ಬೆಳಗಾವಿ ರಾಜಕಾರಣದ ಎಫೆಕ್ಟ್, ಲೋಕಸಭಾ ಚುನಾವಣೆ ನಂತರ ಸರ್ಕಾರ ಪತನ: ಆರ್ ಅಶೋಕ್ ಭವಿಷ್ಯ
1 min readರಾಜ್ಯದಲ್ಲಿ ಒಬ್ಬರು ಅಲ್ಲ, ಮೂವರು ಸಿಎಂಗಳಿದ್ದಾರೆ ಮುಂದೆ ಅವರು ಯಾವ ಯಾವ ದಿಕ್ಕಿನಲ್ಲಿ ಹೋಗ್ತಾರೋ ನೋಡೋಣ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ.
ಬೆಂಗಳೂರು: “ಈ ಹಿಂದೆಯೂ ಬೆಳಗಾವಿ ರಾಜಕಾರಣದಿಂದಾಗಿಯೇ ಸರ್ಕಾರ ಪತನವಾಗಿತ್ತು. ಈಗಲೂ ಅಂತಹ ಜ್ವಾಲೆ ಬೆಳಗಾವಿಯಲ್ಲಿ ಕಾಣಿಸಿಕೊಂಡಿದ್ದು, ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಇರುವುದು ಅನುಮಾನ” ಎಂದು ವಿಪಕ್ಷ ನಾಯಕ ಆರ್ ಅಶೋಕ್ ಭವಿಷ್ಯ ನುಡಿದಿದ್ದಾರೆ.
ಮಾಜಿ ಸಿಎಂ ಬೊಮ್ಮಾಯಿ ನಿವಾಸಕ್ಕೆ ನಿರ್ಮಲಾನಂದನಾಥ ಶ್ರೀ ಭೇಟಿ
ಬೆಳಗಾವಿ ಬೆಂಕಿ ಜ್ವಾಲೆಯಾಗಿ ದುಬೈವರೆಗೆ ಹೋಗಿದೆ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಸಚಿವ ಸತೀಶ್ ಜಾರಕಿಹೊಳಿ ಅವರು ಶಾಸಕರನ್ನು ದುಬೈ ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಹಿಂದೆ ಬೆಳಗಾವಿ ರಾಜಕಾರಣದಿಂದ ಸರ್ಕಾರವೇ ಬಿದ್ದು ಹೋಗಿತ್ತು. ಮತ್ತೆ ಬೆಳಗಾವಿ ಬೆಂಕಿ ಜ್ವಾಲೆಯಾಗಿ ದುಬೈವರೆಗೆ ಹೋಗಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಮನೆಗೆ ಹೋದರೂ ಶಾಸಕರನ್ನು ಸತೀಶ್ ಜಾರಕಿಹೊಳಿ ಕರೆದುಕೊಂಡು ಹೋಗಿದ್ದಾರೆ. ಲೋಕಸಭಾ ಚುನಾವಣೆ ನಂತರ ಸರ್ಕಾರ ಇರೋದಿಲ್ಲ. ಕಾಂಗ್ರೆಸ್ನ ಅವನತಿಗೆ ಇದೆಲ್ಲವೂ ಕಾರಣ. ರಾಜ್ಯದಲ್ಲಿ ಒಬ್ಬರು ಅಲ್ಲ, ಮೂವರು ಸಿಎಂ ಗಳಿದ್ದಾರೆ ಮುಂದೆ ಅವರು ಯಾವ ಯಾವ ದಿಕ್ಕಿನಲ್ಲಿ ಹೋಗ್ತಾರೋ ನೋಡೋಣ” ಎಂದು ಹೇಳಿದರು.
“ಕಾಡುಗೋಡಿಯಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದ ತಾಯಿ, ಮಗು ಮೃತಪಟ್ಟಿದ್ದಾರೆ. ಇದಕ್ಕೆ ಯಾರು ಕಾರಣ?. ಅಧಿಕಾರಿಗಳ ಸಸ್ಪೆಂಡ್ ಆದರೆ ಏನು ಉಪಯೋಗ ಇಲ್ಲ. ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು, ನಿಮ್ಮ ಅಚಾತುರ್ಯದಿಂದಲೇ ಈ ಅವಘಡ ಸಂಭವಿಸಿದೆ. ಹಾಗಾಗಿ ಕೂಡಲೇ ಆ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಡಬೇಕು” ಎಂದು ಆಗ್ರಹಿಸಿದರು.
ಬೊಮ್ಮಾಯಿ ಆರೋಗ್ಯ ವಿಚಾರಿಸಿದ ನಿರ್ಮಲಾನಂದನಾಥ ಶ್ರೀ
“ಕಲ್ಯಾಣ ಕರ್ನಾಟಕ ಭಾಗದಿಂದ ಬರ ಅಧ್ಯಯನ ಪ್ರವಾಸ ಮಾಡುತ್ತೇನೆ. ಕಲಬುರಗಿ ಮತ್ತು ಬೀದರ್ ಭಾಗಕ್ಕೆ ಭೇಟಿ ಕೊಡುತ್ತೇನೆ. ರೈತರ ಸಮಸ್ಯೆ ಆಲಿಸುತ್ತೇನೆ. ಮತ್ತೆ ಅಧಿಕಾರಿಗಳಿಗೂ ಸೂಚನೆ ಕೊಡುತ್ತೇನೆ, ಕಾಟಾಚಾರಕ್ಕೆ ಮಂತ್ರಿಗಳು ಹೋಗಿ ಬಂದಿದ್ದಾರೆ. ಇದೆಲ್ಲದರ ಬಗ್ಗೆ ಸರ್ಕಾರಕ್ಕೆ ಕಿವಿ ಹಿಂಡುವ ಕೆಲಸ ಮಾಡುತ್ತೇನೆ. ಸರ್ಕಾರದ ಸಾಧನೆಗಳ ಬಗ್ಗೆ ಸಿಎಂ ಜಾಹೀರಾತು ಕೊಟ್ಟಿದ್ದಾರೆ. ನಿಮ್ಮ ಆರು ತಿಂಗಳಲ್ಲಿ ಮಹಿಳೆಯರಿಗೆ ಎಷ್ಟು ತಿಂಗಳು ಹಣ ಕೊಟ್ಟಿದ್ದೀರಿ?.1 ಕೋಟಿ 25 ಲಕ್ಷ ಜನರಿಗೆ ಬಿಪಿಎಲ್ ಕಾರ್ಡ್ ಕೊಟ್ಟಿದ್ದೀರಾ?. ನೂರಕ್ಕೆ ನೂರರಷ್ಟು ಜನರು ಸಂತೃಪ್ತರಾಗಿದ್ದಾರಾ?. ಅಧಿವೇಶನ ಅಂತಾ ಕರೆಂಟ್ ಸಮಯ ಹೆಚ್ಚು ಮಾಡಿದ್ದೀರಿ. ಅಧಿವೇಶನ ಮುಗಿದ ನಂತರ 2 ಗಂಟೆಗಳು ಅಷ್ಟೇನಾ” ಎಂದು ಪ್ರಶ್ನಿಸಿದರು.
ಬೊಮ್ಮಾಯಿ ಯೋಗಕ್ಷೇಮ ವಿಚಾರಿಸಿದ ನಿರ್ಮಲಾನಂದನಾಥ ಶ್ರೀ: ಇದಕ್ಕೂ ಮುನ್ನ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಮನೆಗೆ ನಿರ್ಮಲಾನಂದನಾಥ ಶ್ರೀಗಳು ಭೇಟಿ ನೀಡಿ, ಬೊಮ್ಮಾಯಿ ಅವರ ಯೋಗಕ್ಷೇಮ ವಿಚಾರಿಸಿದರು. ಈ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಶಾಸಕರಾದ ಗೋಪಾಲಯ್ಯ, ಮುನಿರಾಜು ಉಪಸ್ಥಿತರಿದ್ದರು.