ವಿಶ್ವಕಪ್ ಕ್ರಿಕೆಟ್: ಯಾರಿಗೆಲ್ಲ ಸೆಮಿಫೈನಲ್ ಪ್ರವೇಶಿಸುವ ಅವಕಾಶ?
1 min readಶನಿವಾರ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿತು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿದೆ. ಇತ್ತಂಡಗಳ ಗೆಲುವಿನಿಂದ ಇತರೆ ತಂಡಗಳು ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆಗಳ ಕುರಿತ ವಿಶ್ಲೇಷಣೆ ಇಲ್ಲಿದೆ..
ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತ ಅದ್ಭುತ ಪ್ರದರ್ಶನ ತೋರುತ್ತಿದ್ದು ಈಗಾಗಲೇ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ದಕ್ಷಿಣ ಆಫ್ರಿಕಾ ತಂಡವೂ ಸೆಮಿಫೈನಲ್ ಸುತ್ತು ಪ್ರವೇಶಿಸಿದೆ. ಸತತ ಗೆಲುವಿನಿಂದ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಈಗಾಗಲೇ ಏಳು ಪಂದ್ಯಗಳಲ್ಲಿ ಎಲ್ಲಾ ಪಂದ್ಯಗಳನ್ನೂ ಗೆದ್ದಿರುವ ಟೀಮ್ ಇಂಡಿಯಾ, ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈಗಾಗಲೇ ಎರಡೂ ತಂಡಗಳು ಸೆಮಿಫೈನಲ್ ಪ್ರವೇಶಿಸಿರುವುದರಿಂದ ಈ ಗೆಲುವು ಇತ್ತಂಡಗಳಿಗೂ ಮುಖ್ಯ.
ಭಾರತ ಏಳು ಪಂದ್ಯಗಳನ್ನು ಗೆಲ್ಲುವ ಮೂಲಕ 14 ಅಂಕ ಪಡೆದು ಪ್ರಥಮ ಸ್ಥಾನ ಪಡೆದರೆ, ದಕ್ಷಿಣ ಆಫ್ರಿಕಾ ಏಳು ಪಂದ್ಯಗಳ ಪೈಕಿ ಒಂದು ಸೋತು 12 ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಸದ್ಯ ಆಸ್ಟ್ರೇಲಿಯಾ ಇದ್ದು, ಏಳು ಪಂದ್ಯಗಳಲ್ಲಿ 2 ಸೋತು 10 ಅಂಕ ಗಳಿಸಿದೆ. ನಾಲ್ಕನೇ ಸ್ಥಾನದಲ್ಲಿ ನ್ಯೂಜಿಲೆಂಡ್ ಇದ್ದು, 8 ಪಂದ್ಯಗಳಲ್ಲಿ 4 ಸೋತು ಎಂಟು ಅಂಕ ಪಡೆದಿದೆ.
ಶನಿವಾರ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿದೆ. ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧ 21 ರನ್‌ಗಳಿಂದ ಜಯಗಳಿಸಿದ್ದು, ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ 33 ರನ್‌ಗಳಿಂದ ಜಯಿಸಿತು. ಈ ಎರಡು ತಂಡಗಳ ಗೆಲುವಿನಿಂದ ಸೆಮಿಫೈನಲ್ ಗುದ್ದಾಟಕ್ಕೆ ಇತರ ತಂಡಗಳಿಗೂ ಅವಕಾಶ ತೆರೆದುಕೊಂಡಂತಾಗಿದೆ. ಇತರ ತಂಡಗಳು ವಿಶ್ವಕಪ್ ಸೆಮಿಫೈನಲ್ ಸುತ್ತು ಪ್ರವೇಶಿಸುವ ಸಾಧ್ಯತೆಗಳನ್ನು ನೋಡೋಣ.
