮಿಷ ಸಾಮಾಜಿಕ ಜಾಲತಾಣವೇ ವಂಚನೆಯ ತಾಯಿ ಬೇರು
‘ಪರಿಚಯ ಇಲ್ಲದ ವ್ಯಕ್ತಿ ಅಧಿಕೃತವಲ್ಲದ ಕಂಪೆನಿಗಳೊಂದಿಗೆ ನಡೆಸುವ ವ್ಯವಹಾರದಿಂದ ಈ ಸಮಸ್ಯೆ ಹೆಚ್ಚುತ್ತಿದೆ’ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು. ‘ಕಚೇರಿಗಳನ್ನು ಹೊಂದಿರುವ ಅಥವಾ ನಿಮ್ಮದೇ ಊರಿನಲ್ಲಿರುವವರನ್ನು ನಂಬಿ ಹೊರತಾಗಿ ಭೇಟಿಯೇ ಆಗದ ವ್ಯಕ್ತಿಗಳೊಂದಿಗೆ ವ್ಯವಹಾರ ಕಡಿಮೆ ಮಾಡಬೇಕು. ಮೋಸದ ಜಾಲಗಳು ಆರಂಭದಲ್ಲಿ ₹5 ಲಕ್ಷ ಹೂಡಿಕೆ ಮಾಡಿದರೆ ಅವನ್ನು ದ್ವಿಗುಣಗೊಳಿಸಿ ₹10 ಲಕ್ಷ ನೀಡುತ್ತಾರೆ. ಅದನ್ನು ನಂಬಿ ಸಾಲ ಮಾಡಿ ಲಕ್ಷಾಂತರ ಹಣ ಹೂಡಿದಾಗ ವಂಚಿಸುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಕೆಲವೇ ದಿನಗಳಲ್ಲಿ ನಾವು ಕೋಟ್ಯಾಧಿಪತಿ ಆಗಿದ್ದೇವೆ ಎಂಬ ವಿಡಿಯೋಗಳನ್ನು ನಂಬದೆ ಅಧಿಕೃತವಾದ ಜಾಲಗಳೊಂದಿಗೆ ಮಾತ್ರ ವ್ಯವಹರಿಸಿದರೆ ಆನ್‌ಲೈನ್ ವಂಚನೆಯಿಂದ ಪಾರಾಗಬಹುದು’ ಎಂಬ ಸಲಹೆ ಅವರದು.
#ctvnews #ctvNews #ctv