ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಕೊನೆಗೂ ಪ್ರಕಟವಾಯಿತು ನಗರಸಭೆ ಮೀಸಲಾತಿ

1 min read

ಕೊನೆಗೂ ಪ್ರಕಟವಾಯಿತು ನಗರಸಭೆ ಮೀಸಲಾತಿ
ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಎಸ್‌ಸಿ
ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಅಧ್ಯಕ್ಷ ಆಯ್ಕೆ

ಅಂತೂ ಇಂತೂ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿದೆ. ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ನಗರಸಭೆ ಆಡಳಿತ ಮಂಡಳಿ ಇಲ್ಲದೆ ಜಿಲ್ಲಾಧಿಕಾರಿಗಳನ್ನು ನೇಮಿಸಲಾಗಿತ್ತು. ಇದರಿಂದ ಕಳೆದ ಒಂದು ವರ್ಷದಿಂದ ನಗರಸಭೆ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿಗಳೇ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗಿದ್ದು, ಇದೀಗ ನೂತನ ಆಡಳಿತ ಮಂಡಳಿ ರಚನೆಯಾಗುವ ಜೊತೆಗೆ ಕುದುರೆ ವ್ಯಾಪಾರವೂ ಆರಂಭವಾಗುವ ಸಾಧ್ಯತೆಗಳಿವೆ.

ಹೌದು, ನಗರಸಭೆ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳುವುದೆಂದರೆ ಅದು ಪ್ರತಿಷ್ಠೆಯ ಪ್ರಶ್ನೆ. ಕಳೆದ 10 ವರ್ಷಗಳ ಕಾಲ ಚಿಕ್ಕಬಳ್ಳಾಪುರ ಶಾಸಕರಾಗಿದ್ದ ಡಾ.ಕೆ. ಸುಧಾಕರ್ ಅವರು ಚಿಕ್ಕಬಳ್ಳಾಪುರ ನಗರಸಭೆಯನ್ನೂ ತಮ್ಮ ವಶಕ್ಕೆ ಪಡೆದು ಮುಕುಟವಿಲ್ಲದ ಮಹಾರಾಜರಂತೆ ಆಡಳಿತ ನಡೆಸುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಸೇರಿದಂತೆ ಚಿಕ್ಕಬಳ್ಳಾಪುರ ನಗರಸಭೆ ಈವರೆಗೂ ಕಂಡು ಕೇಳರಿಯದ ಮಟ್ಟದಲ್ಲಿ ಅನುದಾನ ತಂದು ನಗರದ ಅಭಿವೃದ್ಧಿಯತ್ತ ಗಮನ ಹರಿಸಿದ್ದರು.

ಆದರೆ ಕಳೆದ ವಿಧಾನಸಭಾ ಚುನಾವಣಯೆಲ್ಲಿ ಡಾ.ಕೆ. ಸುಧಾಕರ್ ಅವರು ಸೋತ ಪರಿಣಾಮ ಚಿಕ್ಕಬಳ್ಳಾಪುರ ನಗರಸಭಾ ಸದಸ್ಯರಾಗಿದ್ದವರು, ಡಾ.ಕೆ. ಸುಧಾಕರ್ ಅವರಿಗೆ ಆತ್ಮೀಯರಾಗಿದ್ದವರು ಪಕ್ಷಾಂತರ ಮಾಡುವ ಮಾತುಗಳು ಕೇಳಿಬಂದಿದ್ದವು. ಮುಖ್ಯವಾಗಿ ಸುಧಾಕರ್ ಅವರ ಬಲಬುಜದಂತೆ ಇದ್ದ ನಗರಸಭಾ ಸದಸ್ಯರೊಬ್ಬರು ಹಾಲಿ ಶಾಸಕರನ್ನು ಭೇಟಿಯಾಗುವ ಮೂಲಕ ಸುದ್ದಿಯಾಗಿದ್ದರು. ಇದರಿಂದ ಚಿಕ್ಕಬಳ್ಳಾಪುರ ನಗರಸಭೆ ಕಾಂಗ್ರೆಸ್ ವಶವಾಗಲಿದೆ ಎಂಬ ಲೆಕ್ಕಾಚಾರಗಳು ನಡೆದಿದ್ದವು.

ಆದರೆ ಅದೇ ಸಮಯಕ್ಕೆ ಮೀಸಲಾತಿ ವಿಚಾರದಲ್ಲಿ ಗೊಂದಲವಾದ ಕಾರಣ ಈವರೆಗೂ ನಗರಸಭೆಗೆ ಸಾರಥಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಇದೀಗ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಎಸ್‌ಸಿಗೆ ಮೀಸಲಾಗಿದ್ದು, ಇದೀಗ ನಗರಸಭೆಯಲ್ಲಿ ರಾಜಕೀಯ ಗರಿಗದರಿದೆ. ಮುಖ್ಯವಾಗಿ ವಿಧಾನಸಭೆಯಲ್ಲಿ ಸೋತು, ಲೋಕಸಭೆಯಲ್ಲಿ ಗೆದ್ದು ಬೀಗಿರುವ ಡಾ.ಕೆ. ಸುಧಾಕರ್ ಅವರಿಗೆ ಚಿಕ್ಕಬಳ್ಳಾಪುರ ನಗರಸಭೆ ಉಳಿಸಿಕೊಳ್ಳುವುದು ಪ್ರತಿಷ್ಠೆಯ ವಿಚಾರವಾಗಿದೆ.

