ಮಂಗಳವಾರ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಲೇಪಾಕ್ಷಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ವೀರಭದ್ರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಜೊತೆಗೆ ದೇವಾಲ ವೀಕ್ಷಣೆ ಮಾಡಿದರು.
ರಾಮಾಯಣಕ್ಕೂ ಲೇಪಾಕ್ಷಿ ದೇವಾಲಯಕ್ಕೂ ವಿಶೇಷ ಸಂಬಂಧವಿದೆ. ರಾಮ ಅರಣ್ಯವಾಸದಲ್ಲಿದ್ದ ವೇಳೆ ಚಿನ್ನದ ಜಿಂಕೆ ವೇ಼ಷದಲ್ಲಿ ಬಂದ ಮಾಯಾವಿ ಮಾರೀಚ ರಾಮನನ್ನು ಪರ್ಣಕುಟೀರದಿಂದ ದೂರ ಕರೆದೊಯ್ಯುತ್ತಾನೆ. ಅದೇ ಸಂದರ್ಭದಲ್ಲಿ ಕುಟೀರಕ್ಕೆ ಬಂದ ರಾವಣ ಭಿಕ್ಷೆ ಪಡೆಯುವ ನೆಪದಲ್ಲಿ ಸೀತೆಯನ್ನು ಅಪಹರಿಸುತ್ತಾನೆ. ಹಾಗೆ ಸೀತೆಯೊಂದಿಗೆ ಗಗನಯಾನಿಯಾಗಿ ಸಾಗುತ್ತಿದ್ದ ರಾವಣನನ್ನು ಕಂಡ ಜಟಾಯು ರಾವಣನ ಮೇಲೆ ಯುದ್ಧ ಸಾರುತ್ತಾನೆ. ಯುದ್ಧದಲ್ಲಿ ಮೋಸದಿಂದ ರಾವಣ ಜಟಾಯುವಿನ ಎರಡೂ ರೆಕ್ಕೆಗಳನ್ನು ಕತ್ತರಿಸುತ್ತಾನೆ. ಹಾಗೆ ರೆಕ್ಕೆ ಕಳೆದಿಕೊಂಡ ಜಾಟಯು ನೆಲಕ್ಕೆ ಉರುಳಿದ ಜಾಗವೇ ಲೇಪಾಕ್ಷಿ.
ಲೇ ಪಕ್ಷಿ ಎಂಬುದು ತೆಲುಗು ಪದವಾಗಿದ್ದು, ಮಾರೀಚನ ಸಂಹಾರದ ನಂತರ ಸೀತೆಯ ಹುಡುಕಾಟದಲ್ಲಿ ಅರಣ್ಯದಲ್ಲಿ ಬಂದ ರಾಮನಿಗೆ ರೆಕ್ಕೆ ಕಳೆದುಕೊಂಡು ನರಳಾಡುತ್ತಿರುವ ಜಟಾಯು ಕಾಣುತ್ತಾನೆ. ಆಗ ಜಟಾಯುವಿನಿಂದ ಸೀತೆಯನ್ನು ಅಪಹರಿಸಿರುವುದು ರಾವಣ ಎಂಬ ವಿಷಯ ಮೊದಲ ಬಾರಿಗೆ ರಾಮನಿಗೆ ತಿಳಿಯುತ್ತದೆ. ವಿಷಯ ತಿಳಿಸಿದ ಜಟಾಯು ನರಳಾಟ ಕಂಟ ರಾಮ ಲೇ ಪಕ್ಷಿ ಎಂದು ಕರೆದನಂತೆ. ಅಂದರೆ ಎದ್ದು ಬಾ ಪಕ್ಷಿ ಎಂದು. ಹಾಗೆ ಜಾಟಾಯುವನ್ನು ಲೇ ಪಕ್ಷಿ ಎಂದು ಕರೆದ ಜಾಗ ಕಾಲ ಕ್ರಮೇಣ ಲೇಪಾಕ್ಷಿ ಯಾಗಿ ಪ್ರಸಿದ್ಧಿ ಪಡೆದಿದೆ.
