ಮುಂದುವರಿದ ಹೆದ್ದಾರಿ ಪ್ರಾಧಿಕಾರದ ಅವಾಂತರಗಳು
1 min readಮುಂದುವರಿದ ಹೆದ್ದಾರಿ ಪ್ರಾಧಿಕಾರದ ಅವಾಂತರಗಳು
ಎ0ಜಿ ರಸ್ತೆಯಲ್ಲಿ ಒಡೆದಿದ್ದ ಪೈಪ್ ಲೈನ್ ದುರಸ್ತಿ
ತಿಪ್ಪೇನಹಳ್ಳಿ ಪೈಪ್‌ಲೈನ್ ಇನ್ನೂ ದುರಸ್ತಿ ಇಲ್ಲ
ನಗರಸಭೆ, ಹೆದ್ದಾರಿ ಪ್ರಾಧಿಕಾರದ ನಡುವೆ ಸಮನ್ವಯ ಕೊರತೆ
ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆಯೇ, ಸ್ಥಳೀಯ ನಗರಸಭೆಯೊಂದಿಗೆ ಯಾವುದೇ ಮಾಹಿತಿ ವಿನಿಮಯ ಮಾಡಿಕೊಳ್ಳದೆ ತಮಗೆ ಇಷ್ಟ ಬಂದ ರೀತಿಯಲ್ಲಿ ಕಾಮಗಾರಿ ನಡೆಸುತ್ತಿದ್ದಾರೆಯೇ, ಇದರಿಂದಲೇ ನಾಗರಿಕರಿಗೆ ತೊಂದರೆಗಳು ಎದುರಾಗುತ್ತಿವೇ, ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ನೀವು ಈ ಸ್ಟೋರಿ ನೋಡಲೇಬೇಕು.
ಹೌದು, ಅತ್ಯಂತ ಗುಣಮಟ್ಟದ ರಸ್ತೆಯನ್ನು ನಗರದಲ್ಲಿ ನಿರ್ಮಿಸುವ ಮೂಲಕ ಇತಿಹಾಸ ಸೃಷ್ಟಿ ಮಾಡಲಾಗುತ್ತದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಹಿಂದೆ ಮಾಧ್ಯಮದ ಮುಂದೆ ಹೇಳಿದ್ದರು. ಆದರೆ ಪ್ರಸ್ತುತ ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿ ನೋಡಿದರೆ ಅವರು ಹೇಳಿದ್ದು ಕೇವಲ ಮಾತುಗಳು, ಅವು ಕೃತಿಗೆ ಇಳಿದಿಲ್ಲ ಎಂಬುದು ಅರಿವಾಗಲಿದೆ. ಯಾಕೆ ಅಂತೀರಾ, ಚರಂಡಿ, ವಿದ್ಯುತ್ ಕಂಬ ಸೇರಿದಂತೆ ಎಲ್ಲ ರೀತಿಯಲ್ಲಿಯೂ ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ ಎಂಬ ಆರೋಪಗಳು ತೀವ್ರವಾಗಿಯೇ ಕೇಳಿಬರುತ್ತಿವೆ.
ರಾಷ್ಟಿಯ ಹೆದ್ದಾರಿ 234ನ್ನು ಉತ್ತಮ ರೀತಿಯಲ್ಲಿ ನಿರ್ಮಿಸುವ ಭರವಸೆ ನೀಡಿದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದೀಗ ಕಳಪೆ ಗುಣಮಟ್ಟದ ಕಾಮಗಾರಿ ನಡೆಸುತ್ತಿರುವ ಆರೋಪಗಳು ದಿನೇ ದಿನೇ ತೀವ್ರವಾಗುತ್ತಿವೆ. ಇನ್ನು ಸ್ವತಹ ನಗರಸಭೆ ಉಪಾಧ್ಯಕ್ಷರೇ ಹೆದ್ದಾರಿ ಪ್ರಾಧಿಕಾರದ ನಡವಳಿಕೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಗುಣಮಟ್ಟದ ಕಾಮಗಾರಿ ನಡೆಸಲು ಹೆದ್ದಾರಿ ಪ್ರಾಧಿಕಾರದವರು ಮುಂದಾಗದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಕಳೆದ ನಾಲ್ಕು ತಿಂಗಳ ಹಿಂದೆ ಜಕ್ಕಲಮಡಗು ಪೈಪ್‌ಲೈನ್ ಒಡೆದಿದ್ದರೂ ಈವರೆಗೆ ದುರಸ್ತಿ ಮಾಡಲು ಮುಂದಾಗದ ಹೆದ್ದಾರಿ ಪ್ರಾಧಿಕಾರದ ಕ್ರಮಕ್ಕೆ ನಾಗರಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಚರಂಡಿ ತ್ಯಾಜ್ಯ ಜಕ್ಕಲಮಡಗು ಪೈಪ್‌ಲೈನ್‌ಗೆ ಸೇರಿ, ಅದೇ ತ್ಯಾಜ್ಯ ಮಿಶ್ರಿತ ನೀರು ನಗರದ ಜನತೆ ಸೇವಿಸುವಂತಾಗಿದೆ. ಪದೇ ಪದೇ ಮನವಿ ಮಾಡಿದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಪಂಧಿಸುತ್ತಿಲ್ಲ ಎಂಬುದು ಒಂದು ಆರೋಪವಾದರೆ, ಎಂಜಿ ರಸ್ತೆಯ ದರ್ಗಾ ಮೊಹಲ್ಲಾ ಮುಂದೆ ಪೈಪ್‌ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲು ಮಾಡುವ ಜೊತೆಗೆ ಕಳೆದ ಮೂರು ದಿನಗಳಿಂದ ನಗರದ ಜನತೆಗೆ ನೀರಿಲ್ಲದೆ ಮಾಡಿದ ಪ್ರಾಧಿಕಾರದ ಕ್ರಮಕ್ಕೆ ನಗರಸಭೆ ಉಪಾಧ್ಯಕ್ಷ ನಾಗರಾಜ್ ಕಿಡಿ ಕಾರಿದ್ದಾರೆ.
