ನೂರಾರು ಲೀಟರ್ ಹಾಲು ರಸ್ತೆಗೆ ಚೆಲ್ಲಿ ರೈತರ ಪ್ರತಿಭಟನೆ
1 min readಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಮತೀರ್ಥ ಗ್ರಾಮದ ಅನ್ನದಾತರಿಂದ ರಸ್ತೆ ಮೇಲೆ ಹಾಲು ಚೆಲ್ಲುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ಕಲಬುರ್ಗಿ, ಬೀದರ್ – ಯಾದಗಿರಿ ಹಾಲು ಒಕ್ಕೂಟದವರು ಗಡಿ ಭಾಗದ ರೈತರಿಂದ ಹಾಲು ಒಯ್ಯುವುದು ನಿಲ್ಲಿಸಿರುವುದನ್ನು ವಿರೋಧಿಸಿ ರಾಮತೀರ್ಥ ಗ್ರಾಮದ ರೈತರು ನೂರಾರು ಲೀಟರ್ ಹಾಲನ್ನು ರಸ್ತೆಗೆ ಚೆಲ್ಲುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ಧಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಹಾಲು ಪಡೆಯುವುದನ್ನು ನಿಲ್ಲಿಸಲಾಗಿದೆ. ಇದರಿಂದ ರೈತರು ತೀವ್ರ ಸಮಸ್ಯೆ ಎದುರಿಸುತ್ತಿದ್ಧು, ಆರ್ಥಿಕ ಸಂಕಷ್ಟ ಎದುರಾಗಿದೆ. ಇದರಿಂದ ಆಕ್ರೋಶಗೊಂಡ ತಕ್ಷಣ ಗ್ರಾಮದ ರೈತರು ಹಾಲನ್ನು ತೆಗೆದುಕೊಂಡು ಹೋಗಬೇಕೆಂದು ಒಕ್ಕೂಟಕ್ಕೆ ಆಗ್ರಹಿಸಿದರು.
ನಂತರ ಬೀದರ್ ಕಲ್ಬುರ್ಗಿ – ಯಾದಗಿರಿ ಹಾಲು ಒಕ್ಕೂಟದ ನಿರ್ದೇಶಕ ಬಂಡುರಾವ ಕುಲಕರ್ಣಿ, ಅಧಿಕಾರಿ ಶಿವಾನಂದ, ಮೇಲ್ವಿಚಾರಕ ಪ್ರವೀಣ್ ಸಾಗರ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಕುರಿತು ಚರ್ಚಿಸಿದ್ದಾರೆ.
ಊರಲ್ಲಿ ಹಾಲು ಉತ್ಪಾದಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಇನ್ನೂ ಆಗಿಲ್ಲ ಹಾಗಾಗಿ ಹಾಲು ಕೊಂಡೊಯ್ಯುವುದನ್ನು ನಿಲ್ಲಿಸಲಾಗಿದೆ. ಆದ್ರು ತಾತ್ಕಾಲಿಕವಾಗಿ ಹಾಲು ಪಡೆಯಲು ವ್ಯವಸ್ಥೆ ಮಾಡಲಾಗುವುದು, ಶೀಘ್ರವೇ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು ಎಂದು ಒಕ್ಕೂಟದವರು ತಿಳಿಸಿದರು.