ಆಸ್ಟ್ರೇಲಿಯಾ (10 ಅಂಕ): ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ತಾನು ಆಡಿರುವ ಏಳು ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿ 10 ಅಂಕ ಗಳಿಸಿದೆ. ಇನ್ನುಳಿದಿರುವ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದರೆ ಸೆಮೀಸ್ಗೆ ಲಗ್ಗೆ ಇಡಲಿದೆ. ಮುಂದಿನ ಪಂದ್ಯಗಳಲ್ಲಿ ಅಫ್ಘಾನಿಸ್ತಾನ್ ಮತ್ತು ಬಾಂಗ್ಲಾದೇಶವನ್ನು ಎದುರಿಸಲಿದ್ದು, ಎರಡೂ ತಂಡವನ್ನು ಮಣಿಸಿ ಸೆಮೀಸ್ ಪ್ರವೇಶಿಸುವ ಆತುರದಲ್ಲಿದೆ. ಒಂದು ವೇಳೆ ಈ ಎರಡು ಪಂದ್ಯಗಳಲ್ಲಿ ಸೋತರೆ, ಇತರ ತಂಡಗಳ ಗೆಲುವಿನ ಆಧಾರದ ಮೇಲೆ ಆಸ್ಟ್ರೇಲಿಯಾ ಸೆಮೀಸ್ ಭವಿಷ್ಯ ನಿರ್ಧಾರವಾಗಲಿದೆ.
ನ್ಯೂಜಿಲೆಂಡ್ (8 ಅಂಕ): ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆಡಿರುವ 8 ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತು 8 ಅಂಕ ಗಳಿಸಿದೆ. ಮುಂದಿನ ಪಂದ್ಯವನ್ನು ಶ್ರೀಲಂಕಾದ ಜೊತೆ ಆಡಲಿದೆ. ಒಂದು ವೇಳೆ ಶ್ರೀಲಂಕಾ ವಿರುದ್ಧ ಗೆದ್ದರೂ ಸೆಮೀಸ್ಗೆ ಲಗ್ಗೆ ಇಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ಸೆಮೀಸ್ಗೆ ಹೋಗಲು ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ತಂಡಗಳು ಉಳಿದ ಪಂದ್ಯಗಳಲ್ಲಿ ಸೋಲಬೇಕಾಗುತ್ತದೆ. ಒಂದು ವೇಳೆ ನ್ಯೂಜಿಲೆಂಡ್ ಸೋತರೆ, ಸೆಮೀಸ್ಗೆ ಪ್ರವೇಶಿಸಲು ಪಾಕಿಸ್ತಾನ, ಅಫ್ಘಾನಿಸ್ತಾನ, ಶ್ರೀಲಂಕಾ, ನೆದರ್ಲೆಂಡ್ಸ್ ತಂಡಗಳು ಬಹಳ ಅಂತರದಿಂದ ಸೋಲಬೇಕಾಗುತ್ತದೆ.
ಪಾಕಿಸ್ತಾನ (8 ಅಂಕ): ಪಾಕಿಸ್ತಾನವು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ತಾನು ಆಡಿರುವ 8 ಪಂದ್ಯಗಳಲ್ಲಿ 4ನ್ನು ಗೆದ್ದು 8 ಅಂಕ ಪಡೆದಿದೆ. ಈ ಮೂಲಕ ನ್ಯೂಜಿಲೆಂಡ್ ಎದುರಿಸುತ್ತಿರುವ ಪರಿಸ್ಥಿತಿಯನ್ನೇ ಪಾಕ್ ತಂಡ ಕೂಡ ಎದುರಿಸುತ್ತಿದೆ. ಪಾಕಿಸ್ತಾನವು ಸೆಮೀಸ್ನಲ್ಲಿ ಸ್ಥಾನ ಪಡೆಯಲು ಇಂಗ್ಲೆಂಡ್ ತಂಡವನ್ನು ಅತಿ ಹೆಚ್ಚು ರನ್ನಿಂದ ಸೋಲಿಸಬೇಕಾಗುತ್ತದೆ. ಪಾಕಿಸ್ತಾನವು ಸದ್ಯ ಕಿವೀಸ್‌ಗಿಂತ ಕಡಿಮೆ ರನ್ ರೇಟ್ ಹೊಂದಿದೆ. ಒಂದು ವೇಳೆ ಪಾಕಿಸ್ತಾನ ತಂಡ ಸೋತರೆ, ಇವರ ಭವಿಷ್ಯ ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಶ್ರೀಲಂಕಾ, ನೆದರ್ಲೆಂಡ್ಸ್ ತಂಡಗಳು ಹೀನಾಯ ಸೋಲನ್ನು ಅವಲಂಬಿಸಿದೆ.
