ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಚಿಕ್ಕಬಳ್ಳಾಪುರದಲ್ಲಿ ಪಾಲನೆಯಾಗುತ್ತಿಲ್ಲ ಕೋವಿಡ್ ನಿಯಮ

1 min read

ಚಿಕ್ಕಬಳ್ಳಾಪುರದಲ್ಲಿ ಪಾಲನೆಯಾಗುತ್ತಿಲ್ಲ ಕೋವಿಡ್ ನಿಯಮ  ಬಸ್ಸಿನಲ್ಲಿ ಮಾಸ್ಕ್ ಧರಿಸುತ್ತಿಲ್ಲ, ಸಾಮಾಜಿಕ ಅಂರವಿಲ್ಲ  ಸಾಲು ಸಾಲು ಹಬ್ಬಗಳ ನಡುವೆ ಹೆಚ್ಚಿದ ಕೊರೋನಾ ಆತಂಕ

ಕೊರೋನಾ ವಿಶ್ವದಾದ್ಯಂತ ಮತ್ತೆ ಎಚ್ಚರಿಕೆಯ ಗಂಟೆ ಭಾರಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಭಾರತಕ್ಕೆ ಎಚ್ಚರಿಕೆ ನೀಡಿದೆ. ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯದಲ್ಲಿಯೂ ಕೋವಿಡ್ ಪ್ರಕರಣಗಳು ಅಪಾಯದ ಮುನ್ಸೂಚನೆ ನೀಡುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಕೋವಿಡ್ ಪ್ರಕರಣ ಪತ್ತೆಯಾಗಿರುವುದು ಆತಂಕ ಹೆಚ್ಚಲು ಕಾರಣವಾಗಿದೆ.

ನಿಜ, ಮೂರು ವರ್ಷಗಳ ಹಿಂದೆ ಕೊರೋನಾ ಮಹಾಮಾರಿಯ ಕಾಟಕ್ಕೆ ಇಡೀ ವಿಶ್ವವನ್ನೇ ಆತಂಕಕ್ಕೆ ದೂಡಿತ್ತು. ಆರೋಗ್ಯದ ಮೇಲೆ ಮಾತ್ರವಲ್ಲದೆ ವಿಶ್ವದ ಆರ್ಥಿಕತೆಯ ಮೇಲೂ ಇದರ ಪ್ರಭಾವ ತೀವ್ರವಾಗಿತ್ತು. ಮೂರು ವರ್ಷಗಳ ಹಿಂದೆ ಕೋವಿಡ್ ಸೃಷ್ಟಿದ ಅವಾಂತರಗಳಿಗಳಿಗೆ ಕುಟುಂಬಗಳು ಮಾತ್ರವಲ್ಲ, ದೇಶಗಳೇ ಇನ್ನೂ ಚೇತರಿಸಿಕೊಂಡಿಲ್ಲ. ಆಗಲೇ ಮತ್ತೊಮ್ಮೆ ಅದೇ ಕೊರೋನ ಹೊಸ ರೂಪಾಂತರದಲ್ಲಿ ಮತ್ತೆ ದಾಳಿ ಇಟ್ಟಿದೆ.

ಹೌದು, ಅಂದು ಕೋವಿಡ್ 19 ಹೆಸರಿನಲ್ಲಿ ಇಡೀ ವಿಶ್ವವನ್ನು ಹದಗೆಡಿಸಿದ ಕೊರೋನಾ, ಇದೀಗ ಜೆ1 ರೂಪಾಂತರಿ ತಳಿಯಾಗಿ ಮತ್ತೆ ಲಗ್ಗೆ ಇಟ್ಟಿದೆ. ರಾಜ್ಯದಲ್ಲಿ ಪ್ರತಿನಿತ್ಯ ನೂರಾರು ಪ್ರಕರಣಗಳು ದಾಖಲಾಗುತ್ತಿವೆ. ಮಾತ್ರವಲ್ಲ, ರಾಜ್ಯದಲ್ಲಿ ಈಗಾಗಲೇ ಕೋವಿಡ್ ಸಾವು ಕೂಡಾ ಸಂಭವಿಸಿದೆ. ಜಿಲ್ಲೆಗೂ ಮಹಾ ಮಾರಿ ಕಾಲಿಟ್ಟಿದೆ. ಇದು ಮತ್ತೆ ಬಡವರ ಆತಂಕವನ್ನು ಸಹಜವಾಗಿಯೇ ಹೆಚ್ಚಿಸಿದೆ.

ಮೊನ್ನೆ ತಾನೇ ವೈಕುಂಠ ಏಕಾದಶಿ ಮುಗಿದಿದೆ. ನೆನ್ನೆ ಹನುಮ ಜಯಂತಿ ಆಚರಣೆ ಮಾಡಲಾಗಿದೆ. ಇಂದು ಕ್ರಿಸ್ ಮಸ್, ಒಂದೆರಡು ದಿನದಲ್ಲಿ ಹೊಸ ವರ್ಷವೂ ಆಗಮಿಸುತ್ತಿದೆ. ಸಾಲು ಸಾಲು ಹಬ್ಬಗಳಿಂದಾಗಿ ಜನರು ಗುಂಪಾಗಿ ಸೇರುವುದು ಸಾಮಾನ್ಯವಾಗಿದೆ. ಇನ್ನು ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿರುವ ಕಾರಣ ಸಹಜವಾಗಿಯೇ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.

