ಮಸಣ ಕಾರ್ಮಿಕರ ಬೇಡಿಕೆ ಈಡೇರಿಸಲು ಆಗ್ರಹ
1 min readಮಸಣ ಕಾರ್ಮಿಕರ ಬೇಡಿಕೆ ಈಡೇರಿಸಲು ಆಗ್ರಹ
ಬಾಗೇಪಲ್ಲಿ ತಾಪಂ ಕಚೇರಿ ಮುಂದೆ ಬೃಹತ್ ಪ್ರತಿಭಟನೆ
ಅಗತ್ಯ ಮೂಲ ಸೌಕರ್ಯಕ್ಕೆ ಮಸಣ ಕಾರ್ಮಿಕರ ಆಗ್ರಹ
ಬಾಗೇಪಲ್ಲಿ ತಾಲ್ಲೂಕಿನ ರುದ್ರಭೂಮಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಸಣ ಕಾರ್ಮಿಕರನ್ನು ಸರ್ವೇ ಮಾಡುವಂತೆ ಒತ್ತಾಯಿಸಿ ಗುರುವಾರ ಪಟ್ಟಣದ ತಾಲ್ಲೂಕು ಪಂಚಾಯತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಬಾಗೇಪಲ್ಲಿ ತಾಲ್ಲೂಕಿನ ರುದ್ರಭೂಮಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಸಣ ಕಾರ್ಮಿಕರನ್ನು ಸರ್ವೇ ಮಾಡುವಂತೆ ಒತ್ತಾಯಿಸಿ ಗುರುವಾರ ಪಟ್ಟಣದ ತಾಲ್ಲೂಕು ಪಂಚಾಯತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಮಸಣ ಕಾರ್ಮಿಕರ ಸಮಿತಿ ಜಿಲ್ಲಾ ಸಂಚಾಲಕ ಕೆ.ಮುನಿಯಪ್ಪ ಮಾತನಾಡಿ, ವಂಶ ಪರಂಪರೆಯಾಗಿ ಅನೇಕ ವರ್ಷಗಳಿಂದ ಮಸಣ ಕಾಯುವ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಈಗಾಗಲೇ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರುದ್ರಭೂಮಿಯಲ್ಲಿ ಕೆಲಸ ಮಾಡುವ ಮಸಣ ಕಾರ್ಮಿಕರನ್ನು ಸರ್ವೇ ಮಾಡಬೇಕು. ಮಸಣಕ್ಕೆ ಒಬ್ಬರನ್ನು ಮಸಣ ನಿರ್ವಾಹಕರನ್ನಾಗಿ ನೇಮಿಸಿ ಕನಿಷ್ಠ ಕೂಲಿ ಜಾರಿ ಮಾಡಬೇಕು. ಗುಣಿ ತೆಗೆಯುವ ಮತ್ತು ಮುಚ್ಚುವ ಕೆಲಸಕ್ಕೆ ಕನಿಷ್ಠ 3 ಸಾವಿರ ರುಪಾಯಿ ಸರ್ಕಾರವೇ ನೀಡಬೇಕು, ಅಗತ್ಯ ಪರಿಕರಗಳನ್ನು ನೀಡಬೇಕು, ಸುರಕ್ಷತೆ ಸಾಮಾನುಗಳನ್ನು ನೀಡಬೇಕು, ತಿಂಗಳ ವೇತನ 5 ಸಾವಿರ ರುಪಾಯಿ ನೀಡಬೇಕು ಎಂದು ಒತ್ತಾಯಿಸಿದರು.
ರುದ್ರಭೂಮಿಯಲ್ಲಿ ವಿಶ್ರಾಂತಿ ಕೊಠಡಿ ನಿರ್ಮಿಸಬೇಕು. ಬೋರ್ವೆಲ್ ಹಾಕಬೇಕು ಮತ್ತು ಕೈ ಕಾಲು ತೊಳೆಯುವುದಕ್ಕೆ ನೀರಿನ ತೊಟ್ಟಿ ನಿರ್ಮಿಸಬೇಕು. ಮಸಣ ಕಾರ್ಮಿಕರಿಗಾಗಿ ಬಟ್ಟೆಗಳನ್ನು ನೀಡಬೇಕು. ಭವಿಷ್ಯ ನಿಧಿ ಯೋಜನೆ ಜಾರಿಗೊಳಿಸಬೇಕು. 45 ವರ್ಷ ಮೇಲ್ಪಟ್ಟ ಎಲ್ಲ ಕಾರ್ಮಿಕರಿಗೆ ಮಾಸಿಕ 3 ಸಾವಿರ ರೂ. ಪಿಂಚಣಿ ಒದಗಿಸಲು ಕ್ರಮವಹಿಸಬೇಕು. ರುದ್ರಭೂಮಿ ಒತ್ತುವರಿಯಾಗಿರುವುದನ್ನು ತೆರವುಗೊಳಿಸಿ ತಡೆಗೋಡೆ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಮಸಣ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ, ವಿದ್ಯಾರ್ಥಿ ವೇತನ, ಹಾಗೂ ಬ್ಯಾಂಕ್ ಗಳಿಂದ ಸಾಲ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ದಲಿತ ಹಕ್ಕುಗಳ ಜಿಲ್ಲಾ ಅಧ್ಯಕ್ಷ ಕೆ, ನಾಗರಾಜು, ತಾಲೂಕು ಅಧ್ಯಕ್ಷ , ಜಿ, ಕೃಷ್ಣಪ್ಪ ಚಂಚರಾಯನಪಲ್ಲಿ, ಅಶ್ವತ್ಥನಾರಾಯಣ, ಚನ್ನರಾಯಪ್ಪ , ಮುಸ್ತಾ, ನಾರಾಯಣ ಸ್ವಾಮಿ, ರಾಮಾಂಜಿ, ಮಸಣ ಕಾರ್ಮಿಕರ ಮುಖಂಡ ಆದಿನಾರಾಯಣಪ್ಪ, ಕೃಷ್ಣಪ್ಪ, ಅಶ್ವತ್ಥಪ್ಪ, ಮೂರ್ತಿ, ನರಸಿಂಹಪ್ಪ, ವೆಂಕಟರಮಣ, ಸುಬ್ಬರಾಯಪ್ಪ ಇದ್ದರು.