ನಗರ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸುವ ವೇಳೆ ನಗರಸಭೆ ಎಂಜಿನಿಯರ್‌ಗಳನ್ನು ಮುಂದಿಟ್ಟುಕೊ0ಡು ಕಾಮಗಾರಿ ನಡೆಸಬೇಕಿದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಗರಸಭೆಗೆ ಮಾಹಿತಿಯನ್ನೇ ನೀಡದೆ ತಮಗೆ ಇಷ್ಟ ಬಂದ ರೀತಿಯಲ್ಲಿ ಕಾಮಗಾರಿ ನಡೆಸುತ್ತಿರುವ ಪರಿಣಾಮ ದರ್ಗಾ ಮಹಲ್ಲಾ ಮುಂದೆ ಪೈಪ್‌ಲೈನ್ ಒಡೆದು, ನೀರು ಪೋಲಾಗಿದೆ. ಸಾಲದೆಂಬ0ತೆ ಮೂರು ದಿನಗಳಿಂದ ನಾಗರಿಕರಿಗೆ ನೀರು ನೀಡಲು ಸಾಧ್ಯವಾಗಿಲ್ಲ. ಈ ಹಿಂದೆ ಸಾಮಾನ್ಯ ಸಭೆಗೆ ಬರುವಂತೆ ಹೆದ್ದಾರಿ ಪ್ರಾಧಿಕಾರಿದ ಅಧಿಕರಿಗಳಿಗೆ ಪತ್ರ ಬರೆದಿದ್ದರೂ ಸಭೆಗೆ ಬಂದಿಲ್ಲ. ಶೀಘ್ರದಲ್ಲಿಯೇ ಮತ್ತೊಂದು ಸಭೆ ಕರೆದಿದ್ದು, ಆ ಸಭೆಗಾದರೂ ಬಂದು ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಬೇಕಿಂದು ನಾಗರಾಜ್ ಸಲಹೆ ನೀಡಿದ್ದಾರೆ.
ಇನ್ನು ಪ್ರಸ್ತುತ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ಚರಂಡಿ ನಿರ್ಮಾಣ ಮಾಡುತ್ತಿದ್ದು, ಈ ಚರಂಡಿಯ ನಂತರ ಎರಡು ಮೀಟರ್ ಫುಟ್‌ಪಾತ್ ನಿರ್ಮಿಸುವ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈವರೆಗೆ ಯಾರಿಗೂ ಮಾಹಿತಿ ನೀಡಿಲ್ಲ. ಇದರಿಂದ ಕಟ್ಟಡಗಳ ಮಾಲೀಕರು ಚರಂಡಿವರೆಗೂ ತಮ್ಮ ಕಟ್ಟಡಗಳನ್ನು ನಿರ್ಮಿಸಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಕಟ್ಟಡ ಒಡೆಯಲು ಬಿಡುತ್ತಾರೆಯೇ ಎಂಬ ಪ್ರಶ್ನೆಗೆ ಯಾರಿಂದಲೂ ಉತ್ತರ ಇಲ್ಲವಾಗಿದೆ. ಅಲ್ಲದೆ ಪೈಪ್ ಲೈನ್ ಮತ್ತು ಯುಜಿಡಿ ಲೈನ್ ಸ್ಥಳಾಂತರ ಮಾಡಿದ ನಂತರ ಕಾಮಗಾರಿ ಆರಂಭಿಸಬೇಕಿತ್ತು. ಹಾಗೆ ಮಾಡದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪೈಪ್ ಲೈನ್ ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ ಎಂಬುದು ಉಪಾಧ್ಯಕ್ಷರ ಮತ್ತೊಂದು ಆರೋಪವಾಗಿದೆ.
ಇನ್ನು ವಿದ್ಯುತ್ ಕಂಬಗಳು ನೇರವಾಗಿ ಹಾಕಿಲ್ಲ, ಚರಂಡಿಯೂ ನೇರವಾಗಿ ನಿರ್ಮಾಣ ಮಾಡುತ್ತಿಲ್ಲ, ಇವೆಲ್ಲಕ್ಕೂ ಯಾರ ಕುಮ್ಮಕ್ಕಿದೆ ಎಂದು ಪ್ರಶ್ನಿಸಿರುವ ನಾಗರಾಜ್, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ ಮುಂದುವರಿದಲ್ಲಿ ಅದಕ್ಕೆ ಅವರು ತಕ್ಕ ಉತೇತರ ನೀಡಬೇಕಾಗದುತ್ತದೆ ಎಂದು ಎಚಚ್ರಿಕೆ ನೀಡಿದ್ದಾರೆ. ಈಗಲಾದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಗರಸಭೆಯೊಂದಿಗೆ ಸಮನ್ವಯತೆ ಸಾಧಿಸಿ, ನಾಗರಿಕರಿಗೆ ತೊಂದರೆಯಾಗದ ರೀತಿಯಲ್ಲಿ ಗುಣಟ್ಟದ ಕಾಮಗಾರಿ ನಡೆಸಲು ಮುಂದಾಗುವರೇ ಎಂಬುದನ್ನು ಕಾದು ನೋಡಬೇಕಿದೆ.