ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹ
1 min readಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹ
ನಂಜನಗೂಡಿನಲ್ಲಿ ರೈತ ಸಂಘ, ಹಸಿರು ಸೇನೆಯಿಂದ ಒತ್ತಾಯ
ರಾಜ್ಯ ಸಭೆೆ ಸದನದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ನಂಜನಗೂಡಿನಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಆಗ್ರಹಿಸಿದರು.
ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದಲ್ಲಿ ಅಮಿತ್ ಶಾ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ರೈತಸಂಘದ ಕಾರ್ಯಕ್ರಮತರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ದೇಶದ ಕೇಂದ್ರ ಗೃಹ ಸಚಿವ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಅಮಿತ್ ಶಾ ಅವರು, ಅಂಬೇಡ್ಕರ್ ಅವರನ್ನು ಸ್ಮರಣೆ ಮಾಡುವ ಬದಲು ದೇವರನ್ನು ಸ್ಮರಣೆ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಹೇಳಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ. ಅಂಬೇಡ್ಕರ್ ಅವರನ್ನು ನಾವು ಒಪ್ಪಿಕೊಂಡು ಅವರು ಬರೆದಿರುವ ಸಂವಿಧಾನ ಅನುಸರಣೆ ಮಾಡದಿದ್ದರೆ ಇಂದು ಹೆಣ್ಣು ಮಕ್ಕಳು ರಾಷ್ಟçಪತಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಆಗಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಅಮಿತ್ ಶಾ ಅವರ ಗೃಹ ಸಚಿವ ಸ್ಥಾನವೂ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಕೊಡುಗೆಯಾಗಿದೆ. ಅಂಬೇಡ್ಕರ್ ಅವರ ಸಂವಿಧಾನ ಇಲ್ಲದಿದ್ದರೆ ಅಮಿತ್ ಶಾ ಅವರು ಕೇಂದ್ರ ಗೃಹ ಸಚಿವರಾಗಲು ಸಾಧ್ಯವಾಗುತ್ತಿರಲಿಲ್ಲ, ನರೇಂದ್ರ ಮೋದಿಯವರು ಪ್ರಧಾನಿಯಾಗಲು ಆಗುತ್ತಿರಲಿಲ್ಲ ಎಂದು ಕಿಡಿಕಾರಿದರು. ಅಂಬೇಡ್ಕರ್ ಅವರನ್ನು ಬಿಟ್ಟು ದೇವರನ್ನು ಸ್ಮರಣೆ ಮಾಡಿದರೆ ಈ ದೇಶದಲ್ಲಿ ಹೆಣ್ಣು ಮಕ್ಕಳು ದೇವದಾಸಿ ಆಗುತ್ತಿದ್ದರು ಎಂದರು.
ಅ0ಬೇಡ್ಕರ್ ಮತ್ತು ಸಂವಿಧಾನ ವಿಚಾರವನ್ನು ಗಂಭೀರವಾಗಿ ಮಾತನಾಡಬೇಕು. ಅಂಬೇಡ್ಕರ್ ಮತ್ತು ಸಂವಿಧಾನ, ಪ್ರಜಾಪ್ರಭತ್ವದ ಬಗ್ಗೆ ನಿಮಗೆ ಗೌರವ ಇಲ್ಲದಿದ್ದರೆ ಸುದ್ದಿಗೋಷ್ಠಿ ಮಾಡಿ ಪತ್ರಿಕೆ ಹೇಳಿಕೆ ಕೊಡಿ, ಅದನ್ನು ಬಿಟ್ಟು ಜವಾಬ್ದಾರಿ ಸ್ಥಾನದಲ್ಲಿದ್ದು ಈ ರೀತಿ ಮಾತನಾಡಬಾರದು. ಕೂಡಲೇ ಸಚಿವ ಸ್ಥಾನದಿಂದ ರಾಜೀನಾಮೆ ನೀಡಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್, ರೈತ ಸಂಘದ ಕೆಲ್ಲೂಪುರ ಮಹದೇವಸ್ವಾಮಿ, ಅಹಲ್ಯ ನಾಗರಾಜು, ಮಹದೇವನಾಯಕ, ಕೃಷ್ಣಪುರ ಮೋಹನ್, ತಿಮ್ಮನಾಯಕ , ಮಮತ ಇದ್ದರು.