ಇನ್ನು ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರದಲ್ಲಿ ಶಸಾಕರಾಗಿ ಆಯ್ಕೆಯಾಗಿರುವ ಪ್ರದೀಪ್ ಈಶ್ವರ್ ಅವರಿಗೂ ನಗರಸಭೆ ಅಧಿಕಾರ ಉಳಿಸಿಕೊಳ್ಳುವುದು ಅನಿವಾರ್ಯ ಎಂಬ ಸ್ಥಿತಿ ಇದೆ. ನಗರಸಭೆ ಅಧಿಕಾರ ಕಳೆದುಕೊಂಡರೆ ಯಾರೇ ಆಗಲೀ ಬಲಹೀನರಾಗಲಿದ್ದು, ನಗರ ವ್ಯಾಪ್ತಿಯಲ್ಲಿ ತಮ್ಮ ಪ್ರಾಬಲ್ಯ ಮೆರೆಯಲು ಸಾಧ್ಯವಾಗುವುದಿಲ್ಲ. ಪ್ರಸ್ತುತ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಕಾಂಗ್ರೆಸ್‌ಗೆ ಪೂರ್ಣ ಬಹುಮತ ಇದೆ. ಆದರೆ ಈ ಹಿಂದೆಯೂ ಬಹುಮತ ಇದ್ದರೂ ಕೆಲ ಕಾಂಗ್ರೆಸ್ ಸದಸ್ಯರು ವಿಪ್ ಉಲ್ಲಂಘಿಸಿ ಬಿಜೆಪಿ ಬೆಂಬಲಿಸಿದ ಇತಿಹಾಸ ಚಿಕ್ಕಬಳ್ಳಾಪುರ ನಗರಸಭೆಗಿದೆ.

ಪ್ರಸ್ತುತ ಚಿಕ್ಕಬಳ್ಳಾಪುರ ನಗರಸಬೆಯಲ್ಲಿ ಬಿಜೆಪಿ 9 ಸದಸ್ಯರನ್ನು ಹೊಂದಿದ್ದರೆ, ಕಾಂಗ್ರೆಸ್ 16 ಸದಸ್ಯರನ್ನು ಹೊಂದಿದೆ. ಜೆಡಿಎಸ್ 2 ಮತ್ತು ಪಕ್ಷೇತರರು ನಾಲ್ಕು ಮಂದಿ ಗೆಲುವು ಸಾಧಿಸಿದ್ದಾರೆ. 31 ಮಂದಿ ಸದಸ್ಯರಿರುವ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಬಹುಮತಕ್ಕೆ 16 ಮಂದಿ ಸದಸ್ಯರ ಬೆಂಬಲದ ಅಗತ್ಯವಿದೆ. ಆದರೆ ಈ ಹಿಂದೆ ಮೊದಲ ಅವಧಿಯ ಅಧ್ಯಕ್ಷರ ಆಯಕೆ ವೇಳೆ ಕಾಂಗ್ರೆಸ್ ಸದಸ್ಯರು ವಿಪ್ ಉಲ್ಲಂಘಿಸಿ ಬಿಜೆಪಿ ಬೆಂಬಲಿಸಿದ ಕಾರಣ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು. ಇದೀಗ ಸಂಸದರಾಗಿ ಡಾ.ಕೆ. ಸುಧಾಕರ್ ಅವರು ಇರುವುದರಿಂದ ಮತ್ತೆ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಕೇಸರಿ ಭಾವುಟ ಹಾರಲಿದೆಯಾ ಇಲ್ಲವೇ ಕೈ ಕಮಾಲ್ ನಡೆಸಲಿದೆಯಾ ಎಂಬ ಕುತೂಹಲ ಮನೆ ಮಾಡಿದೆ.

ಅಧ್ಯಕ್ಷ ಉಳಿವಿಗಾಗಿ ಪ್ರಸ್ತುತ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ತೀವ್ರ ಹಣಾಹಣಿ ನಡೆಯಲಿದ್ದು, ಇದರಲ್ಲಿ ಅಂತಿಮವಾಗಿ ಯಾರು ಗೆದ್ದು ಬೀಗಲಿದ್ದಾರೆ ಎಂಬ ಕುತೂಹಲ ತೀವ್ರವಾಗಿದೆ. ಒಟ್ಟಿನಲ್ಲಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾನದ ಮೀಸಲಾತಿ ಪ್ರಕಟವಾಗುವ ಮೂಲಕ ಮತ್ತೆ ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ಗರಿಗದರಿದ್ದು, ಅಂತಿಮವಾಗಿ ಗೆದ್ದು ಬೀಗುವವರು ಯಾರು ಎಂಬುದನ್ನು ಕಾದು ನೋಡಬೇಕಿದೆ.

 

About The Author

Leave a Reply

Your email address will not be published. Required fields are marked *