ಸಾಮಾಜಿಕ ಅಂತರ ಪಾಲಿಸದೆ ದೇವಾಲಯ ಚರ್ಚುಗಳಲ್ಲಿ ಜನರು ಗುಂಪು ಸೇರುತ್ತಿದ್ದಾರೆ. ಬಸ್ ಗಳಲ್ಲಿಯೂ ಮಾಸ್ಕ್, ಸಾಮಾಜಿಕ ಅಂತರವಿಲ್ಲದೆ ಸಂಚಾರ ಮಾಡಲಾಗುತ್ತಿದೆ. ಜಿಲ್ಲೆಗೆ ಮಹಾ ಮಾರಿ ಪ್ರವೇಶ ಮಾಡಿದ್ದರೂ ಜಿಲ್ಲೆಯಲ್ಲಿ ಈವರೆಗೆ ಕೋವಿಡ್ ನಿಯಮ ಪಾಲನೆಯಾಗುವುದಿರಲಿ, ಕನಿಷ್ಠ ಮಾರ್ಗದರ್ಶನವನ್ನೂ ರೂಪಿಸಿಲ್ಲ. ಪರಿಸ್ಥಿತಿ ಕೈ ಮೀರಿದ ಮೇಲೆ ತಲೆ ಮೇಲೆ ಕೈ ಹೊತ್ತು ಕೂರುವುದಕ್ಕಿಂತ ಮೊದಲೇ ಎಚ್ಚರಿಕೆ ಪಾಲನೆ ಮಾಡುವುದು ಒಳಿತು. ಆದರೆ ಈವರೆಗೆ ಆರೋಗ್ಯ ಇಲಾಖೆ ಕೋವಿಡ್ ಸಂಬಂಧ ಗಮನ ಹರಿಸಿದ ಉದಾಹರಣೆಯೇ ಇಲ್ಲ.

ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆ. ಇಲ್ಲಿ ಯಾವುದೇ ಕೈಗಾರಿಕೆಗಳಿಲ್ಲವಾದರೂ ಕೃಷಿಯನ್ನು ನಂಬಿ ಬದುಕುವ ಕೃಷಿಕರೇ ಹೆಚ್ಚಿದ್ದಾರೆ. ಕಳೆದ ಬಾರಿ ಕೋವಿಡ್ ವೇಳೆ ಮಾಡಿದ ಲಾಕ್ ಡೌನ್ ಪರಿಣಾಮ ಲಕ್ಷಾಂತರ ರುಪಾಯಿ ನಷ್ಟವನ್ನು ರೈತರು ಅನುಭವಿಸಿ, ಇನ್ನೂ ಸುಧಾರಿಸಿಕೊಳ್ಳಲಾರದ ಸ್ಥಿತಿ ತಲುಪಿದ್ದಾರೆ. ಮತ್ತೆ ಅಂತದ್ದೆ ಸಮಸ್ಯೆ ಎದುರಾದರೆ ರೈತರ ಸ್ತಿತಿ ಅಧೋಗತಿಯಾಗಲಿದೆ.

ತರಕಾರಿ, ಹೂವಿನ ಮಾರುಕಟ್ಟೆ ಸೇರಿದಂತೆ ಎಪಿಎಂಸಿಯಲ್ಲಿಯೂ ಕೋವಿಡ್ ನಿಯಮ ಪಾಲನೆಯಾಗುತ್ತಿಲ್ಲ. ಇದಕ್ಕೆ ಕಾರಣ ಸಂಬಂಧಿಸಿದ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಳ್ಳದಿರುವುದೇ ಆಗಿದೆ. ಸಮಸ್ಯೆ ಬಂದಾಗ ಪರಿಹಾರ ಹುಡುಕುವುದಕ್ಕಿಂತ, ಸಮಸ್ಯೆ ಉಲ್ಬಣವಾಗದಂತೆ ತಡೆಯುವುದು ಲೇಸು ಎಂಬುದನ್ನು ಆಡಳಿತ ನಡೆಸುತ್ತಿರುವವರು ಅರಿಯಬೇಕಿದೆ.

ಇನ್ನು ಜಿಲ್ಲೆಯಲ್ಲಿ ಸಾಲು ಸಾಲು ಹಬ್ಬಗಳಿಂದ ಮಾತ್ರ ಕೊರೋನಾ ಆತಂಕ ಎದುರಾಗಿಲ್ಲ. ಬದಲಾಗಿ ಜಿಲ್ಲೆಯಲ್ಲಿ ಪ್ರಮುಖ ಪ್ರವಾಸಿ ತಾಣಗಳಿವೆ. ವಿಶ್ವ ಪ್ರಸಿದ್ಧ ನಂದಿಗಿರಿಧಾನ, ಈಶ ಮಂದಿರ, ಕೈವಾರ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ.

ಹೀಗೆ ಬರುವ ಪ್ರವಾಸಿಗರು ಜಿಲ್ಲೆಯ ವಿವಿಧ ಹೊಟೇಲ್ ಸೇರಿದಂತೆ ಹಲವು ಅಂಗಡಿಗಳಿಗೆ ಭೇಟಿ ನೀಡುವುದು, ವ್ಯವಹಾರ ನಡೆಸುವುದು ಸಾಮಾನ್ಯ. ಹೀಗೆ ಬರುತ್ತಿರುವ ಪ್ರವಾಸಿಗರು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುತ್ತಿಲ್ಲ. ವಿವಿದ ಕಡೆಗಳಿಂದ ಬರುವ ಪ್ರವಾಸಿಗರಿಂದ ಕೋವಿಡ್ ಹರಡುವ ಆತಂಕ ಎದುರಾಗಿದೆ.

ಕೋವಿಡ್ ನಿಯಮಗಳನ್ನು ಪಾಲಿಸಿ, ಸೋಕು ಬರದಂತೆ ತಡೆಯಬೇಕಿದ್ದ ಅಧಿಕಾರಿಗಳು ಈವರೆಗೂ ಅತ್ತ ಗಮನವೇ ಹರಿಸಿಲ್ಲ. ಆದರೆ ಸೋಂಕು ಬಂದರೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಪ್ರತ್ಯೇಕ ಕೇಂದ್ರಗಳನ್ನು ಸಿದ್ಧಪಡಿಸಿದ್ದಾರೆ.

ಇಲ್ಲಿ ಕಾಣ್ತಾ ಇದೆಯಲ್ಲ ಹಾಸಿಗೆಗಳ ಸಾಲು ಇವು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಕೊಡಲು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಸಿದ್ಧಪಡಿಸಿರುವ ಹಾಸಿಗೆಗಳು. ಈ ಹಾಸಿಗೆಗಳೊಂದಿಗೆ ವೆಂಟಿಲೇಟರ್ ಗಳನ್ನೂ ಜೋಡಿಸಲಾಗಿದೆ. ರೋಗ ಬಂದ ಮೇಲೆ ಚಿಕಿತ್ಸೆಯ ಅಗತ್ಯವಿದೆ. ಆದರೆ ರೋಗ ಬರುವುದಕ್ಕೂ ಮೊದಲೇ ನಿಯಂತ್ರಣ ಮಾಡಲು ಸರ್ಕಾರ ಮತ್ತು ಅಧಿಕಾರಿಗಳು ಯಾಕೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರವೇ ಇಲ್ಲವಾಗಿದೆ.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ವಿಚಾರದಲ್ಲಿ ನೂರಾರು ಕೋಟಿ ಅಕ್ರಮ ನಡೆದಿದೆ ಎಂಬ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡಿದ್ದರು. ಆದರೆ ಈಗ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ತಡ ಮಾಡಿ, ಸೋಂಕು ತೀವ್ರವಾಗುವವರೆಗೂ ಕಾದು ನೋಡುವ ತಂತ್ರಕ್ಕೆ ಸರ್ಕಾರ ಮೊರೆ ಹೋಗಿದೆಯಾ? ಗೊತ್ತಿಲ್ಲ.

ಇನ್ನು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮತ್ತು ಮಾಜಿ ಸಂಸದ ವೀರಪ್ಪ ಮೊಯ್ಲಿ ಅವರು ಇಂದು ನಡೆದ ಕ್ರಿಸ್ಮಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಚರ್ಚುಗಳಲ್ಲಿ ಭಾಗವಹಿಸಿದವರು ಯಾರೂ ಮಾಸ್ಕ್ ಧರಿಸಿಲ್ಲ. ಆದರೆ ಮಾಜಿ ಸಂಸದರು ಮತ್ತು ಶಾಸಕರೂ ಮಾಸ್ಕ್ ಧರಿಸದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು.

ಒಟ್ಟಿನಲ್ಲಿ ಕೋವಿಡ್ ನಿಯಮ ಪಾಲನೆಯಾಗಿ ಜಿಲ್ಲೆಯಲ್ಲಿ ಮತ್ತೆ ಇಂತಹ ಸಮಸ್ಯೆ ತಲೆ ಎತ್ತದಂತೆ ಜಾಗೃತಿ ಮೂಡಿಸುವ ಕೆಲಸವಾಗಲಿ, ಮತ್ತೆ ಲಾಕ್ ಡೌನ್ ನಂತಹ ಸಮಸ್ಯೆ ಎದುರಾಗದಿರಲಿ ಎಂದು ಹಾರೈಸೋಣ.

About The Author

Leave a Reply

Your email address will not be published. Required fields are marked *