ಪ್ರತಿಯೊಬ್ಬರೂ ಹಕ್ಕುಗಳ ಅರಿವು ಹೊಂದಬೇಕು
1 min readಪ್ರತಿಯೊಬ್ಬರೂ ಹಕ್ಕುಗಳ ಅರಿವು ಹೊಂದಬೇಕು
ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ
ಚಿಕ್ಕಬಳ್ಳಾಪುರದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ
ಪ್ರತಿಯೊಬ್ಬರಿಗೂ ಯಾವ ಹಕ್ಕುಗಳಿವೆ ಎಂಬ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಮಾಡಲಾಗುತ್ತಿದೆ. ಇಂತಹ ಕಾರ್ಯಕ್ರಮದ ಸದುಪಯೋಗವನ್ನು ಪ್ರತಿಯೊಬ್ಬರು ಪಡೆಯಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ ಅವರು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾನತಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ ಅವರು, ತಮಗಿರುವ ಹಕ್ಕುಗಳು ಯಾವವು ಎಂಬುದನ್ನು ಅರಿತರೆ ಅವುಗಳನ್ನು ಕಾಪಾಡಿಕೊಳ್ಳುವುದು ಗೊತ್ತಾಗುತ್ತದೆ. ನಮ್ಮ ಹಕ್ಕುಗಳ ಕಾಪಾಡಿಕೊಳ್ಳುವ ಜೊತೆಗೆ ಸಂವಿಧಾನ ನೀಡಿರುವ ಕರ್ತವ್ಯ ಎಲ್ಲರು ಪಾಲಿಸಿದರೆ ಮಾನವ ಹಕ್ಕುಗಳ ಉಲ್ಲಂಘನೆ ನಿಯಂತ್ರಣವಾಗಲಿವೆ ಎಂದರು.
ವಿಶ್ವದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಸಹಜವಾದ ಮಾನವ ಹಕ್ಕುಗಳಿದ್ದು, ಸಮಾಜದಲ್ಲಿ ಕೆಲ ವ್ಯಕ್ತಿಗಳ ಬುದ್ದಿವಂತಿಕೆ, ಆರ್ಥಿಕ ಮತ್ತು ಸಾಮಾಜಿಕ ಬಲ, ಪ್ರಭಾವ ಹಾಗೂ ದರ್ಪ, ದಬ್ಬಾಳಿಕೆಗಳಿಂದ ಅಸಹಾಯಕರು, ದುರ್ಬಲರು ಮಾನವ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಈ ರೀತಿಯ ಪ್ರಕರಣಗಳು ಜಾಗೃತಿಯ ಕೊರತೆಯಿಂದ ಗ್ರಾಮೀಣ ಪ್ರದೇಶಗಳಲ್ಲೇ ಅಧಿಕವಾಗಿ ಕಂಡು ಬರುತ್ತಿವೆ ಎಂದರು.
ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ಬದುಕುವ ಹಕ್ಕಿನ ಜೊತೆಗೆ ಒಂದಿಷ್ಟು ಮೂಲಭೂತ ಹಕ್ಕುಗಳಿವೆ. ಪ್ರತಿಯೊಬ್ಬರಿಗೂ ಅರ್ಹವಾಗಿರುವ ಮೂಲಭೂತ ಸ್ವಾತಂತ್ರಗಳು ಹಾಗೂ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು 2024ರ ಮಾನವ ಹಕ್ಕುಗಳ ದಿನದ ಘೋಷವಾಕ್ಯವಾಗಿದೆ. ಎಲ್ಲರೂ ಜಾಗೃತರಾಗಿ ಸಂಕಲ್ಪ ಮಾಡೋಣ, ಯಾವುದೇ ತಾರತಮ್ಯವಿಲ್ಲದೆ ಎಲ್ಲ ಮಾನವ ಜೀವಿಗಳ ಹಕ್ಕುಗಳನ್ನು ಗೌರವಿಸೋಣ, ನಮ್ಮ ವಿಚಾರಗಳಿಂದ, ಮಾತುಗಳಿಂದ ಹಾಗೂ ನಡವಳಿಕೆಗಳಿಂದ ಬೇರೆಯವರ ಹಕ್ಕುಗಳು ಉಲ್ಲಂಘನೆಯಾಗದ0ತೆ ನಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಮಾತನಾಡಿ, ನಮ್ಮ ಬದುಕನ್ನು ಅರ್ಥಪೂರ್ಣವನ್ನಾಗಿಸಿ ತೃಪ್ತಿದಾಯಕವಾಗುವಂತೆ ಮಾಡುವ ಮೂಲಭೂತ ಅರ್ಹತೆಗಳು ಹಾಗೂ ಸ್ವಾತಂತ್ರö್ಯಗಳನ್ನು ಮಾನವ ಹಕ್ಕುಗಳೆಂದು ಕರೆಯಲಾಗುತ್ತದೆ. ನಿರ್ಭೀತಿಯಿಂದಿರುವುದು. ಕಸಿದುಕೊಳ್ಳುವುದರಿಂದ ಮುಕ್ತಿ ಪಡೆಯುವುದು ಹಾಗೂ ನಮ್ಮ ಎಲ್ಲ ಸಾಮರ್ಥ್ಯಗಳ ಉಪಯೋಗ ಮಾಡಿಕೊಳ್ಳುವುದಕ್ಕೆ ಅವಕಾಶ ಪಡೆಯುವುದು ಮನುಷ್ಯನ ಮೂಲಭೂತ ಆಕಾಂಕ್ಷೆಯಾಗಿದೆ ಎಂದರು.
ಮಾನವ ಹಕ್ಕುಗಳನ್ನು ಕೆಲವೊಮ್ಮೆ ಸಹಜವಾದ ಹಕ್ಕುಗಳು ಎಂದು ಕರೆಯಲಾಗುತ್ತದೆ. ಜೀವಿಸುವ ಹಕ್ಕಿನಲ್ಲಿ ಘನತೆಯಿಂದ ಜೀವಿಸುವ ಹಕ್ಕೂ ಸೇರಿದ್ದು, ತಾರತಮ್ಯವಿಲ್ಲದೆ ಸಮಾನವಾಗಿ ಕಾಣುವ ಹಕ್ಕು, ಚಿತ್ರಹಿಂಸೆಯಿ0ದ ಬಿಡುಗಡೆ, ಬಲವಂತದಿ0ದ ಕೆಲಸ ಮಾಡಿಸುವುದರಿಂದ ಬಿಡುಗಡೆ, ತಪ್ಪಾಗಿ ಬಂಧಿಸುವುದರಿ0ದ ಸ್ವಾತಂತ್ರ, ಮುಕ್ತವಾದ ವಿಚಾರಣೆಯ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಲೋಚಿಸುವ, ಮನಸ್ಸಾಕ್ಷಿಯ, ಧರ್ಮದ, ಏಕಾಂತತೆಯ ಹಕ್ಕುಗಳು, ಮುಕ್ತವಾಗಿ ಮಾತನಾಡುವ ಮತ್ತು ವ್ಯಕ್ತಪಡಿಸುವ ಹಕ್ಕು, ಇತರರೊಡನೆ ಸಹವರ್ತಿಯಾಗಿ, ಸರ್ಕಾರದೊಡನೆ, ಸಾರ್ವಜನಿಕ ಹಾಗೂ ಸಮುದಾಯದ ವಿಷಯಗಳಲ್ಲಿ ಭಾಗವಹಿಸುವ ಹಕ್ಕು ಸೇರಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಹಾಗೂ ಗಣ್ಯರು ಮಾನವ ಹಕ್ಕುಗಳ ಜಾಗೃತಿ ಕುರಿತು ರಾಜ್ಯ ಮಾನವ ಹಕ್ಕುಗಳ ಆಯೋಗ ಹೊರತಂದಿರುವ ಕಿರುಹೊತ್ತಿಗೆ ಹಾಗೂ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ ರವರು ಮಾನವ ಹಕ್ಕುಗಳ ದಿನಾಚರಣೆಯ ಮಹತ್ವವನ್ನು ಸಾರುವ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಉಪ ವಿಭಾಗಧಿಕಾರಿ ಡಿ.ಹೆಚ್.ಅಶ್ವಿನ್, ಜಿಲ್ಲಾ ವಾರ್ತಾಧಿಕಾರಿ ಎಂ. ಜುಂಜಣ್ಣ ಇದ್ದರು.