ರಾಮಾಯಣದೊಂದಿಗೆ ನೇರ ಸಂಪರ್ಕ ಇರುವ ಲೇಪಾಕ್ಷಿ ಗ್ರಾಮದಲ್ಲಿ ವೀರಭದ್ರ ಸ್ವಾಮಿ ದೇವಾಲಯ ನಿರ್ಮಿಸಲಾಗಿದೆ. ಈ ದೇವಾಲಯವನ್ನು ಜಕಣಾಚಾರಿ ನಿರ್ಮಿಸಿದರು ಎಂಬ ಪ್ರತೀತಿ ಇದೆ. ರಾಮಾಯಣದ ನೆನಪಿಗಾಗಿ ಇಲ್ಲಿ ಬೃಹತ್ ಜಟಾಯು ಪ್ರತಿಮೆ ನಿರ್ಮಿಸಲಾಗಿದೆ. ಇಂತಹ ಪುರಾಣ ಪ್ರಸಿದ್ಧ ಜಾಗಕ್ಕೆ ಪ್ರಧಾನಿ ನರೇಂದ್ರಮೋದಿ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕಟ್ಟುನಿಟ್ಟಿನ ಭದ್ರತೆಯಲ್ಲಿ ವೀರಭದ್ರಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿನ ಪ್ರಧಾನ ಅರ್ಚಕರಿಂದ ದೇವಾಲಯದ ಇತಿಹಾಸ ಕೇಳಿ ಪಡೆದಿದ್ದಾರೆ.
ಅಲ್ಲದೆ ದೇಗುಲದ ಪ್ರತಿ ಕಂಬ ಮತ್ತು ಕಟ್ಟಡಗಳ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ದೇವಾಲಯದಲ್ಲಿಯೇ ಕಳೆದಿದ್ದು ವಿಶೇಷವಾಗಿತ್ತು.
ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು, ಈ ಕಾರ್ಯಕ್ರಮಕ್ಕೂ ಮುನ್ನವೇ ಮೋದಿ ಅವರು ರಾಮಾಯಣದ ಸಂಪರ್ಕವಿರುವ ಪುರಾಣ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿಗಳ ಭೇಟಿಯಿಂದಾಗಿ ಆ ಪ್ರದೇಶಗಳು ಇನ್ನಷ್ಟು ಜನಪ್ರಿಯವಾಗಿ ಪ್ರಚಾರ ಪಡೆದು ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ಮೂಲಕ ಆ ಪ್ರದೇಶಗಳು ಪ್ರವಾಸಿ ತಾಣಗಳಾಗಿ ಪ್ರಸಿದ್ಧಿ ಪಡೆಯಬೇಕು ಎಂಬುದು ಪ್ರಧಾನಿಗಳ ಭೇಟಿಯ ಹಿಂದಿನ ರಹಸ್ಯವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಯೋಧ್ಯೆ ರಾಮಮಂದಿರ ಉದ್ಘಧಾಟನೆಗೆ ಕೇವಲ ಇನ್ನು 6 ದಿನ ಮಾತ್ರ ಬಾಕಿ ಉಳಿದಿದ್ದು, ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಮಯಣದಲ್ಲಿ ಉಲ್ಲೇಖವಾಗಿರುವ ಐತಿಹಾಸಿಕ ಲೇಪಾಕ್ಷಿಯ ವೀರಭದ್ರ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಅನಂತಪುರ: ಅಯೋಧ್ಯೆ ರಾಮಮಂದಿರ ಉದ್ಘಧಾಟನೆಗೆ ಕೇವಲ ಇನ್ನು 6 ದಿನ ಮಾತ್ರ ಬಾಕಿ ಉಳಿದಿದ್ದು, ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಮಯಣದಲ್ಲಿ ಉಲ್ಲೇಖವಾಗಿರುವ ಐತಿಹಾಸಿಕ ಲೇಪಾಕ್ಷಿಯ ವೀರಭದ್ರ ದೇಗುಲಕ್ಕೆ ಭೇಟಿ ನೀಡಿದ್ದಾರೆ.