ದೇವರಸನಹಳ್ಳಿ ಗ್ರಾಪಂಗೆ ಹೊಸಹಳ್ಳಿ ಗ್ರಾಮಸ್ಥರ ಮುತ್ತಿಗೆ
1 min readದೇವರಸನಹಳ್ಳಿ ಗ್ರಾಪಂಗೆ ಹೊಸಹಳ್ಳಿ ಗ್ರಾಮಸ್ಥರ ಮುತ್ತಿಗೆ
ಹೊಸಹಳ್ಳಿ ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಲು ಆಗ್ರಹ
ನಂಜನಗೂಡು ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ, ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ದೇವರಸನಹಳ್ಳಿ ಗ್ರಾಮ ಪಂಚಾಯಿತಿಗೆ ಹೊಸಹಳ್ಳಿ ಗ್ರಾಮದ ಯುವಕರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಗ್ರಾಮಸ್ಥರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ನೀರು ಬಿಡುವಂತೆ ವಾಟರ್‌ಮನ್‌ಗೆ ಹೇಳಿದರೆ ಸ್ಪಂದಿಸುತ್ತಿಲ್ಲ, ಗ್ರಾಮಸ್ಥರಿಗೆ ಏಕವಚನದಲ್ಲಿ ಮಾತನಾಡುತ್ತಿದ್ದು, ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಕಳೆದ ಎರಡು ಮೂರು ವರ್ಷಗಳಿಂದ ವಾಟರ್‌ಮನ್ ಸಿದ್ದರಾಜು ಅವರನ್ನು ಬದಲಾವಣೆ ಮಾಡಿ, ಬೇರೆಯವರನ್ನು ನಿಯೋಜನೆ ಮಾಡುವಂತೆ ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ರು, ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕೂಡಲೇ ವಾಟರ್‌ಮನ್ ಬದಲಾವಣೆ ಮಾಡಬೇಕು. ಪ್ರತಿದಿನ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆ ಮಾಡಬೇಕು. ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ದೇರಸನನಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಬೀದಿ ದೀಪಗಳ ವ್ಯವಸ್ಥೆ ಇಲ್ಲ, ಗ್ರಾಮ ಕತ್ತಲಲ್ಲಿ ಮುಳುಗಿದೆ. ಕಸ ಸಂಗ್ರಹಿಸುವ ವಾಹನ ಕಸವನ್ನು ಗ್ರಾಮದ ಪರಿಶಿಷ್ಟ ಜನಾಂಗದ ಸ್ಮಶಾನ ಮತ್ತು ರಸ್ತೆಯ ಬದಿಯಲ್ಲಿ ಸುರಿಯುತ್ತಿದ್ದಾರೆ ಎಂದು ಆರೋಪಿಸಿದರು.
ಚರಂಡಿಯ ಕೊಳಚೆ ನೀರು ನಿಂತಲ್ಲೇ ನಿಂತಿದೆ, ಚರಂಡಿ ಸ್ವಚ್ಛಗೊಳಿಸಿಲ್ಲ. ಇದರಿಂದ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಬೀತಿಯಲ್ಲಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲ್ಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮದ ರಾಮು, ನಂಜಯ್ಯ, ಜಯರಾಮ್, ವಸಂತರಾಜ್, ಜಯರಾಮ್, ಚೆಲುವಸ್ವಾಮಿ, ಸುಬ್ಬಮ್ಮ, ನಂಜಮ್ಮ, ರಾಜು ಇದ್ದರು.