ಮಾಲೂರು ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಡಿಎಸ್‌ಎಸ್ ಆಕ್ರೋಶ
1 min readಮಾಲೂರು ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಡಿಎಸ್‌ಎಸ್ ಆಕ್ರೋಶ
ಭ್ರಷ್ಟಾಚಾರದ ಎಸಗಿರುವ ಆರೋಪ ಮಾಡಿದ ಮುಖಂಡರು
ಕ್ರಮ ಕೈಗೊಳ್ಳದಿದ್ದರೆ ಕಪ್ಪು ಬಟ್ಟೆ ಪ್ರದರ್ಶನ ಎಚ್ಚರಿಕೆ
ಮಾಲೂರು ಪುರಸಭೆ ಮುಖ್ಯಾಧಿಕಾರಿ ಪ್ರದೀಪ್ ಆಡಳಿತಾವಧಿಯಲ್ಲಿ ಕಾಮಗಾರಿ ನಡೆಯದೇ ಹಣ ವರ್ಗಾವಣೆಯಾಗಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ಭ್ರಷ್ಟ ಅಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಎಸ್ ಎಂ ವೆಂಕಟೇಶ್ ಆಗ್ರಹಿಸಿದರು.
ಮಾಲೂರು ಪುರಸಭೆ ಮುಖ್ಯಾಧಿಕಾರಿ ಪ್ರದೀಪ್ ಆಡಳಿತ ವೈಖರಿ ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಸಂಚಾಲಕ ಎಸ್ ಎಂ ವೆಂಕಟೇಶ್ ಮಾತನಾಡಿ, ಭ್ರಷ್ಟ ಪುರಸಭೆ ಮುಖ್ಯಾಧಿಕಾರಿ ಪ್ರದೀಪ್ ವಿರುದ್ಧ ಈ ಹಿಂದೆ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಖಂಡನೀಯ ಎಂದರು.
ಮಾಲೂರು ಪಟ್ಟಣದಲ್ಲಿ ಅನಧಿಕೃತ ಲೇಔಟ್‌ಗಳಲ್ಲಿ ಅಕ್ರಮ ಖಾತೆ, ಸರ್ಕಾರಿ ಸಿಎ ನಿವೇಶನಗಳ ಮಾರಾಟ ಪ್ರದೀಪ್ ಅವಧಿಯಲ್ಲಿ ನಡೆದಿದೆ. ಲಕ್ಷಾಂತರ ರೂಪಾಯಿ ಹಣ ಕೆಲ ವ್ಯಕ್ತಿಗಳಿಗೆ ವರ್ಗಾವಣೆಯಾಗಿದೆ. ಆದರೆ ಈ ಹಣ ಯಾವ ಕಾಮಗಾರಿಗಳಿಗೆ ವರ್ಗಾವಣೆಯಾಗಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಅಲ್ಲದೆ ಕೋಟ್ಯಂತರ ರೂ ವ್ಯಯ ಮಾಡಿ ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಮಾಡಲಾಗಿದೆ. ಆದರೆ ನಿರ್ವಹಣೆ ಮಾಡಲಿಲ್ಲ. ಬೀದಿ ದೀಪಗಳು, ಸ್ವಚ್ಛತೆ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ದೂರಿದರು.
ಭ್ರಷ್ಟ ಅಧಿಕಾರಿ ಪ್ರದೀಪ್ ವಿರುದ್ಧ ವಿಶೇಷ ತನಿಖೆ ನಡೆಸುವಂತೆ ಆಗಸ್ಟ್ 14 ರಂದು ಅಂಬೇಡ್ಕರ್ ಪುತ್ಥಳಿ ಬಳಿ ಉಗ್ರ ಹೋರಾಟ ನಡೆಸಲಾಗುತ್ತಿದ್ದು, ಸಂಬ0ಧ ಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಮನವಿ ಸ್ವೀಕರಿಸಿ ಭ್ರಷ್ಟ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಆಗಸ್ಟ್ 15 ರಂದು ಕಪ್ಪು ಬಟ್ಟೆ ಪ್ರದರ್ಶನ ಮಾಡಲಾಗುದೆಂದು ಎಚ್ಚರಿಕೆ ನೀಡಿದರು. ಈ ವೇಳೆ ನೀಲಕಂಠ ಆಗ್ರಹಾರ ಶ್ಯಾಮಣ್ಣ, ಅಮರೇಶ್ ಮೌರ್ಯ, ಡಿ.ಎನ್.ನಾರಾಯಣಸ್ವಾಮಿ, ಬಂಡಹಟ್ಟಿ ನಾರಾಯಣಸ್ವಾಮಿ, ತಿರುಮಲೇಶ್, ವೆಂಕಟರಾಮ್, ಉಳ್ಳೇರಹಳ್ಳಿ ಮುನಿರಾಜು, ವರದಾಪುರ ನಾರಾಯಣಸ್ವಾಮಿ ಇದ್ದರು,