ಶಾಲಾ ಕಾಮಗಾರಿ ಪರಿಶೀಲಿಸಿದ ಆಹಾರ ಸಚಿವ
1 min readಶಾಲಾ ಕಾಮಗಾರಿ ಪರಿಶೀಲಿಸಿದ ಆಹಾರ ಸಚಿವ
ಸಚಿವ ಕೆ.ಎಚ್. ಮುನಿಯಪ್ಪರಿಂದ ಮೇಲೂರು ಶಾಲೆಗೆ ಭೇಟಿ
ರಸ್ತೆ, ಆಸ್ಪತ್ರೆ ಮತ್ತು ಶೈಕ್ಷಣಿಕ ವ್ಯವಸ್ಥೆಯನ್ನು ಉತ್ತಮಪಡಿಸುವುದು ಆದ್ಯ ಕರ್ತವ್ಯ. ಶಿಡ್ಲಘಟ್ಟ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆಗಳಿಗೆ ಉನ್ನತೀಕರಣ, ಅತ್ಯಗತ್ಯವಿರುವ ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣ ಮತ್ತು ಗ್ರಾಮಾಂತರ ರಸ್ತೆ ನಿರ್ಮಾಣಕ್ಕೆ ಅನುದಾನಕ್ಕಾಗಿ ಸಂಬ0ಧಪಟ್ಟ ಸಚಿವರೊಡನೆ ಚರ್ಚಿಸಿ ಅನುದಾನ ಪಡೆಯಲಾಗುವುದು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿ ಮಾತನಾಡಿದ ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಶಾಸಕ ಬಿ.ಎನ್. ರವಿಕುಮಾರ್ ಅವರು ಆಸಕ್ತಿ ವಹಿಸಿ ರಸ್ತೆ, ಆಸ್ಪತ್ರೆ ಮತ್ತು ಶೈಕ್ಷಣಿಕ – ಮೂರೂ ಕ್ಷೇತ್ರಗಳಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಸರ್ಕಾರದ ಅನುದಾನಕ್ಕಾಗಿ ಪ್ರಯತ್ನಿಸಲು ಸೂಕ್ತ ದಾಖಲೆಗಳೊಂದಿಗೆ ಮನವಿ ನೀಡುವಂತೆ ಹೇಳಿರುವೆ. ಅದನ್ನು ಆಯಾ ಸಚಿವರಿಗೆ ಖುದ್ದಾಗಿ ನೀಡಿ, ಅವಶ್ಯಕ ಅನುದಾನಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.
ಒಳ ಮೀಸಲಾತಿ ಜಾರಿ ವಿಚಾರವಾಗಿ ಗೃಹಸಚಿವರ ಮನೆಯಲ್ಲಿ ಸಭೆೆ ನಡೆಸಿದ್ದೇವೆ. ಸುಧೀರ್ಘವಾಗಿ ಚರ್ಚಿಸಿದ್ದು, ಸುಪ್ರೀಂ ಕೋರ್ಟ್ ತೀರ್ಮಾನ ಜಾರಿಗೊಳಿಸಲು ಎಲ್ಲರೂ ಒಪ್ಪಿದ್ದೇವೆ. ಯಾವ ಸಮುದಾಯಕ್ಕೂ ಅನ್ಯಾಯವಾಗದ ಹಾಗೆ ನೋಡಿಕೊಳ್ಳಲಾಗುವುದು. ವಿನಾಕಾರಣ ಟೀಕೆ ಮಾಡುವುದನ್ನು ಖಂಡಿಸುತ್ತೇನೆ ಎಂದರು. ಎತ್ತಿನಹೊಳೆ ನೀರು ಬಂದೇ ಬರುತ್ತದೆ. ಇದರ ಬಗ್ಗೆ ಅನುಮಾನ ಬೇಡ. ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಒಂದೂವರೆ ವರ್ಷದೊಳಗೆ ಕುಡಿಯುವ ನೀರು ಲಭ್ಯವಾಗಲಿದೆ. ಕೋಲಾರ ನಾಲ್ಕೂವರೆ ಟಿಎಂಸಿ, ಚಿಕ್ಕಬಳ್ಳಾಪುರ ನಾಲ್ಕು ಟಿ.ಎಂ.ಸಿ ಮತ್ತು ಬೆಂಗಳೂರು ಗ್ರಾಮಾಂತರಕ್ಕೆ ನಾಲ್ಕು ಟಿಎಂಸಿ ನೀರು ಸಿಗಲಿದೆ ಎಂದರು.
ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ 217 ಕಿ.ಮೀ. ರಸ್ತೆ ಹದಗೆಟ್ಟಿದೆ. ತುರ್ತಾಗಿ ಅವುಗಳನ್ನು ಸರಿಪಡಿಸಬೇಕಿದೆ. ನಗರದಲ್ಲಿ ಅಂಬೇಡ್ಕರ್ ಭವನಕ್ಕೆ ಸ್ಥಳ ನಿಗಧಿಯಾಗಿದೆ, ಸುಸಜ್ಜಿತ ಕಟ್ಟಡ ನಿರ್ಮಾಣವಾದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಅದಕ್ಕಾಗಿ ಸಚಿವರು ಅನುದಾನ ಕೊಡಿಸಬೇಕೆಂದು ಮನವಿ ಮಾಡಿದ್ದೇನೆ. ನಗರದ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಗಳಿಗೆ ಉನ್ನತೀಕರಣಕ್ಕಾಗಿ ಸ್ಥಳ ನಿಗಧಿಯಾಗಿದೆ, ಅದಕ್ಕೂ ಅನುದಾನ ಬೇಕಿದೆ. ತಾಲ್ಲೂಕಿನಾದ್ಯಂತ ಸುಮಾರು 150ಕ್ಕೂ ಹೆಚ್ಚು ಶಾಲೆಗಳ ಕೊಠಡಿಗಳು ನಿರ್ಮಿಸಬೇಕಿದೆ. ಕ್ಷೇತ್ರದ ಈ ಅಭಿವೃದ್ಧಿ ಕೆಲಸಗಳಿಗೆ ಸಚಿವರಿಗೆ ಮನವಿ ಸಲ್ಲಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮೇಲೂರಿನ ಸರ್ಕಾರಿ ಪ್ರೌಢಶಾಲೆಗೆ ಸಿ.ಎಸ್.ಆರ್ ಅನುದಾನ ಕೊಡಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದರು.