ಕೊನೆಗೂ ಎಚ್ಚೆತ್ತ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆ
1 min readಕೊನೆಗೂ ಎಚ್ಚೆತ್ತ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆ
ದರೋಡೆಕೋರರ ಹೆಡೆಮುರಿ ಕಟ್ಟಲು ತಂಡ ರಚನೆ
ಹಾಡ ಹಗಲಿನಲ್ಲಿಯೇ ಮಚ್ಚು ತೋರಿ ದರೋಡೆ
ಚಿಲ್ಲರೆ ಅಂಗಡಿಗಳಿಗೆ ಕನ್ನ ಹಾಕುತ್ತಿರುವ ಖದೀಮರು
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಹಾಡ ಹಗಲಿನಲ್ಲಿಯೇ ಮಚ್ಚು ತೋರಿಸಿ ದರೋಡೆ ಮಾಡುವುದು ಒಂದು ಕಡೆಯಾದರೆ, ಹಿಡಿಯಲು ಬಂದ ಸಾರ್ವಜನಿಕರಿಗೆ ಮಚ್ಚು ತೋರಿಸಿ ಬೆದರಿಕೆ ಹಾಕುತ್ತಿರುವುದು ಮತ್ತೊಂದು ಕಡೆ. ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಜಿಲ್ಲಾ ಪೊಲೀಸ್ ಇಲಾಖೆ ಈವರೆಗೂ ಮೌನವಾಗಿಯೇ ಇತ್ತು. ಆದರೆ ದಿನೇ ದಿನೇ ತೀವ್ರ ಸ್ವರೂಪ ತಾಳುತ್ತಿದ್ದಂತೆ ಎಚ್ಚೆತ್ತಿರುವ ಪೊಲೀಸ್ ಇಲಾಖೆ ಇದೀಗ ವಿಶೇಷ ತಂಡ ರಚನೆ ಮಾಡಿ, ದರೋಡೆಕೋರರ ಹೆಡೆಮುರಿ ಕಟ್ಟಲು ಮುಂದಾಗಿದೆ.
ಹೌದು, ಮೊನ್ನೆ ತಾನೇ, ಮುದ್ದೇನಹಳ್ಳಿ ಸಮೀಪ ಬೈಕಿನಲ್ಲಿ ಬಂದ ಖದೀಮರು ಮಚ್ಚು ತೋರಿಸಿ, ವ್ಯಕ್ತಿಯೊಬ್ಬರಿಂದ ರಾಬರಿ ಮಾಡಿದ್ದರು. ದರೋಡೆ ಮಾಡಿರುವ ಯಾವುದೇ ಭಯ, ಆತಂಕವಿಲ್ಲದ ಖದೀಮರು ನೇರವಾಗಿ ಮುದ್ದೇನಹಳ್ಳಿಯ ನಂದಿನಿ ಪಾರ್ಲರ್ ಬಳಿ ತೆರಳಿ, ಬೈಕ್ ನಿಲ್ಲಿಸಿ, ಟೀ ಕುಡಿದು ಆರಾಮವಾಗಿ ಸಾಗಿದ್ದರು. ಇದೇ ಘಟನೆಯಿಂದ ಅರಿಯಬಹುದು ಅವರು ಎಷ್ಟು ಪಳಗಿದ ಖದೀಮರು ಎಂಬುದನ್ನು. ಯಾವುದೇ ಆರೋಪಿ ಒಂದು ಅಪರಾಧ ಪ್ರಕರಣ ಮಾಡಿದಾಗ ಕೂಡಲೇ ಸ್ಥಳದಿಂದ ಪರಾರಿಯಾಗಲು ಸಾಧ್ಯವಾದಷ್ಟೂ ಪ್ರಯತ್ನಿಸುತ್ತಾನೆ. ಆದರೆ ಈ ಖದೀಮರು ಮಚ್ಚು ತೋರಿಸಿ, ದರೋಡೆ ಮಾಡಿ, ಯಾವುದೇ ಆತಂಕವಿಲ್ಲದೆ ಟೀ ಕುಡಿದು ಹೋಗಿದ್ದಾರೆ ಎಂದರೆ ಇವರು ಫ್ರೋಫೆಷನಲ್ ಖದೀಮರು ಎಂಬುದು ಪಳಗಿದ ಪೊಲೀಸರಿಗೆ ಅರ್ಥವಾಗುವ ವಿಚಾರವಾಗಿದೆ.
ಇಂತಹ ಖದೀಮರ ಹೆಡೆಮುರಿ ಕಟ್ಟಲು ಅನುಭವ ಇರೋ ಪೊಲೀಸರ ತಂಡವೇ ಬೇಕು. ಇವರು ಕಾಣುವಷ್ಟು ಅಮಾಯಕರು ಅಲ್ಲವೇ ಅಲ್ಲ. ಯಾಕೆಂದರೆ ಇವರು ಕೇವಲ ದರೋಡೆಗೆ ಮಾತ್ರ ಸೀಮಿತವಾಗಿರದೆ, ಕೊಲೆ ಮಾಡಲೂ ಹೇಸುವವರಲ್ಲ. ಇದಕ್ಕೆ ನಿದರ್ಶನವೆಂಬ0ತೆ ಇವರನ್ನು ಹಿಡಿಯಲು ಹೋದ ಜನರಿಗೇ ಮಚ್ಚು ತೋರಿಸಿ, ಪರಾರಿಯಾಗಿದ್ದಾರೆ. ಇಂತಹ ಖದೀಮರಿಗೆ ಒಂಟಿಯಾಗಿ ಮಹಿಳೆಯರು, ಅಥವಾ ವ್ಯಕ್ತಿಗಳು ಸಿಕ್ಕಿದ್ದೇ ಆದರೆ ಎಂತಹ ಕೃತ್ಯಕ್ಕೂ ಹೇಸುವವರಲ್ಲ ಎಂಬುದು ಬಹಿರಂಗ ಸತ್ಯ. ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರೂ ಪೊಲೀಸರು ಮಾತ್ರ ಈವರೆಗೆ ಮೌನವಾಗಿಯೇ ಇದ್ದರು.
ಆದರೆ ಮೊನ್ನೆಯ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತಿರುವ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆ ಇದೀಗ ಖದೀಮರ ಹೆಡೆಮುರಿ ಕಟ್ಟಲು ಮುಂದಾಗಿದೆ. ಚಿಕ್ಕಬಳ್ಳಾಪುರ ನಗರ ಸೇರಿದಂತೆ ಹಲವೆಡೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳ್ಳರನ್ನು ಬಂಧಿಸಲು ಪೊಲೀಸರು ವಿಶೇಷ ತಂಡ ರಚಿಸಿ, ಖದೀಮರನ್ನು ಕೆಡವಲು ಬಲೆ ಬೀಸಿದ್ದಾರೆ. ಜಿಲ್ಲೆಯಲ್ಲಿ ಕಳ್ಳರು ಚಿಲ್ಲರೆ ಅಂಗಡಿಗಳಿಗೆ ಕನ್ನ ಹಾಕಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು.
ಇದೇ ವಿಚಾರವಾಗಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಕಳ್ಳರ ಪತ್ತೆಗಾಗಿ ವಿಶೇಷ ತಂಡ ರಚಿಸಿ ಕಳ್ಳರ ಹೆಡೆಮುರಿಕಟ್ಟಲು ಮುಂದಾಗಿದಾರೆ. ಈಗಾಗಲೇ ಪೊಲೀಸರು ಕಳ್ಳತನ ನಡೆದಿರುವ ಸ್ಥಳ ಪರಿಶೀಲನೆ ನಡೆಸಿ, ಸಿಸಿ ಟಿವಿಗಳನ್ನು ಪರಿಶೀಲನೆ ಮಾಡಿ, ಆರೋಪಿಗಳ ಗುರುತು ಪತ್ತೆ ಮಾಡಲು ಮುಂದಾಗಿದ್ದಾರೆ. ಆದರೆ ಈ ಖದೀಮರು ಸ್ಥಳೀಯರೇ ಅಥವಾ ಹೊರಗಿನವರೇ ಎಂಬ ಬಗ್ಗೆ ಇನ್ನೂ ಮಾಹಿತಿ ಇಲ್ಲವಾಗಿದೆ.
ಒಂದು ವೇಳೆ ಅಂತಾರಾಜ್ಯ ಕಳ್ಳರಾಗಿದ್ದರೆ ಅವರು ಇನ್ನೂ ಜಿಲ್ಲೆಯಲ್ಲಿಯೇ ಇದ್ದಾರೆಯೇ, ಹೊರ ರಾಜ್ಯಗಳಿಗೆ ಪರಾರಿಯಾಗಿದ್ದಾರೆಯೇ ಎಂಬುದೂ ನಿಗೂಢವಾಗಿಯೇ ಇದೆ. ಅಂತಾರಾಜ್ಯ ಕಳ್ಳರೊಂದಿಗೆ ಸ್ಥಳೀಯರೂ ಕೈ ಜೋಡಿಸಿರುವ ಗುಮಾನಿಯೂ ಇದೆ. ಯಾಕೆಂದರೆ ಯಾವುದೇ ಕಳ್ಳ ಅಪರಿಚಿತ ಜಾಗದಲ್ಲಿ ಅಷ್ಟು ಸುಲಭವಾಗಿ ಕಳವು ಮಾಡಲು ಸಾಧ್ಯವಿಲ್ಲ. ಸ್ಥಳೀಯರು ಬೆಂಬಲ ಮತ್ತು ಮಾರ್ಗದರ್ಶನ ಇದ್ದಾಗ ಮಾತ್ರ ಯಾವುದೇ ಕಳ್ಳತನ ಮಾಡಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಸರಣಿ ಕಳವು ಪ್ರಕರಣಗಳು ನಡೆಯುತ್ತಿರುವ ಜೊತೆಗೆ ಹಾಡ ಹಗಲಿನಲ್ಲಿಯೇ ಸಾರ್ವಜನಿಕರಿಗೆ ಮಚ್ಚು ತೋರಿಸಿ, ಬೆದರಿಸುವ ಮಟ್ಟಕ್ಕೆ ಕಳ್ಳರು ಮುಂದಾಗಿರುವುದು ಪೊಲೀಸ್ ಇಲಾಖೆಯ ವೈಫಲ್ಯವನ್ನು ತೋರುತ್ತದೆ. ಈ ವಿಚಾರ ಹೆಚ್ಚು ಪ್ರಚಾರ ಪಡೆಯುತ್ತಿದ್ದಂತೆ ಎಚ್ಚೆತ್ತ ಪೊಲೀಸ್ ಇಲಾಖೆ ಇದೀಗ ವಿಶೇಷ ತಂಡ ರಚನೆ ಮಾಡಿದ್ದು, ಈ ತಂಡ ಆದಷ್ಟು ಶೀಘ್ರದಲ್ಲಿ ಖದೀಮರ ಹೆಡೆಮುರಿ ಕಟ್ಟಿ, ಜಿಲ್ಲೆಯ ಜನತೆಯಲ್ಲಿ ಎದುರಾಗಿರುವ ಆತಂಕವನ್ನು ದೂರ ಮಾಡುವ ಜೊತೆಗೆ, ಪೊಲೀಸ್ ಇಲಾಖೆ ಬಲವಾಗಿದೆ ಎಂಬುದನ್ನು ತೋರಬೇಕಾದ ಅಗತ್ಯವಿದೆ.