ವಿದ್ಯುತ್ ಕಳವು ಆರೋಪ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿರುದ್ಧ FIR ದಾಖಲು
1 min readಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ದ ವಿದ್ಯುತ್ ಕಳ್ಳತನ ಮಾಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಜಯನಗರ ಬೆಸ್ಕಾಂ ಜಾಗೃತ ದಳದಿಂದ ಎಫ್‌ಐಆರ್ ದಾಖಲು ಮಾಡಲಾಗಿದೆ.
ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಂಗಳವಾರ (ನ.14) ರಂದು ಅಪರಾಧ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದ್ದು, ಎಇಇ ಪ್ರಶಾಂತ್ ಕುಮಾರ್ ಎನ್ನುವವರು ನೀಡಿರುವ ದೂರಿನ ಅನ್ವಯ ಪೊಲೀಸರು ದೂರು ದಾಖಲಿಸಿಕೊಂಡಿದ್ದು ಮುಂದಿನ ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ.
ಈ ಬಗ್ಗೆ ಹೆಚ್‌ಡಿ ಕುಮಾರಸ್ವಾಮಿ ಏನು ಹೇಳಿದ್ದರು?
ದೀಪಾವಳಿ ಹಬ್ಬಕ್ಕೆ ನನ್ನ ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲು ಖಾಸಗಿ ಡೆಕೋರೇಟರ್ ಒಬ್ಬರಿಗೆ ಹೇಳಲಾಗಿತ್ತು. ಅವರು ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ ಮೇಲೆ ಪಕ್ಕದಲ್ಲಿಯೇ ಇದ್ದ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದು ಪರೀಕ್ಷೆ ಮಾಡಿದ್ದಾರೆ. ಆಗ ನಾನು ಬಿಡದಿಯ ತೋಟದಲ್ಲಿದ್ದೆ. ನಿನ್ನೆ ರಾತ್ರಿ ಮನೆಗೆ ವಾಪಸ್ ಬಂದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ತಕ್ಷಣ ಅದನ್ನು ತೆಗೆಸಿ ಮನೆಯ ಮೀಟರ್ ಬೋರ್ಡ್ ನಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮಾಡಿದ್ದೇನೆ. ಇದು ವಾಸ್ತವ ಸ್ಥಿತಿ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ಈ ಅಚಾತುರ್ಯಕ್ಕೆ ನನ್ನ ವಿಷಾದವಿದೆ. ಬೆಸ್ಕಾಂ ಅಧಿಕಾರಿಗಳು ಬಂದು ಪರೀಕ್ಷೆ ಮಾಡಿ ನೋಟಿಸ್ ನೀಡಲಿ. ದಂಡ ಕಟ್ಟುತ್ತೇನೆ. ಇದನ್ನೇ ಕರ್ನಾಟಕ ಕಾಂಗ್ರೆಸ್ ದೊಡ್ಡದು ಮಾಡಿ ಪ್ರಚಾರ ಗಿಟ್ಟಿಸುವ ಕೆಲಸ ಮಾಡುತ್ತಿದೆ. ಆ ಪಕ್ಷದ ಕ್ಷುಲ್ಲಕ ಮನಃಸ್ಥಿತಿಯ ಬಗ್ಗೆ ನನಗೆ ಮರುಕ ಇದೆ. ನಾನೇನು ರಾಜ್ಯದ ಆಸ್ತಿ ಕಬಳಿಸಿಲ್ಲ. ಕಂಡವರ ಭೂಮಿಗೆ ಬೇಲಿ ಹಾಕಿಲ್ಲ. ಇನ್ನೊಬ್ಬರ ರಕ್ತ ಕುಡಿದು ಧನದಾಹ ತೀರಿಸಿಕೊಂಡಿಲ್ಲ. ಕುಮಾರಸ್ವಾಮಿ ವಿದ್ಯುತ್ ಕಳ್ಳತನ ಮಾಡಿದ್ದಾರೆ, ಬೆಸ್ಕಾಂ ಕ್ರಮ ಕೈಗೊಳ್ಳಲಿ ಎಂದು ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ. ನಾನು ಮನೆಯಲ್ಲೇ ಇದ್ದೇನೆ. ಬೆಸ್ಕಾಂ ಅಧಿಕಾರಿಗಳು ಬರಲಿ. ಅವರ ಯಾವುದೇ ಕ್ರಮಕ್ಕೆ ನಾನು ಸಿದ್ಧನಿದ್ದೇನೆ ಅಂತ ಹೇಳಿದ್ದರು.