ಅಫ್ಘಾನಿಸ್ತಾನ (8 ಅಂಕ): ಅಫ್ಘಾನಿಸ್ತಾನವು ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಆಡಿರುವ ಏಳು ಪಂದ್ಯಗಳಲ್ಲಿ 4 ಪಂದ್ಯಗಳಲ್ಲಿ ಗೆದ್ದು, 8 ಅಂಕ ಪಡೆದುಕೊಂಡಿದೆ. ಇವರು ಮುಂದಿನ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದರೆ ಸೆಮೀಸ್ ಪ್ರವೇಶಿಸಬಹುದು. ಆದರೆ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸುವುದು ಸವಾಲಿನ ಕೆಲಸ. ಯಾಕೆಂದರೆ ಆಸ್ಟ್ರೇಲಿಯಾ ಕೂಡಾ ಸೆಮೀಸ್ ಪ್ರವೇಶಿಸಲು ಭರ್ಜರಿ ಪೈಪೋಟಿ ನೀಡಲಿದೆ. ಒಂದು ವೇಳೆ ಅಫ್ಘಾನಿಸ್ತಾನ ಒಂದು ಅಥವಾ ಎರಡೂ ಪಂದ್ಯಗಳಲ್ಲಿ ಸೋತರೆ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನವು ಬಹಳ ಅಂತರದಿಂದ ಸೋಲಿಸಲ್ಪಟ್ಟರೆ ಮಾತ್ರ ಸೆಮೀಸ್ ಪ್ರವೇಶಿಸಬಹುದು.
ಶ್ರೀಲಂಕಾ (4 ಅಂಕ): ಶ್ರೀಲಂಕಾ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದು, ಏಳು ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನು ಗೆದ್ದು 4 ಅಂಕ ಪಡೆದಿದೆ. ಸೆಮೀಸ್ ಪ್ರವೇಶಿಸಲು ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಜೊತೆಗೆ ಮೇಲಿನ ತಂಡಗಳು ಉಳಿದ ಪಂದ್ಯಗಳಲ್ಲಿ ಬಹು ಅಂತರದಿಂದ ಸೋತರೆ ಮಾತ್ರ ಅವಕಾಶ ಲಭ್ಯ. ಯಾವುದಾದರೂ ಒಂದು ಪಂದ್ಯದಲ್ಲೂ ಸೋತರೂ ಶ್ರೀಲಂಕಾ ಸೆಮೀಸ್ನಿಂದ ಹೊರಬೀಳಲಿದೆ.
ನೆದರ್ರ್ಲೆಂಡ್ಸ್ (4 ಅಂಕ): ನೆದರ್ಲೆಂಡ್ಸ್ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದು, ಶ್ರೀಲಂಕಾದ ಪರಿಸ್ಥಿತಿಯನ್ನೇ ಎದುರಿಸುತ್ತಿದೆ. ನೆದರ್ಲೆಂಡ್ಸ್ ಆಡಿರುವ 7 ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 4 ಅಂಕಗಳನ್ನು ಪಡೆದುಕೊಂಡಿದೆ. ಸೆಮೀಸ್ಗೆ ಅರ್ಹತೆ ಪಡೆಯಲು ಮುಂದಿನ ಪಂದ್ಯಗಳಾದ ಇಂಗ್ಲೆಂಡ್ ಮತ್ತು ಭಾರತ ವಿರುದ್ಧ ಭರ್ಜರಿ ಗೆಲುವು ದಾಖಲಿಸುವ ಅಗತ್ಯವಿದೆ. ಆದರೆ ಇದು ಅಸಾಧ್ಯ ಎಂದೇ ಹೇಳಲಾಗಿದೆ. ಅದರೊಂದಿಗೆ ಮೇಲಿನ ತಂಡಗಳು ಸೋತರೆ ಸೆಮೀಸ್ ಪ್ರವೇಶಿಸುವ ಸಾಧ್ಯತೆ ಇದೆ. ಒಂದು ಸೋಲಿನಿಂದ ನೆದರ್ಲೆಂಡ್ಸ್ ಸೆಮೀಸ್ ರೇಸ್ನಿಂದ ಹೊರಬೀಳುತ್ತದೆ.